ಕಳಸ ಲೈವ್ ವರದಿ
ಇಲ್ಲಿನ ಎಸ್ಡಿಎಂ ಐಟಿಐ ಸಂಸೆ (SDM ITI Samse) ಸಂಸ್ಥೆಯ ವಿದ್ಯಾರ್ಥಿಗಳ ಉಜ್ವಲ ವೃತ್ತಿಜೀವನ ಹಾಗೂ ಸ್ವಯಂ ಉದ್ಯೋಗದ ಭವಿಷ್ಯವನ್ನು ರೂಪಿಸುವ ನಿಟ್ಟಿನಲ್ಲಿ ವಿವಿಧ ಪ್ರಮುಖ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ತಾಂತ್ರಿಕ ಕೌಶಲ್ಯಾಭಿವೃದ್ಧಿ ತರಬೇತಿಗಳು ಯಶಸ್ವಿಯಾಗಿ ಸಂಪೂರ್ಣಗೊ0ಡಿವೆ.
ರುಡ್ಸೆಟ್ ಉಜಿರೆಯಲ್ಲಿ ಉಚಿತ ವಸತಿ ಸಹಿತ ತರಬೇತಿ
ಉಜಿರೆಯ ಪ್ರಖ್ಯಾತ ರುಡ್ಸೆಟ್ (RUDSETI) ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಉಚಿತ ವಸತಿ ಸಹಿತ ಸ್ವಯಂ ಉದ್ಯೋಗ ತರಬೇತಿ ಶಿಬಿರದಲ್ಲಿ ಐಟಿಐ ಸಂಸ್ಥೆಯ ಒಟ್ಟು 15 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಈ ಪೈಕಿ 8 ವಿದ್ಯಾರ್ಥಿಗಳು ಮೋಟಾರ್ ರಿವೈಂಡಿAಗ್ ವಿಭಾಗದಲ್ಲಿ ಪ್ರಾಯೋಗಿಕ ಜ್ಞಾನವನ್ನು ಪಡೆದುಕೊಂಡಿದ್ದಾರೆ. ಹಾಗೆಯೇ, ಆಟೋಮೊಬೈಲ್ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಸಂಸ್ಥೆಯ 7 ವಿದ್ಯಾರ್ಥಿಗಳು ‘ಟೂ ವೀಲರ್ ಮೆಕ್ಯಾನಿಕ್’ (Two Wheeler Mechanic) ವಿಭಾಗದಲ್ಲಿ ದ್ವಿಚಕ್ರ ವಾಹನಗಳ ದುರಸ್ತಿ ತಂತ್ರಜ್ಞಾನದ ಅತ್ಯಾಧುನಿಕ ತರಬೇತಿಯನ್ನು ಈಗಾಗಲೇ ಜನವರಿ ತಿಂಗಳಿನಲ್ಲಿಯೇ ಯಶಸ್ವಿಯಾಗಿ ಪಡೆದುಕೊಂಡಿದ್ದಾರೆ.
ಮಹೀಂದ್ರಾ ಕಂಪನಿ ಹಾಗೂ ರುಡ್ಸೆಟ್ ಬ್ರಹ್ಮಾವರದಲ್ಲಿ ತರಬೇತಿ
ವಿದ್ಯಾರ್ಥಿಗಳಿಗೆ ಕೈಗಾರಿಕಾ ಕ್ಷೇತ್ರದ ನೇರ ಅನುಭವ ನೀಡುವ ನಿಟ್ಟಿನಲ್ಲಿ ಚಿಕ್ಕಮಗಳೂರಿನ ಪ್ರಖ್ಯಾತ ಮಹೀಂದ್ರಾ ಕಂಪನಿ (Mahindra Company, Chikkamagaluru) ಯಲ್ಲಿ ವಿಶೇಷ ತಾಂತ್ರಿಕ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಸಂಸ್ಥೆಯ 23 ವಿದ್ಯಾರ್ಥಿಗಳು ಪಾಲ್ಗೊಂಡು ಯಶಸ್ವಿಯಾಗಿ ತಮ್ಮ ಕೌಶಲ್ಯವನ್ನು ವೃದ್ಧಿಸಿಕೊಂಡಿದ್ದಾರೆ. ಇದರೊಂದಿಗೆ, ರುಡ್ಸೆಟ್ ಸಂಸ್ಥೆ ಬ್ರಹ್ಮಾವರ(RUDSETI Brahmavara)ದಲ್ಲಿ ನಡೆದಿದ್ದ ಮೊಬೈಲ್ ಫೋನ್ ರಿಪೇರಿ ತರಬೇತಿಯನ್ನು ಐಟಿಐನ 5 ವಿದ್ಯಾರ್ಥಿಗಳು ಈಗಾಗಲೇ 5 ತಿಂಗಳ ಹಿಂದೆಯೇ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.
ಬ್ಯಾಂಕ್ ಸಾಲ ಸೌಲಭ್ಯ ಹಾಗೂ ಉದ್ಯೋಗ ಮಾರ್ಗದರ್ಶನ
ರುಡ್ಸೆಟ್ ನಿಯಮಾವಳಿಯಂತೆ ತರಬೇತಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಮುಂದಿನ ಎರಡು ವರ್ಷಗಳ ಕಾಲ ಉದ್ಯೋಗ ಮಾರ್ಗದರ್ಶನ ಹಾಗೂ ಬ್ಯಾಂಕ್ ಸಾಲ ಸೌಲಭ್ಯದ ನೆರವು ದೊರೆಯಲಿದೆ. ಈ ಎಲ್ಲಾ ವಿಭಿನ್ನ ತರಬೇತಿಗಳ ಮೂಲಕ ಒಟ್ಟು 43 ವಿದ್ಯಾರ್ಥಿಗಳು ಪ್ರಸ್ತುತ ಮಾರುಕಟ್ಟೆಯ ಬೇಡಿಕೆಗೆ ತಕ್ಕಂತೆ ಸ್ವಂತ ಉದ್ಯೋಗ(Self-Employment) ಪ್ರಾರಂಭಿಸಲು ಹಾಗೂ ತಾಂತ್ರಿಕ ರಂಗದಲ್ಲಿ ಯಶಸ್ವಿಯಾಗಲು ಸನ್ನದ್ಧರಾಗಿದ್ದಾರೆ. ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಮುಖ್ಯಸ್ಥರು ಹಾಗೂ ಉಪನ್ಯಾಸಕರು ಪ್ರಮಾಣಪತ್ರಗಳನ್ನು ವಿತರಿಸಿ, ಅವರ ಸ್ವಾವಲಂಬಿ ಜೀವನದ ಕನಸು ನನಸಾಗಲಿ ಎಂದು ಶುಭ ಹಾರೈಸಿದ್ದಾರೆ.
