


ಕಳಸ ಲೈವ್ ವರದಿ
ಸ್ಥಳೀಯ ಕಳಸ ಕೆ.ಪಿ.ಎಸ್. (ಕರ್ನಾಟಕ ಪಬ್ಲಿಕ್ ಸ್ಕೂಲ್) ಶಾಲೆಯ ವಿದ್ಯಾರ್ಥಿಗಳು ಕಳಸ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಶೈಕ್ಷಣಿಕ ಭೇಟಿ ನೀಡಿ, ಸಂಘದ ಕಚಗಾನೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಡಿಕೆ ಮತ್ತು ಕಾಫಿ ಸಂಸ್ಕರಣಾ ಘಟಕದ ಕಾರ್ಯಚಟುವಟಿಕೆಗಳನ್ನು ವೀಕ್ಷಿಸಿದರು.
ವಿದ್ಯಾರ್ಥಿಗಳು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಕಾಫಿ ಮತ್ತು ಅಡಿಕೆಯನ್ನು ಕೊಯ್ಲಿನ ನಂತರ ಹೇಗೆ ಸಂಸ್ಕರಿಸಲಾಗುತ್ತದೆ ಎಂಬುದನ್ನು ಹತ್ತಿರದಿಂದ ವೀಕ್ಷಿಸಿದರು. ಸಂಘದ ಅಧ್ಯಕ್ಷರಾದ ಶ್ರೀ ಜಿ. ಕೆ. ಮಂಜಪ್ಪಯ್ಯ ಅವರು ವಿದ್ಯಾರ್ಥಿಗಳಿಗೆ ಅಡಿಕೆಯನ್ನು ಸುಲಿಯುವುದು, ಬೇಯಿಸುವುದು, ಒಣಗಿಸುವುದು ಮತ್ತು ಗುಣಮಟ್ಟಕ್ಕೆ ಅನುಗುಣವಾಗಿ ವರ್ಗೀಕರಣ ಮಾಡುವ ಹಂತಗಳ ಬಗ್ಗೆ ವಿವರಿಸಿದರು. ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಪಡೆಯಲು ವೈಜ್ಞಾನಿಕ ಸಂಸ್ಕರಣೆ ಎಷ್ಟು ಮುಖ್ಯ ಎಂಬುದನ್ನು ತಿಳಿಸಿಕೊಟ್ಟರು.
ಕಾಫಿ ಹಣ್ಣನ್ನು ಪಲ್ಪಿಂಗ್ ಮಾಡುವುದು, ಒಣಗಿಸುವುದು ಮತ್ತು ಹಸಿರು ಕಾಫಿ ಬೀಜಗಳನ್ನು ಬೇರ್ಪಡಿಸುವ ತಾಂತ್ರಿಕ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ನೀಡಿದರು.
ಸಹಕಾರಿ ಸಂಘ ಕೇವಲ ಸಾಲ ನೀಡುವುದಷ್ಟೇ ಅಲ್ಲದೆ, ರೈತರ ಬೆಳೆಗಳಿಗೆ ಮೌಲ್ಯವರ್ಧನೆ ಮಾಡುವ ಮೂಲಕ ರೈತರ ಆರ್ಥಿಕ ಸಬಲೀಕರಣಕ್ಕೆ ಸಂಘವು ಹೇಗೆ ಶ್ರಮಿಸುತ್ತಿದೆ ಎಂಬುದನ್ನು ವಿದ್ಯಾರ್ಥಿಗಳು ಮನಗಂಡರು. ಈ ಭೇಟಿಯು ವಿದ್ಯಾರ್ಥಿಗಳಿಗೆ ಕೃಷಿ ಮತ್ತು ಸಹಕಾರ ಕ್ಷೇತ್ರದ ಪ್ರಾಯೋಗಿಕ ಅರಿವು ಮೂಡಿಸುವಲ್ಲಿ ಯಶಸ್ವಿಯಾಯಿತು
ವಿದ್ಯಾರ್ಥಿಗಳಿಗೆ ಉಪಯುಕ್ತ ಮಾಹಿತಿ ನೀಡಿ, ಕೃಷಿ ಆಧಾರಿತ ಉದ್ದಿಮೆಗಳ ಬಗ್ಗೆ ಆಸಕ್ತಿ ಮೂಡಿಸಿದ ಸಂಘದ ಅಧ್ಯಕ್ಷರಾದ ಶ್ರೀ ಜಿ. ಕೆ. ಮಂಜಪ್ಪಯ್ಯ ಅವರನ್ನು ಕೆ.ಪಿ.ಎಸ್. ಶಾಲೆ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಕಾರ್ಯನಿರ್ವಹಣಾಧಿಕಾರಿ ಮಹಾಬಲೇಶ್ವರ, ಸಂಘದ ಉಪಾಧ್ಯಕ್ಷೆ ಆಶಾಲತಾ ಜೈನ್, ನಿದೇರ್ಶಕರಾದ ಅನಿಲ್ ಗೇವಿನ್, ಶಾಲೆಯ ಮುಖ್ಯ ಶಿಕ್ಷಕ ಸುರೇಶ್, ಶಿಕ್ಷಕರಾದ ಶಿವಕುಮಾರ್, ಲೋಕೇಶ್ ಸತೀಶ್, ಸಂದೇಶ್, ಶೃಂಗೇಶ್ವರ್ ಇತರರು ಇದ್ದರು.
