ಕಳಸ ಲೈವ್ ವರದಿ
ತಾಲ್ಲೂಕಿನಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದುಹಾಕುವ ನಿಟ್ಟಿನಲ್ಲಿ ಬಾಲ ಹಾಗೂ ಕಿಶೋರ ಕಾರ್ಮಿಕ ಯೋಜನಾ ಸೊಸೈಟಿ ಚಿಕ್ಕಮಗಳೂರು ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಿಶೇಷ ಕಾರ್ಯಾಚರಣೆ ನಡೆಸಿದೆ.ಕಳಸ ತಾಲ್ಲೂಕು ಮಟ್ಟದ ಕಾರ್ಯಪಡೆ ಸಮಿತಿಯ ಮೊದಲ ಸಭೆಯ ಬೆನ್ನಲ್ಲೇ ಅಧಿಕಾರಿಗಳ ತಂಡ ವಿವಿಧ ಹೋಟೆಲ್ಗಳು, ಗ್ಯಾರೇಜ್ ಮತ್ತು ಕಾಫಿ ಎಸ್ಟೇಟ್ಗಳ ಮೇಲೆ ದಿಢೀರ್ ದಾಳಿ ನಡೆಸಿದೆ.
ಬಾಲಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ಹಾಗೂ ತಿದ್ದುಪಡಿ ಕಾಯ್ದೆ 2016ರ ಸಮರ್ಪಕ ಅನುಷ್ಠಾನಕ್ಕಾಗಿ ಕಳಸದಲ್ಲಿ ಕಾರ್ಯಪಡೆ ಸಮಿತಿಯ ಸಭೆ ನಡೆಯಿತು. ಸಭೆಯ ನಂತರ ಅಧಿಕಾರಿಗಳ ತಂಡವು ತಾಲ್ಲೂಕಿನಾದ್ಯಂತ ಸಂಚರಿಸಿ, ಆಯಕಟ್ಟಿನ ಸ್ಥಳಗಳಲ್ಲಿ ಪರಿಶೀಲನೆ ನಡೆಸಿತು. ಈ ಸಂದರ್ಭದಲ್ಲಿ ಮಾಲೀಕರಿಗೆ ಮತ್ತು ಸಾರ್ವಜನಿಕರಿಗೆ ಕಾನೂನಿನ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಯಿತು.
ದಾಳಿಯ ವೇಳೆ ಅಧಿಕಾರಿಗಳು ಮಾಲೀಕರಿಗೆ 14 ವರ್ಷದೊಳಗಿನ ಮಕ್ಕಳನ್ನು ಯಾವುದೇ ರೀತಿಯ ಕೆಲಸಕ್ಕೆ ನೇಮಿಸಿಕೊಳ್ಳುವುದು ಕಾನೂನುಬಾಹಿರ.18 ವರ್ಷದೊಳಗಿನ ಕಿಶೋರಾವಸ್ಥೆಯ ಮಕ್ಕಳನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ.ನಿಯಮ ಉಲ್ಲಂಘಿಸುವ ಮಾಲೀಕರಿಗೆ 50 ಸಾವಿರ ರೂಪಾಯಿಗಳವರೆಗೆ ದಂಡ ಅಥವಾ ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.
ತಪ್ಪಿತಸ್ಥ ಮಾಲೀಕರ ವಿರುದ್ಧ ಕೇವಲ ದಂಡ ಮಾತ್ರವಲ್ಲದೆ, ಪೊಲೀಸ್ ಇಲಾಖೆಯ ವತಿಯಿಂದ ಎಫ್ಐಆರ್ ದಾಖಲಿಸಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು. ಕೇವಲ ಮಾಲೀಕರು ಮಾತ್ರವಲ್ಲದೆ, ಮಕ್ಕಳನ್ನು ಶಿಕ್ಷಣದಿಂದ ವಂಚಿಸಿ ಕೆಲಸಕ್ಕೆ ಕಳುಹಿಸುವ ಪೋಷಕರ ಮೇಲೆಯೂ ಮೊಕದ್ದಮೆ ದಾಖಲಿಸಲಾಗುವುದು ಎಂದು ಈ ಸಂದರ್ಭದಲ್ಲಿ ಎಚ್ಚರಿಸಲಾಯಿತು.
ಮಕ್ಕಳ ಕೈಗೆ ಕೆಲಸ ಕೊಡುವ ಬದಲು ಪುಸ್ತಕ ನೀಡಿ. ಬಾಲಕಾರ್ಮಿಕ ಪದ್ಧತಿಯು ಮಗುವಿನ ಭವಿಷ್ಯವನ್ನಷ್ಟೇ ಅಲ್ಲದೆ ದೇಶದ ಅಭಿವೃದ್ಧಿಯನ್ನೂ ಕುಂಠಿತಗೊಳಿಸುತ್ತದೆ. ಈ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡುವ ಮೂಲಕ ಸಹಕರಿಸಬೇಕು ಅಧಿಕಾರಿಗಳ ಮನವಿ ಮಾಡಿದರು.
ಈ ಕಾರ್ಯಾಚರಣೆಯಲ್ಲಿ ಕಳಸ ತಹಶೀಲ್ದಾರ್ ಸಮಿತಿಯ ಅಧ್ಯಕ್ಷೆ ಶಾರದ, ಸದಸ್ಯ ಕಾರ್ಯದರ್ಶಿ ಜೀವನ್ ಕುಮಾರ್, ಕಳಸ ಪಿಎಸೈ ಚಂದ್ರಶೇಖರ್, ಸದಸ್ಯರಾದ ಸಾಮಾಜಿಕ ಕಾರ್ಯಕರ್ತ ವೀರೇಂದ್ರ ಜೈನ್, ಹಾಗೂ ಬಾಲ ಹಾಗೂ ಕಿಶೋರ ಕಾರ್ಮಿಕ ಯೋಜನಾ ಸೊಸೈಟಿಯ ಪದಾಧಿಕಾರಿಗಳು ಇದ್ದರು.

