
ಕಳಸ ಲೈವ್ ವರದಿ
ಪಂಚ ತೀರ್ಥಗಳ ಪವಿತ್ರ ಪುಣ್ಯಕ್ಷೇತ್ರ, ಲಕ್ಷಾಂತರ ಭಕ್ತರ ಆರಾಧ್ಯ ದೈವ ಶ್ರೀ ಕಲಶೇಶ್ವರ ಸ್ವಾಮಿಯ ನೆಲೆವೀಡು ಕಳಸ ತಾಲ್ಲೂಕಿನ ಭದ್ರಾ ನದಿಯ ತೀರವೀಗ ತ್ಯಾಜ್ಯಾಸುರರ ಕಪಿಮುಷ್ಟಿಗೆ ಸಿಲುಕಿದೆ. ನದಿಯ ಪ್ರಮುಖ ಪಂಚ ತೀರ್ಥಗಳಲ್ಲಿ ಒಂದಾದ, ಐತಿಹಾಸಿಕ ಹಿನ್ನೆಲೆಯುಳ್ಳ ‘ಕೋಟಿ ತೀರ್ಥ’ ಎಂಬಲ್ಲಿ ಲೋಡುಗಟ್ಟಲೆ ಪ್ಲಾಸ್ಟಿಕ್ ಹಾಗೂ ಮದ್ಯದ ಬಾಟಲಿಗಳನ್ನು ತಂದು ಸುರಿದು ವಿಕೃತಿ ಮೆರೆಯಲಾಗಿದೆ.
ಧಾರ್ಮಿಕ ಶ್ರದ್ಧೆಯ ಕೇಂದ್ರವಾಗಬೇಕಿದ್ದ ನದಿ ತೀರ, ಕೆಲವರ ಬೇಜವಾಬ್ದಾರಿತನದಿಂದಾಗಿ ಇಂದು ಡಂಪಿ0ಗ್ ಯಾರ್ಡ್ ಆಗಿ ಮಾರ್ಪಡುತ್ತಿರುವುದು ಪರಿಸರ ಪ್ರೇಮಿಗಳ ಹಾಗೂ ಸಾರ್ವಜನಿಕರ ತೀವ್ರ ಕೆಂಗಣ್ಣಿಗೆ ಗುರಿಯಾಗಿದೆ.
ಕೋಟೆಹೋಳೆಯ ಭದ್ರಾ ನದಿ ತೀರ ಕೇವಲ ನದಿಯಲ್ಲ; ಅದೊಂದು ಸಾಂಸ್ಕೃತಿಕ ಮತ್ತು ಧಾರ್ಮಿಕ ಕೇಂದ್ರ. ಪ್ರತಿ ವರ್ಷ ಸಾರ್ವಜನಿಕ ಗಣೇಶೋತ್ಸವದ ಗಣಪತಿ ವಿಸರ್ಜನೆ, ದುರ್ಗಾ ಪೂಜೆಯ ಮೂರ್ತಿ ವಿಸರ್ಜನೆ ಹಾಗೂ ಶ್ರೀ ಕಲಶೇಶ್ವರ ದೇವರಿಗೆ ವಿಶೇಷ ಪೂಜೆ-ಪುನಸ್ಕಾರಗಳು ನೆರವೇರುವುದೇ ಇದೇ ಜಾಗದಲ್ಲಿ. ಇಂತಹ ಪರಮ ಪವಿತ್ರ ಸ್ಥಳದಲ್ಲಿ ಇಂದು ಪ್ಲಾಸ್ಟಿಕ್ ಬಾಟಲಿಗಳು, ಕೊಳೆತ ಆಹಾರದ ತ್ಯಾಜ್ಯ ಹಾಗೂ ಮದ್ಯದ ಬಾಟಲಿಗಳು ರಾಶಿ ಬಿದ್ದಿವೆ. ಪೂಜೆ ಸಲ್ಲಿಸಬೇಕಾದ ಜಾಗದಲ್ಲಿ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಇಷ್ಟು ಸಾಲದೆಂಬ0ತೆ ಕುಡುಕರು ಕೂಡ ಇದೇ ಸ್ಥಳವನ್ನು ತಮ್ಮ ಮಧ್ಯಸೇವೆಯ ಹಾಟ್ಸ್ಪಾಟ್ ಸ್ಥಳವನ್ನಾಗಿ ಮಾಡಿಕೊಂಡಿದ್ದಾರೆ.ರಾತ್ರಿಯಾಗುತ್ತಿದ್ದ0ತೆ ವಾಹನಗಳನ್ನು ತಂದು ನಿಲ್ಲಿಸಿಕೊಂಡು ಅದರಲ್ಲಿ ಮಧ್ಯ ಸೇವನೆ ಮಾಡಿ ಬಾಟಲಿಗಳನ್ನು ನೇರವಾಗಿ ನದಿಗೆ ಎಸೆಯಲಾಗುತ್ತಿದೆ.ಪ್ರವಾಸಿಗರೂ ಕೂಡ ಇಲ್ಲಿ ತಮ್ಮ ಮಧ್ಯ ಸೇವನೆಯನ್ನ ಜಾಗವನ್ನಾಗಿ ಮಾಡಿಕೊಂಡಿದ್ದಾರೆ.
ಇಲ್ಲಿ ಅತ್ಯಂತ ಖೇದಕರ ಸಂಗತಿಯೆ0ದರೆ, ಕಳಸ ಗ್ರಾಮ ಪಂಚಾಯಿತಿ ವತಿಯಿಂದ ಕಸ ವಿಲೇವಾರಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ನಿತ್ಯ ಮನೆ ಮನೆಗೆ ಬಂದು ಕಸ ಸಂಗ್ರಹಿಸಲು ಒಂದು ಟಿಪ್ಪರ್ ಹಾಗೂ ಒಂದು ಗೂಡ್ಸ್ ಗಾಡಿಯ ನಿಯೋಜನೆ ಇದೆ. ಸಾರ್ವಜನಿಕರಲ್ಲಿ ಹೆಚ್ಚುವರಿ ಒಣ ಅಥವಾ ಹಸಿ ತ್ಯಾಜ್ಯವಿದ್ದರೆ, ಅದನ್ನು ನೇರವಾಗಿ ಪಂಚಾಯಿತಿಯ ತ್ಯಾಜ್ಯ ಘಟಕಕ್ಕೆ ತಂದು ಸುರಿಯಲು ಮುಕ್ತ ಅವಕಾಶವನ್ನೂ ಕಲ್ಪಿಸಿಕೊಡಲಾಗಿದೆ.
ಎಲ್ಲಾ ಸೌಲಭ್ಯಗಳಿದ್ದರೂ, ಕೇವಲ ಸೋಮಾರಿತನ ಮತ್ತು ಪರಿಸರ ಪ್ರಜ್ಞೆಯ ಕೊರತೆಯಿಂದಾಗಿ ಕೆಲವರು ಕತ್ತಲಾಗುತ್ತಿದ್ದಂತೆ ವಾಹನಗಳಲ್ಲಿ ಕಸ ತಂದು ನದಿಯ ದಡಕ್ಕೆ ಸುರಿಯುತ್ತಿದ್ದಾರೆ. ಇದು ಅಕ್ಷಮ್ಯ ಅಪರಾಧ,” ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿ ಕಲುಷಿತಗೊಳ್ಳುತ್ತಿರುವುದು ಕೇವಲ ಕಳಸದ ನದಿ ತೀರ ಮಾತ್ರವಲ್ಲ. ಇದೇ ಭದ್ರಾ ನದಿಯ ನೀರು ಮುಂದೆ ಸಾಗಿ ಜೇವನಾಡಿಯಾದ ಲಕ್ಕವಳ್ಳಿ ಜಲಾಶಯವನ್ನು (ಭದ್ರಾ ಡ್ಯಾಂ) ಸೇರುತ್ತದೆ. ಈ ನೀರನ್ನು ಕೃಷಿಗೆ ಹಾಗೂ ಕುಡಿಯಲು ಕೋಟ್ಯಂತರ ಜನ ಅವಲಂಬಿಸಿದ್ದಾರೆ. ಸ್ಥಳೀಯವಾಗಿಯೂ ಇದೇ ನೀರನ್ನು ಸಾರ್ವಜನಿಕರು ಬಳಸುತ್ತಿದ್ದಾರೆ. ಪವಿತ್ರ ಜಲಮೂಲಕ್ಕೆ ವಿಷ ಉಣಿಸುವ ಇಂತಹ ಕೃತ್ಯಗಳು ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುತ್ತಿವೆ.
ನದಿಯ ಬದಿಯಲ್ಲಿ ಸುರಿಯಲಾಗಿರುವ ತ್ಯಾಜ್ಯದಲ್ಲಿ ನೂರಾರು ಮದ್ಯದ ಬಾಟಲಿಗಳನ್ನು ಒಡೆದು ಹಾಕಲಾಗಿದೆ. ಆಹಾರ ಹುಡುಕಿಕೊಂಡು ಬರುವ ಬೀದಿ ನಾಯಿಗಳು, ಹಸುಗಳು ಮತ್ತು ಇತರ ಜಾನುವಾರುಗಳು ಈ ಕಸವನ್ನು ತಿನ್ನುತ್ತಿವೆ. ಈ ಸಂದರ್ಭದಲ್ಲಿ ಒಡೆದ ಗಾಜಿನ ಚೂರುಗಳು ಪ್ರಾಣಿಗಳ ಬಾಯಿ ಹಾಗೂ ಕಾಲಿಗೆ ಚುಚ್ಚಿ ತೀವ್ರ ರಕ್ತಸ್ರಾವವಾಗಿ, ಅವುಗಳ ಜೀವಕ್ಕೇ ಕಂಟಕ ಎದುರಾಗಿದೆ.
ಕಸ ಸುರಿಯುವ ಪ್ರಮುಖ ಜಾಗಗಳನ್ನು ಗುರುತಿಸಿ ತಕ್ಷಣವೇ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ರಾತ್ರಿ ವೇಳೆ ಇಲ್ಲಿ ಕಸ ತಂದು ಸುರಿಯುವ ವಿಕೃತರನ್ನು ಪತ್ತೆಹಚ್ಚಿ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಮತ್ತು ಭಾರಿ ದಂಡ ವಿಧಿಸಬೇಕು.ಪೊಲೀಸರು ಈ ಭಾಗದಲ್ಲಿ ರಾತ್ರಿ ವೇಳೆ ಗಸ್ತು ಹೆಚ್ಚಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಪ್ರಕೃತಿಯೇ ದೇವರು ಎಂದು ನಂಬುವ ನಮ್ಮ ನಾಡಿನಲ್ಲಿ, ನದಿಯನ್ನೇ ಕಸದ ತೊಟ್ಟಿ ಮಾಡುತ್ತಿರುವುದು ನಾಗರಿಕ ಸಮಾಜ ತಲೆತಗ್ಗಿಸುವಂತಹ ಸಂಗತಿ. ಇನ್ನಾದರೂ ಸಂಬ0ಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು, ಕೋಟಿ ತೀರ್ಥವನ್ನು ಮಾಲಿನ್ಯಮುಕ್ತಗೊಳಿಸಿ, ತಪ್ಪಿತಸ್ಥರಿಗೆ ತಕ್ಕ ಶಾಸ್ತಿ ಮಾಡಬೇಕಿದೆ.
