
ಕಳಸ ಲೈವ್ ವರದಿ
ಶ್ರೀ ಕ್ಷೇತ್ರ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ. ಪ್ರತಿನಿತ್ಯ ನೂರಾರು ಪ್ರವಾಸಿ ವಾಹನಗಳು, ಶಾಲಾ ಮಕ್ಕಳು, ಸಾರ್ವಜನಿಕರು ಓಡಾಡುವ ಹಾದಿ. ಆದರೆ, ಕಳೆದ ಐದು ತಿಂಗಳಿನಿAದ ಈ ರಸ್ತೆಯ ಬದಿಯಲ್ಲಿ ಕೆಟ್ಟು ನಿಂತಿರುವ ಖಾಸಗಿ ಬಸ್ಸೊಂದು ಈಗ ಕುಡುಗರ ಮತ್ತು ಅನೈತಿಕ ಚಟುವಟಿಕೆಯ ಬಸ್ಸಾಗಿ ಬದಲಾಗಿದೆ.

ಸುಮಾರು ಐದು ತಿಂಗಳ ಹಿಂದೆ ತಾಂತ್ರಿಕ ದೋಷದಿಂದಾಗಿ ಈ ಖಾಸಗಿ ಬಸ್ಸು ಕಳಸ-ಹೊರನಾಡು ರಸ್ತೆಯ ಕೆಪಿಎಸ್ ಪ್ರೌಢಶಾಲೆಯ ಹತ್ತಿರ ಕೆಟ್ಟು ನಿಂತಿತ್ತು. ರಸ್ತೆಯಿಂದ ವಾಹನವನ್ನು ತಕ್ಷಣವೇ ತೆರವುಗೊಳಿಸುವುದು ಮಾಲೀಕನ ಕರ್ತವ್ಯವಾಗಿತ್ತು. ಆದರೆ, ಐದು ತಿಂಗಳುಗಳು ಉರುಳಿದರೂ ಬಸ್ ಜಾಗದಿಂದ ಕದಲಿಲ್ಲ. ಇದರ ಪರಿಣಾಮವಾಗಿ ಹೊರನಾಡಿಗೆ ಹೋಗಿ ಬರುವ ವಾಹನ ಸಂಚಾರಕ್ಕೆ ದಿನನಿತ್ಯ ಕಿರಿಕಿರಿ ಉಂಟಾಗುತ್ತಿದೆ. ಇತ್ತೀಚಿನ ಮಳೆಗೆ ಹರಿದು ಬಂದ ನೀರು ಬಸ್ಸಿಗೆ ಅಡ್ಡಲಾಗಿ ನಿಂತು, ಅದರೊಂದಿಗೆ ಕೊಚ್ಚಿ ಬಂದ ಕಸ ಕಡ್ಡಿ, ಮಣ್ಣು ರಸ್ತೆಯಲ್ಲೇ ಶೇಖರಣೆಯಾಗಿದೆ. ಪರಿಣಾಮ, ರಸ್ತೆಯ ಒಂದು ಭಾಗ ಸಂಪೂರ್ಣ ಮಣ್ಣಿನ ರಾಶಿಯಿಂದ ಮುಚ್ಚಿಹೋಗಿದ್ದು, ದ್ವಿಚಕ್ರ ವಾಹನ ಸವಾರರು ಜಾರಿ ಬೀಳುವ ಭೀತಿ ಎದುರಿಸುತ್ತಿದ್ದಾರೆ.
ಈ ಬಸ್ಸು ನಿಂತಿರುವುದು ಕೆಪಿಎಸ್ ಪ್ರೌಢಶಾಲೆಯ ಅತ್ಯಂತ ಸಮೀಪದಲ್ಲಿ. ಹಗಲಿನಲ್ಲಿ ನೂರಾರು ವಿದ್ಯಾರ್ಥಿಗಳು ಇದೇ ಹಾದಿಯಲ್ಲಿ ನಡೆದುಕೊಂಡು ಹೋಗುತ್ತಾರೆ. ಆದರೆ, ಸಂಜೆಯಾಗುತ್ತಿದ್ದAತೆ ಈ ಪ್ರದೇಶದಲ್ಲಿ ಜನಸಂಚಾರ ವಿರಳವಾಗುವುದನ್ನೇ ಕಾಯುವ ಪುಂಡ ಪೋಕರಿಗಳು, ಬಸ್ಸಿನ ಒಳಗಡೆ ಕುಳಿತು ಪಾರ್ಟಿ ಮಾಡಲು ಶುರುಮಾಡುತ್ತಾರೆ. ಬಸ್ಸಿನ ಸೀಟುಗಳ ಮೇಲೆ ಮತ್ತು ನೆಲದ ಮೇಲೆ ಬಿದ್ದಿರುವ ಮದ್ಯದ ಖಾಲಿ ಪ್ಯಾಕೆಟ್ಗಳು, ವಾಟರ್ ಬಾಟಲಿಗಳೇ ಇದಕ್ಕೆ ಜೀವಂತ ಸಾಕ್ಷಿ ಒದಗಿಸುತ್ತಿವೆ.
ಸಂಜೆಯಾಗುತ್ತಿದ್ದAತೆ ಅತ್ಯಂತ ವಿರಳವಾಗಿ ಓಡಾಡುವ ಪ್ರದೇಶ ಇದು ಕೇವಲ ಕುಡುಕರ ಅಷ್ಟೇ ಅಲ್ಲದೆ ಅನೈತಿಕ ಚಟುವಟಿಕೆಗಳ ತಾಣವೂ ಆಗಿದೆ. ಜನರಿಲ್ಲದ ಸಮಯ ಸಾಧಿಸಿ ಕೆಲವು ಜೋಡಿಗಳು ಈ ಬಸ್ಸಿನ ಒಳಗೆ ಅಸಭ್ಯವಾಗಿ ವರ್ತಿಸುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಇತ್ತೀಚೆಗೆ ಒಳ ನುಗ್ಗಿ ಅವರಿಗೆ ಸರಿಯಾಗಿ ಬೆದರಿಸಿ ಕಳುಹಿಸಿದ ಘಟನೆಯೂ ನಡೆದಿದೆ.
ಈ ಅಪಾಯಕಾರಿ ಬಸ್ಸಿನ ಬಗ್ಗೆ ಕಳಸ ಪೊಲೀಸರು ಮತ್ತು ಕಳಸ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಬಸ್ಸಿನ ಮಾಲೀಕನಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದರು. ಆಗ ಮಾಲೀಕ ಒಂದು ವಾರದೊಳಗೆ ಬಸ್ಸನ್ನು ಕ್ರೇನ್ ಮೂಲಕ ಸಾಗಿಸುತ್ತೇನೆ ಎಂದು ತಿಳಿಸಿದ್ದರು. ಆದರೆ ಆ ಮಾತು ಕೊಟ್ಟು ಎರಡು ತಿಂಗಳು ಕಳೆದರೂ ಮಾಲೀಕ ಇತ್ತ ತಲೆ ಹಾಕಿಲ್ಲ.

ಇಂತಹ ಬೇಜವಾಬ್ದಾರಿ ಪ್ರಕರಣಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಸ್ಪಷ್ಟ ಅವಕಾಶಗಳಿವೆ:ಮೋಟಾರು ವಾಹನ ಕಾಯ್ದೆ 1988 (ಸೆಕ್ಷನ್ 201): ಸಾರ್ವಜನಿಕ ರಸ್ತೆ ಅಥವಾ ಫುಟ್ಪಾತ್ ಮೇಲೆ ಸಂಚಾರಕ್ಕೆ ಅಡ್ಡಿಯಾಗುವಂತೆ ವಾಹನವನ್ನು ಬಿಟ್ಟು ಹೋದರೆ, ಪೊಲೀಸರು ಅಥವಾ ಆರ್ಟಿಒ ಅಧಿಕಾರಿಗಳಿಗೆ ಅದನ್ನು ತಕ್ಷಣವೇ ಜಪ್ತಿ ಮಾಡುವ ಅಧಿಕಾರವಿದೆ. ಇದರ ಸಂಪೂರ್ಣ ವೆಚ್ಚ ಮತ್ತು ದಂಡವನ್ನು ಮಾಲೀಕನೇ ಭರಿಸಬೇಕಾಗುತ್ತದೆ.
ಕಳಸ ಪಂಚಾಯಿತಿಗೆ ತನ್ನ ವ್ಯಾಪ್ತಿಯ ರಸ್ತೆಗಳ ನೈರ್ಮಲ್ಯ ಕಾಪಾಡುವ ಸಂಪೂರ್ಣ ಹಕ್ಕಿದೆ. ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಈ ಬಸ್ಸನ್ನು ತೆರವುಗೊಳಿಸಲು ಅಂತಿಮ ನೋಟಿಸ್ ನೀಡಿ, ನಿಗದಿತ ಸಮಯದಲ್ಲಿ ತೆಗೆಯದಿದ್ದರೆ ಪಂಚಾಯಿತಿಯೇ ಅದನ್ನು ವಶಕ್ಕೆ ಪಡೆದು ಹರಾಜು ಹಾಕಬಹುದು.
ಸಾರ್ವಜನಿಕ ಶಾಂತಿಗೆ ಭಂಗ ತರುವ ಮತ್ತು ಅನೈತಿಕ ಚಟುವಟಿಕೆಗೆ ಆಸ್ಪದ ನೀಡಿದ ಆರೋಪದಡಿ ಬಸ್ ಮಾಲೀಕನ ಮೇಲೆಯೇ ಕಾನೂನು ಕ್ರಮ ಜರುಗಿಸಬಹುದಾಗಿದೆ.
