
ಕಳಸ ಲೈವ್ ವರದಿ
ಕಳಸ ತಾಲ್ಲೂಕು ರಾಜ್ಯದಲ್ಲೇ ಅತೀ ಹೆಚ್ಚು ಮಳೆಯಾಗುವ ಪ್ರದೇಶಗಳಲ್ಲಿ ಒಂದಾಗಿದೆ. ಮಳೆಗಾಲ ಆರಂಭವಾಗುತ್ತಿದ್ದAತೆಯೇ ಇಲ್ಲಿ ಜನರ ಆತಂಕವೂ ಶುರುವಾಗುತ್ತದೆ. ಧಾರಾಕಾರ ಮಳೆ, ಭಾರೀ ಗಾಳಿ ಮತ್ತು ಅರಣ್ಯ ಪ್ರದೇಶಗಳ ಮಧ್ಯೆ ಸಾಗುವ ರಸ್ತೆಗಳ ಕಾರಣ ಪ್ರತೀ ವರ್ಷ ಒಂದೇ ರೀತಿಯ ಸಮಸ್ಯೆಗಳು ಮರುಕಳಿಸುತ್ತಿವೆ.
ತಾಲ್ಲೂಕಿನ ಅನೇಕ ಭಾಗಗಳಲ್ಲಿ ರಸ್ತೆಯ ಬದಿಯ ಮರಗಳು ಅಪಾಯಕಾರಿಯಾಗಿ ವಾಲಿದ್ದು, ಕೆಲ ಮರಗಳು ವಿದ್ಯುತ್ ತಂತಿಗಳ ಮೇಲೆಯೇ ನೆತ್ತಿಗೇರಿದಂತಿವೆ. ಮಳೆ ಮತ್ತು ಗಾಳಿಯ ಅಬ್ಬರ ಹೆಚ್ಚಾದಾಗ ಇವು ಯಾವ ಕ್ಷಣದಲ್ಲಾದರೂ ರಸ್ತೆ, ಮನೆ ಅಥವಾ ವಿದ್ಯುತ್ ಕಂಬಗಳ ಮೇಲೆ ಬೀಳುವ ಭೀತಿ ಜನರನ್ನು ಕಾಡುತ್ತಿದೆ.
ಕುದುರೆಮುಖ ಸಂಪರ್ಕಿಸುವ ಕಳಸ-ಕುದುರೆಮುಖ ರಸ್ತೆ, ಕಳಸ-ಹಿರೇಬೈಲು, ಕಳಸ-ಬಸರಿಕಟ್ಟೆ, ಕಳಸ-ಬಾಳೆಹೊನ್ನೂರು ಹಾಗೂ ಕಳಸ-ಹೊರನಾಡು ಮಾರ್ಗಗಳಲ್ಲಿ ಪ್ರತೀ ವರ್ಷ ಮರಗಳು ರಸ್ತೆಗೆ ಉರುಳಿ ವಾಹನ ಸಂಚಾರಕ್ಕೆ ಅಡ್ಡಿಯಾಗುವುದು ಸಾಮಾನ್ಯ ದೃಶ್ಯವಾಗಿದೆ.

ಕೆಲವೊಮ್ಮೆ ಗಂಟೆಗಳ ಕಾಲ ರಸ್ತೆ ಬಂದ್ ಆಗಿ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಶಾಲಾ ಮಕ್ಕಳು, ಉದ್ಯೋಗಿಗಳು, ರೋಗಿಗಳನ್ನು ಸಾಗಿಸುವ ವಾಹನಗಳು ಸಹ ಮಧ್ಯದಲ್ಲೇ ಸಿಲುಕಿಕೊಳ್ಳುತ್ತವೆ.
ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳ ಪಕ್ಕದಲ್ಲಿರುವ ಬೃಹತ್ ಮರಗಳು ಅಪಾಯದ ಸ್ಥಿತಿಯಲ್ಲಿದ್ದರೂ ಅವುಗಳನ್ನು ತೆರವುಗೊಳಿಸುವ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.
ಪ್ರತೀ ವರ್ಷವೂ ಭಾರೀ ಗಾಳಿಗೆ ಮರಗಳು ಮನೆಗಳ ಮೇಲೆ ಉರುಳಿ ಬಿದ್ದ ಘಟನೆಗಳು ಹಲವು ಬಾರಿ ಸಂಭವಿಸಿದ್ದು, ಸಾವು-ನೋವುಗಳಿಗೂ ಕಾರಣವಾಗಿದೆ. ಯಾವಾಗ ಮನೆ ಮೇಲೆ ಮರ ಬೀಳುತ್ತೋ? ಎಂಬ ಭಯದಲ್ಲೇ ಅನೇಕ ಕುಟುಂಬಗಳು ಮಳೆಗಾಲ ಕಳೆಯಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ತಾಲ್ಲೂಕಿನ ಹಲವೆಡೆ ವಿದ್ಯುತ್ ತಂತಿಗಳ ಮೇಲೆಯೇ ಮರಗಳು ಹಾಗೂ ಕೊಂಬೆಗಳು ವಾಲಿಕೊಂಡಿವೆ. ಮಳೆಗಾಲದಲ್ಲಿ ಮರಗಳು ತಂತಿಗಳ ಮೇಲೆ ಬಿದ್ದ ಪರಿಣಾಮ ಕೆಲ ಹಳ್ಳಿಗಳಲ್ಲಿ ದಿನಗಳಲ್ಲ, ವಾರಗಟ್ಟಲೇ ವಿದ್ಯುತ್ ವ್ಯತ್ಯಯ ಉಂಟಾಗುತ್ತಿರುವ ಘಟನೆಗಳು ವರದಿಯಾಗುತ್ತಿವೆ.
ವಿದ್ಯುತ್ ಇಲ್ಲದೆ ಗ್ರಾಮೀಣ ಭಾಗದ ಜನರು ಕುಡಿಯುವ ನೀರು, ಸಂಪರ್ಕ ವ್ಯವಸ್ಥೆ, ಮಕ್ಕಳ ಶಿಕ್ಷಣ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.
ಸ್ಥಳೀಯರ ಪ್ರಕಾರ, ಅಪಾಯಕಾರಿಯಾಗಿ ನಿಂತಿರುವ ಮರಗಳು ಮತ್ತು ಕೊಂಬೆಗಳನ್ನು ಮಳೆಗಾಲಕ್ಕೂ ಮುನ್ನ ತೆರವುಗೊಳಿಸುವ ಕೆಲಸ ಸಮರ್ಪಕವಾಗಿ ನಡೆದಿದ್ದರೆ ಅನೇಕ ಅನಾಹುತಗಳನ್ನು ತಪ್ಪಿಸಬಹುದು. ಅರಣ್ಯ ಇಲಾಖೆ, ಮೆಸ್ಕಾಂ ಹಾಗೂ ಸ್ಥಳೀಯ ಆಡಳಿತ ಸಮನ್ವಯದಿಂದ ಅಪಾಯ ಪ್ರದೇಶಗಳನ್ನು ಗುರುತಿಸಿ ತುರ್ತು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವಿದ್ಯುತ್ ತಂತಿಗಳ ಮೇಲಿರುವ ಕೊಂಬೆಗಳ ತೆರವು, ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳಿಗೆ ಅಪಾಯ ಉಂಟುಮಾಡುವ ಮರಗಳ ಕಡಿತವನ್ನು ಮಾಡಬೇಕು.
ಮಳೆಗಾಲ ಪೂರ್ವದಲ್ಲಿಯೇ ಅನೇಕ ಮರಗಳು ರಸ್ತೆಗೆ ಬಿದ್ದು, ಮನೆಗಳಿಗೆ ಬಿದ್ದು ಈಗಾಗಲೆ ಅನಾಹುತ ಸಂಭವಿಸಿದೆ. ಮಳೆಗಾಲ ಆರಂಭಕ್ಕೂ ಮುನ್ನ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದಿದ್ದರೆ ಈ ಬಾರಿ ಕೂಡ ಕಳಸ ತಾಲ್ಲೂಕು ಜನರು ಭಯ ಮತ್ತು ಅನಿಶ್ಚಿತತೆಯ ನಡುವೆಯೇ ಜೀವನ ಸಾಗಿಸಬೇಕಾದ ಪರಿಸ್ಥಿತಿ ಎದುರಾಗಲಿದೆ.
