
ಕಳಸ ಲೈವ್ ವರದಿ
ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ಸಾಧನೆಯ ಕಿರೀಟಕ್ಕೆ ಮತ್ತೊಂದು ಹೆಮ್ಮೆಯ ಗರಿ ಇಂದು ಸೇರ್ಪಡೆಯಾಗಿದೆ. ಶಾಲೆಯ 10ನೇ ತರಗತಿಯ ವಿದ್ಯಾರ್ಥಿ ಶಿವಾನಂದ್ ದಕ್ಷಿಣ ಭಾರತ ಮಟ್ಟದ ವಿಜ್ಞಾನ ಮೇಳದಲ್ಲಿ ತನ್ನ ವೈಜ್ಞಾನಿಕ ಮಾದರಿಗಾಗಿ ಮೂರನೇ ಸ್ಥಾನ ಗಳಿಸಿ ಕಳಸ ಹಾಗೂ ಶಾಲೆಯ ಹೆಸರು ಬೆಳಗಿಸಿದ್ದಾರೆ.
ಜಿಲ್ಲಾ ಹಾಗೂ ರಾಜ್ಯ ಮಟ್ಟದ ವಿಜ್ಞಾನ ವಸ್ತುಪ್ರದರ್ಶನಗಳಲ್ಲಿ ಬಹುಮಾನ ಪಡೆದು ಆಯ್ಕೆಯಾದ ಶಿವಾನಂದ್, ತೆಲಂಗಾಣದಲ್ಲಿ ಶುಕ್ರವಾರ ಮುಕ್ತಾಯವಾದ ದಕ್ಷಿಣ ಭಾರತ ಮಟ್ಟದ ವಿಜ್ಞಾನ ಮೇಳದಲ್ಲಿ ಭಾಗವಹಿಸಿದ್ದರು. ಅಲ್ಲಿ ಅವರು ಪ್ರದರ್ಶಿಸಿದ ಕಾಳುಮೆಣಸಿನ ಫಸಲು ಕೊಯ್ಯುವ ಸಾಧನವನ್ನು ಆಧುನಿಕ ತಂತ್ರಜ್ಞಾನ ಬಳಸಿ ಅಭಿವೃದ್ಧಿಪಡಿಸಿದ ಮಾದರಿ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿ ಮೂರನೇ ಸ್ಥಾನವನ್ನು ತನ್ನದಾಗಿಸಿಕೊಂಡಿತು.
ಸಾ0ಪ್ರದಾಯಿಕ ಕೃಷಿ ವಿಧಾನಗಳಲ್ಲಿ ರೈತರು ಎದುರಿಸುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ಕಾಳುಮೆಣಸು ಕೊಯ್ಯುವ ಪ್ರಕ್ರಿಯೆಯನ್ನು ಸುಲಭ, ಸಮಯ ಉಳಿತಾಯ ಹಾಗೂ ಕಡಿಮೆ ಶ್ರಮದಾಯಕವಾಗಿಸುವ ಉದ್ದೇಶದಿಂದ ಈ ಮಾದರಿಯನ್ನು ರೂಪಿಸಲಾಗಿದೆ. ವಿಜ್ಞಾನ ಮೇಳದಲ್ಲಿ ಶಿವಾನಂದ್ ತಮ್ಮ ಮಾದರಿಯ ಕಾರ್ಯವಿಧಾನವನ್ನು ಸ್ಪಷ್ಟವಾಗಿ ವಿವರಿಸಿ ಗಮನ ಸೆಳೆದರು.
ಈ ಸಾಧನೆಯ ಹಿಂದೆ ಕಳಸ ಕೆಪಿಎಸ್ ಶಾಲೆಯ ಅಟಲ್ ಟಿಂಕರಿAಗ್ ಲ್ಯಾಬ್ ಹಾಗೂ ಅದರ ಮಾರ್ಗದರ್ಶಕ ಶಿಕ್ಷಕ ಸಂದೇಶ್ ಅವರ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಪ್ರಮುಖ ಪಾತ್ರ ವಹಿಸಿದೆ. ವಿದ್ಯಾರ್ಥಿಗಳಲ್ಲಿನ ವೈಜ್ಞಾನಿಕ ಚಿಂತನೆ ಹಾಗೂ ನವೋದ್ಯಮ ಮನೋಭಾವ ಬೆಳೆಸುವಲ್ಲಿ ಅಟಲ್ ಟಿಂಕರಿ0ಗ್ ಲ್ಯಾಬ್ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂಬುದಕ್ಕೆ ಈ ಸಾಧನೆ ಸಾಕ್ಷಿಯಾಗಿದೆ.
ಶಿವಾನಂದ್ ಮತ್ತು ಮಾರ್ಗದರ್ಶಕ ಶಿಕ್ಷಕ ಸಂದೇಶ್ ಅವರ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದ, ಪೋಷಕರು ಹಾಗೂ ಕಳಸದ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಈ ಸಾಧನೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತವಾಗಿದೆ
