
ಕಳಸ ಲೈವ್ ವರದಿ
ಅನಾರೋಗ್ಯದ ನೋವನ್ನೇ ಮೆಟ್ಟಿನಿಂತು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ಪಡೆದು ಎಲ್ಲರ ಮೆಚ್ಚುಗೆಗೆ ಪಾತ್ರಳಾದ ಕಳಸ ತಾಲೂಕಿನ ಮರಸಣಿಗೆ ಗ್ರಾಮದ ಚಾವಡಿಬೈಲಿನ ವಿದ್ಯಾರ್ಥಿನಿ ಶುಭಶ್ರೀ ಅವರ ಬದುಕಿಗೆ ಇದೀಗ ಮಾನವೀಯತೆಯ ಮಹಾಪೂರವೇ ಹರಿದುಬಂದಿದೆ. ಬದುಕಿನ ಕಠಿಣ ಹಾದಿಯಲ್ಲಿ ಚಿಕಿತ್ಸೆಗಾಗಿ ಹೋರಾಡುತ್ತಿದ್ದ ಈ ಪ್ರತಿಭಾವಂತ ವಿದ್ಯಾರ್ಥಿನಿಯ ನೆರವಿಗೆ ಸಮಾಜವೇ ಕೈಜೋಡಿಸಿದ್ದು, “ಜೀರೋ ಮೆಮೊರೀಸ್” ಯೂಟ್ಯೂಬ್ ತಂಡದ ಸಾಮಾಜಿಕ ಕಾಳಜಿ ಸಾವಿರಾರು ಹೃದಯಗಳನ್ನು ಒಂದಾಗಿಸಿದೆ.
ಹಿರೆಬೈಲ್ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿಯಾದ ಶುಭಶ್ರೀ ಮೆದುಳಿನ ನರ ಸಂಬ0ಧಿತ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ರೂ, ಓದಿನ ಮೇಲೆ ಇರುವ ಅಚಲ ನಂಬಿಕೆಯನ್ನು ಕಳೆದುಕೊಳ್ಳಲಿಲ್ಲ. ದೈಹಿಕವಾಗಿ ದುರ್ಬಲಳಾಗಿದ್ದರೂ ಮನಸ್ಸಿನಲ್ಲಿ ಗಟ್ಟಿತನ ಹೊಂದಿದ್ದ ಆಕೆ, ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶಾಲೆಗೆ ಟಾಪರ್ ಆಗಿ ಹೊರಹೊಮ್ಮಿದ್ದು ಗ್ರಾಮೀಣ ಭಾಗದ ಅನೇಕ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ.
ಈ ಹೋರಾಟದ ಕಥೆಯನ್ನು ಸಮಾಜದ ಮುಂದಿಟ್ಟ “ಜೀರೋ ಮೆಮೊರೀಸ್” ಯೂಟ್ಯೂಬ್ ವಾಹಿನಿಯ ಪವನ್ ಮತ್ತು ಸಂತೋಷ್ ತಂಡವು ವಿಶೇಷ ವಿಡಿಯೋಗಳ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿತ್ತು. ಈ ಮಗಳ ಓದು ನಿಲ್ಲಬಾರದು… ಚಿಕಿತ್ಸೆ ಹಣದ ಕೊರತೆಯಿಂದ ತಡವಾಗಬಾರದು… ಎಂಬ ಕಾಳಜಿಯ ಮನವಿ ಸಾವಿರಾರು ಜನರ ಹೃದಯ ಮುಟ್ಟಿತು. ದೇಶ-ವಿದೇಶಗಳಲ್ಲಿ ಇರುವ ಅನೇಕ ಸಹೃದಯರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ನೆರವಿನ ಹಸ್ತ ಚಾಚಿದರು.
ಯೂಟ್ಯೂಬ್ ವಾಹಿನಿಯ ಆನ್ಲೈನ್ ಸ್ಕ್ಯಾನರ್ ಮೂಲಕ ₹1,21,331 ಸಂಗ್ರಹವಾಗಿದ್ದು, ವಿವಿಧ ದಾನಿಗಳು ನೇರವಾಗಿ ಮನೆಗೆ ಭೇಟಿ ನೀಡಿ ನೀಡಿದ ₹21,000 ನಗದು ಹಾಗೂ ಚೆಕ್ ಸೇರಿ ಒಟ್ಟು ₹1,42,331ಕ್ಕೂ ಅಧಿಕ ನೆರವು ಶುಭಶ್ರೀ ಅವರ ಚಿಕಿತ್ಸಾ ನಿಧಿಗೆ ಸೇರಿದೆ. ಈ ಹಣವನ್ನು ಹಿರಿಯರ ಸಮ್ಮುಖದಲ್ಲಿ ಅಧಿಕೃತವಾಗಿ ಹಸ್ತಾಂತರಿಸಲಾಯಿತು.
ಇದಕ್ಕೂ ಮೊದಲು ಕುಟುಂಬಕ್ಕೆ ಅಪರಿಚಿತರಿಂದ ₹17,000 ವಂಚನೆಯಾಗಿದ್ದ ನೋವು ಗ್ರಾಮಸ್ಥರ ಮನಸ್ಸನ್ನು ಕಲುಕಿತ್ತು. ಇಂತಹ ದುರ್ಘಟನೆ ಮತ್ತೊಮ್ಮೆ ನಡೆಯಬಾರದೆಂಬ ಉದ್ದೇಶದಿಂದ, ಸಾರ್ವಜನಿಕರು ನೀಡಿದ ಪ್ರತಿಯೊಂದು ರೂಪಾಯಿಗೂ ಭದ್ರತೆ ಕಲ್ಪಿಸುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು. ಶುಭಶ್ರೀ ಮತ್ತು ಅವರ ತಾಯಿಯ ಜಂಟಿ ಹೆಸರಿನಲ್ಲಿ ಅಂಚೆ ಕಚೇರಿಯಲ್ಲಿ ಖಾತೆ ತೆರೆಯಲಾಗಿದ್ದು, ಸಂಪೂರ್ಣ ಹಣವನ್ನು ಅದರಲ್ಲಿ ಜಮಾ ಮಾಡಲಾಗಿದೆ. ತಾಯಿ ಮತ್ತು ಮಗಳು ಹೊರತುಪಡಿಸಿ ಬೇರೆ ಯಾರೂ ಹಣವನ್ನು ಹಿಂಪಡೆಯಲು ಸಾಧ್ಯವಾಗದಂತೆ ಸುರಕ್ಷತಾ ವ್ಯವಸ್ಥೆ ಮಾಡಲಾಗಿದೆ.
ಇನ್ನೊಂದೆಡೆ, ವಿದ್ಯಾರ್ಥಿನಿಯ ಮನೆಗೆ ಹೋಗುವ ರಸ್ತೆ ಮಳೆಗಾಲದಲ್ಲಿ ಸಂಪೂರ್ಣ ಹದಗೆಟ್ಟು ಸಂಚಾರವೇ ಕಷ್ಟಕರವಾಗಿದ್ದ ಸಂಗತಿಯನ್ನು ಸ್ಥಳೀಯ ಮುಖಂಡರು ಶಾಸಕಿ ನಯನಾ ಮೋಟಮ್ಮ ಅವರ ಗಮನಕ್ಕೆ ತಂದಿದ್ದರು. ತಕ್ಷಣ ಸ್ಪಂದಿಸಿದ ಶಾಸಕರು ರಸ್ತೆ ದುರಸ್ತಿ ಕಾರ್ಯಕ್ಕಾಗಿ 3 ಟ್ರ್ಯಾಕ್ಟರ್ ಎಂ-ಸ್ಯಾAಡ್, 4 ಟ್ರ್ಯಾಕ್ಟರ್ ಜಲ್ಲಿ ಹಾಗೂ 20 ಮೂಟೆ ಸಿಮೆಂಟ್ ಒದಗಿಸಿ ಮಾನವೀಯತೆ ಮೆರೆದಿದ್ದಾರೆ.
ಆರೋಗ್ಯದ ಏರುಪೇರಿನ ನಡುವೆಯೂ ಶಿಕ್ಷಣದ ಕನಸನ್ನು ಕೈಬಿಡದ ಶುಭಶ್ರೀ, ಸದ್ಯ ಹೊರಗಡೆ ಹೋಗಿ ಓದಲು ಸಾಧ್ಯವಾಗದ ಕಾರಣ ಕರ್ನಾಟಕ ಓಪನ್ ಸ್ಕೂಲ್ ಮೂಲಕ ಮನೆಯಲ್ಲೇ ಕುಳಿತು ಮುಂದಿನ ವಿದ್ಯಾಭ್ಯಾಸ ಮುಂದುವರಿಸಲು ತೀರ್ಮಾನಿಸಿದ್ದಾರೆ. ಪರಿಸ್ಥಿತಿಗೆ ಮಣಿಯದೆ ಕನಸುಗಳನ್ನು ಬೆನ್ನಟ್ಟುತ್ತಿರುವ ಈ ಮಗಳ ಧೈರ್ಯ ಎಲ್ಲರ ಕಣ್ಣಲ್ಲೂ ನೀರೂರಿಸುವಂತಿದೆ.
ಹಿರೆಬೈಲ್ ಸಂಸ್ಕೃತಿ ಮಂದಿರದಲ್ಲಿ ನಡೆದ ಹಣ ಹಸ್ತಾಂತರ ಹಾಗೂ ಅಂಚೆ ಖಾತೆ ಪ್ರಕ್ರಿಯೆಯ ವೇಳೆ ಜಗದೀಶ್ ಭಂಡಾರಿ, ಅರುಣ್ ಬಾಲಾಜಿ ಟ್ರೇಡರ್ಸ್, ಶರೀಫ್, ಸೈಬರ್ ಮಂಜುನಾಥ್, ಆಟೋ ಚಾಲಕ-ಮಾಲಕರ ಸಂಘದ ಅಧ್ಯಕ್ಷ ಚಂದ್ರು, ಕಾನ್ವೆಂಟ್ ಶಾಲೆಯ ರೀನಾ ಟೀಚರ್ ಹಾಗೂ ಸಿಸ್ಟರ್ಸ್ ಸೇರಿದಂತೆ ಹಲವರು ಉಪಸ್ಥಿತರಿದ್ದು ಜೀರೋ ಮೆಮೊರೀಸ್ ತಂಡದ ಸಾಮಾಜಿಕ ಸೇವೆಯನ್ನು ಹೃದಯಪೂರ್ವಕವಾಗಿ ಶ್ಲಾಘಿಸಿದರು.
ಕಷ್ಟದ ನಡುವೆ ಮಗಳು ಓದನ್ನು ಬಿಡಲಿಲ್ಲ… ಸಮಾಜವೂ ಅವಳನ್ನು ಕೈಬಿಡಲಿಲ್ಲ… ಎಂಬ ಮಾತು ಆ ದಿನ ಅಲ್ಲಿದ್ದ ಪ್ರತಿಯೊಬ್ಬರ ಮನದಲ್ಲೂ ಮೌನವಾಗಿ ಮೂಡಿಬಂತು. ತಮ್ಮ ನೆರವಿಗೆ ಬಂದ ಪ್ರತಿಯೊಬ್ಬ ದಾನಿ, ಗ್ರಾಮಸ್ಥರು, ಶಾಸಕರು ಹಾಗೂ ಜೀರೋ ಮೆಮೊರೀಸ್ ತಂಡಕ್ಕೆ ಶುಭಶ್ರೀ ಮತ್ತು ಅವರ ಕುಟುಂಬ ಕಣ್ಣೀರಿನ ಕೃತಜ್ಞತೆ ಸಲ್ಲಿಸಿದರು.

