
ಕಳಸ ಲೈವ್ ವರದಿ
ಇಲ್ಲಿನ ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ದೇವಾಲಯದ ಲಲಿತಕಲಾ ಮಂಟಪದಲ್ಲಿ ಶ್ರೀ ಕ್ಷೇತ್ರದ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ಹಮ್ಮಿಕೊಳ್ಳಲಾಗಿದ್ದ ‘ಸಪ್ತಪದಿ’ ಸಾಮೂಹಿಕ ವಿವಾಹ ಮಹೋತ್ಸವದಲ್ಲಿ 14 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು.
ಕಾರ್ಯಕ್ರಮದ ಆರಂಭದಲ್ಲಿ ಧರ್ಮಕರ್ತ ಡಾ. ಜಿ. ಭೀಮೇಶ್ವರ ಜೋಷಿ ಮತ್ತು ರಾಜಲಕ್ಷ್ಮಿ ಜೋಷಿ ದಂಪತಿಗಳು ವರನಿಗೆ ತಾಳಿ ಹಾಗೂ ಕಾಲುಂಗುರಗಳನ್ನು ಹಸ್ತಾಂತರಿಸಿದರು. ಉದಯ ಶಂಕರ್ ಶರ್ಮ ವಿವಾಹದ ಪೌರೋಹಿತ್ಯ ವಹಿಸಿದ್ದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕಿ ನಯನ ಮೋಟಮ್ಮ, “ಶ್ರೀ ಕ್ಷೇತ್ರವು ದಶಕಗಳಿಂದ ಅನೇಕ ಜನಪರ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ. ಶೈಕ್ಷಣಿಕವಾಗಿ ಹಾಗೂ ಮೂಲಭೂತ ಸೌಲಭ್ಯಗಳಿಂದ ವಂಚಿತರಾದ ಗ್ರಾಮೀಣ ಬಡ ಕುಟುಂಬಗಳನ್ನು ಗುರುತಿಸಿ, ಅವರಿಗೆ ನೆರವು ನೀಡುವ ಮೂಲಕ ಮುಖ್ಯವಾಹಿನಿಗೆ ತರುವಲ್ಲಿ ಕ್ಷೇತ್ರ ಯಶಸ್ವಿಯಾಗಿದೆ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೆಗೌಡ ಮಾತನಾಡಿ, “ಜೋಷಿ ದಂಪತಿಗಳ ಕಾರ್ಯವು ಕುವೆಂಪು ಅವರ ‘ಸರ್ವಜನಾಂಗದ ಶಾಂತಿಯ ತೋಟ’ ಎಂಬ ಆಶಯದಂತಿದೆ. ಇಲ್ಲಿಯವರೆಗೆ 942 ಜೋಡಿಗಳು ಅಮ್ಮನವರ ಆಶೀರ್ವಾದದೊಂದಿಗೆ ಸುಖಮಯ ಜೀವನ ನಡೆಸುತ್ತಿರುವುದು ಹೆಮ್ಮೆಯ ಸಂಗತಿ,” ಎಂದರು.
ಕ್ಷೇತ್ರದ ಸೇವಾ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದ ಜಿ.ಬಿ. ಗಿರಿಜಾಶಂಕರ್ ಜೋಷಿ, “1991-92ರಿಂದ ಉಚಿತ ಸಾಮೂಹಿಕ ವಿವಾಹ ಆರಂಭಿಸಲಾಗಿದ್ದು, ಈವರೆಗೆ 942 ಜೋಡಿಗಳ ಮದುವೆ ನೆರವೇರಿಸಲಾಗಿದೆ. ಗೃಹಲಕ್ಷ್ಮಿ, ಆನಂದ ಜ್ಯೋತಿ, ಅನ್ನದಾಸೋಹ, ಮಹಿಳಾ ಸಬಲೀಕರಣ ಸೇರಿದಂತೆ ವಿವಿಧ ಸಾಮಾಜಿಕ ಹಾಗೂ ಶೈಕ್ಷಣಿಕ ಯೋಜನೆಗಳಿಗಾಗಿ ಇದುವರೆಗೆ ಒಟ್ಟು **20,24,63,556 ರೂ.**ಗಳನ್ನು ವಿನಿಯೋಗಿಸಲಾಗಿದೆ,” ಎಂದು ವಿವರಿಸಿದರು.

ಇದೇ ಸಂದರ್ಭದಲ್ಲಿ ವೇ|ಬ್ರ|ಶ್ರೀ ಪವಮಾನ ಎಸ್. ಚಂದ್ರಶೇಖರ್ ಭಟ್, ಹರಿಕಥಾ ದಾಸ ಪುಂಡರೀಕ ಭಾಗವತರು ಹಾಗೂ ಜಿ.ಕೆ. ಮಂಜಪ್ಪಯ್ಯ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಟ್ರಸ್ಟಿ ರಾಜಗೋಪಾಲ್ ಜೋಷಿ, ರಾಜೇಂದ್ರ ಹಿತಮಕ್ಕಿ, ಶ್ರೇಣಿಕ್ ಜೈನ್, ನಾಗಭೂಷಣ್, ಸಂತೋಷ್ ಹಿನಾರಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ದುಂದುವೆಚ್ಚ ಮಾಡದೆ ಅರಿತು ಬಾಳಿ: ಜಿ. ಭೀಮೇಶ್ವರ ಜೋಷಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧರ್ಮಕರ್ತ ಡಾ. ಜಿ. ಭೀಮೇಶ್ವರ ಜೋಷಿ ಅವರು ನವಜೋಡಿಗಳಿಗೆ ಕಿವಿಮಾತು ಹೇಳಿದರು. “ಜಗನ್ಮಾತೆಯ ಸಾಕ್ಷಿಯಾಗಿ ವಿವಾಹವಾಗಿದ್ದೀರಿ, ಜೀವನದಲ್ಲಿ ದುಂದುವೆಚ್ಚ ಮಾಡದೆ ಅರಿತು ಬಾಳಿ. ಕ್ಷೇತ್ರದ ವತಿಯಿಂದ ನೀಡಲಾದ ಸವಲತ್ತುಗಳನ್ನು ಮಾರಾಟ ಮಾಡದೆ ನಿಮ್ಮ ಅಭಿವೃದ್ಧಿಗೆ ಬಳಸಿಕೊಳ್ಳಿ. ಮನೆಗೆ ಬೆಳಕು, ಮಕ್ಕಳಿಗೆ ಶಿಕ್ಷಣ ಮತ್ತು ಬದುಕಿಗೆ ಕೃಷಿ ಇದ್ದರೆ ಮಾತ್ರ ನೆಮ್ಮದಿಯ ಜೀವನ ಸಾಧ್ಯ,” ಎಂದರು.
