





ಕಳಸ ಲೈವ್ ವರದಿ
ಕ್ರಿಯೇಟಿವ್ ಮೋಡೆಲ್ ಮತ್ತು ಮ್ಯಾನೆಜ್ಮೆಂಟ್, ಕಳಸ ಇವರ ವತಿಯಿಂದ ರಾಜ್ಯ ಮಟ್ಟದ ಬೃಹತ್ ಸೌಂದರ್ಯ ಸ್ಪರ್ಧೆ ಮೂರು ದಿನಗಳ ಕಾಲ ಯಶಸ್ವಿಯಾಗಿ ನಡೆಯಿತು. ರಾಜ್ಯದ ನಾನಾ ಜಿಲ್ಲೆಗಳಿಂದ ಐವತ್ತಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿ, ತಮ್ಮ ವ್ಯಕ್ತಿತ್ವ, ಆತ್ಮವಿಶ್ವಾಸ, ಪ್ರತಿಭೆ ಹಾಗೂ ವೇದಿಕೆ ಮೇಲಿನ ಪ್ರಸ್ತುತಿಕರಣದ ಮೂಲಕ ಪ್ರೇಕ್ಷಕರ ಗಮನ ಸೆಳೆದರು.
ಸ್ಪರ್ಧೆಯ ಮೊದಲ ಎರಡು ದಿನಗಳಲ್ಲಿ ವಿವಿಧ ಹಂತದ ರೌಂಡ್ಗಳು ನಡೆದಿದ್ದು, ಪರಿಚಯ ಸುತ್ತು, ಪ್ರತಿಭಾ ಪ್ರದರ್ಶನ, ಹಾಗೂ ರ್ಯಾಂಪ್ ವಾಕ್ ಸುತ್ತುಗಳು ಸ್ಪರ್ಧೆಗೆ ವಿಶೇಷ ಮೆರುಗು ನೀಡಿದವು. ಅಂತಿಮ ದಿನ ನಡೆದ ಫೈನಲ್ ಹಂತದಲ್ಲಿ ತೀರ್ಪುಗಾರರು ಸ್ಪರ್ಧಿಗಳ ಆತ್ಮವಿಶ್ವಾಸ, ಸಂವಹನ ಸಾಮರ್ಥ್ಯ, ಸಂಸ್ಕೃತಿ ಅರಿವು ಹಾಗೂ ಒಟ್ಟು ವ್ಯಕ್ತಿತ್ವವನ್ನು ಆಧರಿಸಿ ವಿಜೇತರನ್ನು ಆಯ್ಕೆ ಮಾಡಿದರು.
ಫೈನಲ್ ಫಲಿತಾಂಶದ0ತೆ ಮಿಸ್ಟರ್ ಕನ್ನಡಿಗ ವಿಭಾಗದಲ್ಲಿ ವೇಣು ವಿನ್ನರ್ ಆಗಿ ಆಯ್ಕೆಯಾಗಿದ್ದು, ಸುದೀಪ್ ಮೊದಲನೇ ರನ್ನರ್ ಅಪ್ ಹಾಗೂ ರಾಯಲ್ ಕಾರ್ಲೋ ಎರಡನೇ ರನ್ನರ್ ಅಪ್ ಸ್ಥಾನ ಪಡೆದರು. ಮಿಸಸ್ ಕನ್ನಡತಿ ವಿಭಾಗದಲ್ಲಿ ಅನನ್ಯ ವಿನ್ನರ್ ಆಗಿ ಹೊರಹೊಮ್ಮಿದರೆ, ಜನಿತ ಮೊದಲನೇ ರನ್ನರ್ ಅಪ್ ಮತ್ತು ಸುಮ ಎರಡನೇ ರನ್ನರ್ ಅಪ್ ಆಗಿ ಆಯ್ಕೆಯಾದರು.
ಟೀನ್ ಕನ್ನಡಿಗ ವಿಭಾಗದಲ್ಲಿ ದೀಪಕ್ ವಿನ್ನರ್ ಆಗಿ, ಚೇತನ್ ಮೊದಲನೇ ರನ್ನರ್ ಅಪ್ ಹಾಗೂ ಗೌತಮ್ ಎರಡನೇ ರನ್ನರ್ ಅಪ್ ಸ್ಥಾನ ಗಳಿಸಿದರು. ಟೀನ್ ಕನ್ನಡತಿ ವಿಭಾಗದಲ್ಲಿ ಜೀವಿತ ವಿನ್ನರ್, ಶ್ವೇತ
ಮೊದಲನೇ ರನ್ನರ್ ಅಪ್ ಮತ್ತು ಮಾನ್ಯತಾ ಎರಡನೇ ರನ್ನರ್ ಅಪ್ ಆಗಿ ಆಯ್ಕೆಯಾದರು.
ಇನ್ನು ಮಿಸ್ಸಸ್ ಪ್ರಿನ್ಸಸ್ ವಿಭಾಗದಲ್ಲಿ ಆರೋಹಿ ವಿನ್ನರ್ ಆಗಿ ಹೊರಹೊಮ್ಮಿದರೆ, ಇಷ್ಟ ಮೊದಲನೇ ರನ್ನರ್ ಅಪ್ ಮತ್ತು ಸಾನ್ವಿ ಎರಡನೇ ರನ್ನರ್ ಅಪ್ ಸ್ಥಾನ ಪಡೆದರು. ಮಿಸ್ಟರ್ ಪ್ರಿನ್ಸ್ ವಿಭಾಗದಲ್ಲಿ ಮೋಕ್ಷ ಜೈನ್ ವಿನ್ನರ್ ಆಗಿ, ರಾಯನ್ ಮೊದಲನೇ ರನ್ನರ್ ಅಪ್ ಹಾಗೂ ಭುವನ್ ಎರಡನೇ ರನ್ನರ್ ಅಪ್ ಆಗಿ ಆಯ್ಕೆಯಾದರು.
ಸಮಾರಂಭದಲ್ಲಿ ಕ್ರಿಯೇಟಿವ್ ಮೋಡೆಲ್ ಮತ್ತು ಮ್ಯಾನೆಜ್ಮೆಂಟ್ ಸಿಇಒ ಚೇತನ್ ಮಾತನಾಡಿ, “ಗ್ರಾಮೀಣ ಹಾಗೂ ನಗರ ಪ್ರದೇಶದ ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸುವುದು ನಮ್ಮ ಉದ್ದೇಶ. ಇಂತಹ ಸ್ಪರ್ಧೆಗಳು ಯುವಕರ ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಅವರೊಳಗಿನ ಪ್ರತಿಭೆಯನ್ನು ಹೊರತರುತ್ತವೆ” ಎಂದು ಹೇಳಿದರು. ಶೋ ಡೈರೆಕ್ಟರ್ ಶ್ರದ್ಧಾ ಮಂಜುನಾಥ್ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಪ್ರಜ್ವಲ್ ಸೇರಿದಂತೆ ಸಂಸ್ಥೆಯ ಸದಸ್ಯರು, ತೀರ್ಪುಗಾರರು, ಅತಿಥಿಗಳು ಹಾಗೂ ಅಪಾರ ಸಂಖ್ಯೆಯ ಪ್ರೇಕ್ಷಕರು ಉಪಸ್ಥಿತರಿದ್ದು, ವಿಜೇತರಿಗೆ ಕಿರೀಟ, ಟ್ರೋಫಿ ಹಾಗೂ ಪ್ರಮಾಣಪತ್ರಗಳನ್ನು ಪ್ರದಾನ ಮಾಡಲಾಯಿತು. ಸ್ಪರ್ಧೆಯ ಯಶಸ್ವಿ ಆಯೋಜನೆಯಿಂದ ಕಳಸದಲ್ಲಿ ರಾಜ್ಯ ಮಟ್ಟದ ಸೌಂದರ್ಯ ಸ್ಪರ್ಧೆಗೆ ಹೊಸ ಆಯಾಮ ಸಿಕ್ಕಂತಾಯಿತು.
