
ಕಳಸ ಲೈವ್ ವರದಿ
ಕಳಸದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸದಲ್ಲಿ ಶ್ರೀ ವಿನಯ ಕುಮಾರ್ ಶೆಟ್ಟಿ ಅವರ ಒಂಬತ್ತು ವರ್ಷಗಳ ಸೇವಾ ಅವಧಿ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂತಹದ್ದು. ಕೇವಲ ಪ್ರಾಂಶುಪಾಲರಾಗಿ ಮತ್ತು ಇತಿಹಾಸ ವಿಭಾಗದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸುವುದಷ್ಟೇ ಅಲ್ಲದೆ, ತಮ್ಮ ಹೆಸರಿಗೆ ತಕ್ಕಂತೆ ‘ವಿನಯ’ ಹಾಗೂ ದಕ್ಷತೆಯಿಂದ ಇಡೀ ಕಾಲೇಜಿನ ಮುಖಚಿತ್ರವನ್ನೇ ಬದಲಾಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಇಲಾಖೆಯ ವರ್ಗಾವಣೆಯಂತೆ ಅವರು ಈಗ ಚಿಕ್ಕಮಗಳೂರಿನ ಐ.ಡಿ.ಎಸ್.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನಿಯುಕ್ತಿಗೊಂಡಿದ್ದು, ಕಳಸದ ಕಾಲೇಜಿಗೆ ಮತ್ತು ಇಲ್ಲಿನ ವಿದ್ಯಾರ್ಥಿಗಳಿಗೆ ಇದು ಕೇವಲ ವರ್ಗಾವಣೆಯಲ್ಲ, ಒಬ್ಬ ಮಾರ್ಗದರ್ಶಕನ ಬೀಳ್ಕೊಡುಗೆ.
ಒಬ್ಬ ಸಮರ್ಥ ನಾಯಕ ಹಾಗೂ ಸತ್ಯಸಂಧ ಶಿಕ್ಷಕ ಮನಸ್ಸು ಮಾಡಿದರೆ ಒಂದು ಸರ್ಕಾರಿ ಸಂಸ್ಥೆಯನ್ನು ಉನ್ನತ ಮಟ್ಟಕ್ಕೇರಿಸಬಹುದು ಎಂಬುದಕ್ಕೆ ವಿನಯ ಕುಮಾರ್ ಶೆಟ್ಟಿ ಸ್ಪಷ್ಟ ಉದಾಹರಣೆ.
ಕಳೆದ ಒಂಬತ್ತು ವರ್ಷಗಳ ಹಿಂದೆ ಇದ್ದ ಕಳಸ ಡಿಗ್ರಿ ಕಾಲೇಜಿನ ಸ್ಥಿತಿ ಹಾಗೂ ಇಂದಿನ ನವೀನ ರೂಪವನ್ನು ಕಣ್ಣಾರೆ ಕಂಡ ಯಾರೇ ಆದರೂ ಪ್ರಾಂಶುಪಾಲರ ಕಾರ್ಯವೈಖರಿಗೆ ಶಹಬ್ಬಾಸ್ ಎನ್ನಲೇಬೇಕು. ಕಾಲೇಜಿನ ಅಭಿವೃದ್ಧಿಯಲ್ಲಿ ಪ್ರಾಂಶುಪಾಲರ ಜವಾಬ್ದಾರಿ ಮತ್ತು ಬದ್ಧತೆ ಹೇಗಿರಬೇಕು ಎಂಬುದನ್ನು ಅವರು ತಮ್ಮ ಕ್ರಿಯಾಶೀಲತೆಯ ಮೂಲಕ ಸಾಬೀತುಪಡಿಸಿದ್ದಾರೆ.
ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸಿ, ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಿಸುವಲ್ಲಿ ಅವರು ತೋರಿಸಿದ ಕಾಳಜಿ ಅಪಾರ.
ಇವರ ಅವಧಿಯಲ್ಲಿ ಕಾಲೇಜು ಸಾಧಿಸಿದ ಪ್ರಮುಖ ಮೈಲಿಗಲ್ಲುಗಳು:
ಕಾಲೇಜಿನ ಗುಣಮಟ್ಟಕ್ಕೆ ಸಾಕ್ಷಿಯಾಗಿ ಕಾಲೇಜಿಗೆ ‘ನ್ಯಾಕ್ ಎ’ ಶ್ರೇಣಿ ಮಾನ್ಯತೆ ಹಾಗೂ ಶಾಶ್ವತ ಸಂಯೋಜನೆ ದೊರಕಿತು. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ತಾಂತ್ರಿಕ ಶಿಕ್ಷಣದ ಕನಸನ್ನು ನನಸು ಮಾಡಲು ನೂತನವಾಗಿ ಬಿಸಿಎ ಕೋರ್ಸ್ ಪ್ರಾರಂಭಿಸಲಾಯಿತು. ಕಾಲೇಜಿನಲ್ಲಿ ಪ್ರಥಮ ಬಾರಿಗೆ ರಾಷ್ಟ್ರಮಟ್ಟದ ವಿಚಾರಸಂಕಿರಣ ಸೇರಿದಂತೆ ಅನೇಕ ಸೌಹಾರ್ದಯುತ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆ ಕಲ್ಪಿಸಲಾಯಿತು.
ಸರ್ಕಾರಿ ಅನುದಾನಕ್ಕೆ ಮಾತ್ರ ಕಾಯದೆ, ಸಮಾಜದ ಪ್ರಮುಖರನ್ನು, ದಾನಿಗಳನ್ನು ಹಾಗೂ ವಿವಿಧ ಸಂಸ್ಥೆಗಳನ್ನು ತಲುಪಿ ಕಾಲೇಜಿನ ಅಭಿವೃದ್ಧಿಗೆ ಬಳಸಿಕೊಂಡ ರೀತಿ ಅದ್ಭುತ:
ಶಾಸಕರ ಅನುದಾನದಿಂದ ಕಾಲೇಜಿಗೆ ಸಿಮೆಂಟ್ ರಸ್ತೆ ಮತ್ತು ವಿದ್ಯಾರ್ಥಿಗಳ ಕ್ರೀಡಾ ವಿಕಾಸಕ್ಕೆ ಆಟದ ಮೈದಾನ ನಿರ್ಮಾಣ. ರಾಜ್ಯಸಭಾ ಸಂಸದರಾದ ಶ್ರೀ ಜಯರಾಮ್ ರಮೇಶ್ ಅವರ ಅನುದಾನದಿಂದ ಕಾಲೇಜಿನ ಸುತ್ತಲೂ ಕಾಂಪೌAಡ್, ಹಾಗೆಯೇ ಒತ್ತುವರಿಯಾಗದಂತೆ ತಂತಿಬೇಲಿ ಮತ್ತು ಟ್ರಂಚ್ ನಿರ್ಮಾಣ. ಕರ್ನಾಟಕ ಬ್ಯಾಂಕ್ ನೆರವಿನಿಂದ ಕಾಲೇಜಿನ ಸುರಕ್ಷತೆಗೆ ಸಿಸಿಟಿವಿ ಅಳವಡಿಕೆ ಹಾಗೂ ನಿರಂತರ ವಿದ್ಯುತ್ಗಾಗಿ ಸಂಪೂರ್ಣ ಸೋಲಾರ್ ವಿದ್ಯುತ್ ಘಟಕ ಸ್ಥಾಪನೆ. ದಾನಿಗಳ ಸಹಕಾರದಿಂದ ಗಣಕಯಂತ್ರಗಳನ್ನು ಪಡೆದು ಉಚಿತ ಕಂಪ್ಯೂಟರ್ ಶಿಕ್ಷಣ, ತರಗತಿಗಳಿಗೆ ಪ್ರಿಂಟರ್, ಪ್ರೊಜೆಕ್ಟರ್, ಡಿಜಿಟಲ್ ಪೋಡಿಯಂ, ಗ್ರೀನ್ ಬೋರ್ಡ್ ಹಾಗೂ ಫ್ಯಾನ್ಗಳ ವ್ಯವಸ್ಥೆ. ಶ್ರೀ ತನೂಡಿ ಜಗದೀಶ್ ಹೆಗಡೆ ಹಾಗೂ ಇತರರ ಸಹಕಾರದಿಂದ ಬೋರ್ವೆಲ್, ನೀರಿನ ಸಂಗ್ರಹಣಾ ಟ್ಯಾಂಕರ್ ನಿರ್ಮಾಣ. ಕಣ್ಣಿಗೆ ತಂಪು ನೀಡುವ ಸುಂದರ ಉದ್ಯಾನವನ ನಿರ್ಮಾಣ. ಶ್ರೀ ಕ್ಷೇತ್ರ ಹೊರನಾಡಿನ ಪವಿತ್ರ ಸಹಕಾರದೊಂದಿಗೆ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಪ್ರಸಾದ ಭೋಜನ ವ್ಯವಸ್ಥೆ, ಮಲ್ಟಿ ಜಿಮ್ ಸೌಲಭ್ಯ ಒದಗಿಸಲಾಯಿತು. ಯೋಗಗುರು ಶ್ರೀ ಪ್ರೇಮ್ ಕುಮಾರ್ ಅವರ ಸಹಕಾರದಿಂದ ಸತತ 5 ವರ್ಷಗಳ ಕಾಲ ವಿದ್ಯಾರ್ಥಿಗಳಿಗೆ ದಿನನಿತ್ಯ ಉಚಿತ ಯೋಗ ಅಭ್ಯಾಸ. ಉಪಾಸನ ಫೌಂಡೇಶನ್ ಹಾಗೂ ವಿವಿಧ ದಾನಿಗಳ ನೆರವಿನಿಂದ ಬಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಧನಸಹಾಯ ಮತ್ತು ಪ್ರೋತ್ಸಾಹದಾಯಕ ನಗದು ಬಹುಮಾನ ವಿತರಣೆ.
ತನ್ನ ಮೃದು ಸ್ವಭಾವ ಮತ್ತು ‘ವಿನಯ’ತೆಯಿಂದಲೇ ಎಲ್ಲರ ಹೃದಯ ಗೆದ್ದ ಶ್ರೀ ವಿನಯ ಕುಮಾರ್ ಶೆಟ್ಟಿ ಅವರು ಕಾಲೇಜಿನ ಪ್ರತಿಯೊಬ್ಬ ವಿದ್ಯಾರ್ಥಿ, ಸಿಬ್ಬಂದಿ ಮತ್ತು ಸ್ಥಳೀಯರ ಮನಸ್ಸಿನಲ್ಲಿ ಅಳಿಸಲಾಗದ ಮುದ್ರೆ ಒತ್ತಿದ್ದಾರೆ. ಕಳಸದ ಪ್ರಥಮ ದರ್ಜೆ ಕಾಲೇಜು ಇಂದು ತಲೆಯೆತ್ತಿ ನಿಲ್ಲಲು ಅವರ ನಿಸ್ವಾರ್ಥ ಶ್ರಮವೇ ಕಾರಣ.
“ಒಬ್ಬ ಶಿಕ್ಷಕ ಅಥವಾ ಸಂಸ್ಥೆಯ ಮುಖ್ಯಸ್ಥ ಕೇವಲ ಆಡಳಿತಾಧಿಕಾರಿಯಾಗದೆ, ಕಾಲೇಜನ್ನು ತನ್ನ ಸ್ವಂತ ಮನೆ ಎಂದು ಭಾವಿಸಿ, ಸಮಾಜವನ್ನು ಒಗ್ಗೂಡಿಸಿಕೊಂಡು ಸಾಗಿದರೆ ಯಾವುದೇ ಸರ್ಕಾರಿ ಸಂಸ್ಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬಹುದು” ಎಂಬುದಕ್ಕೆ ವಿನಯ ಕುಮಾರ್ ಶೆಟ್ಟಿ ಅವರ 9 ವರ್ಷಗಳ ಸೇವೆಯೇ ಜ್ವಲಂತ ಉದಾಹರಣೆ.
ಚಿಕ್ಕಮಗಳೂರಿನ ಐ.ಡಿ.ಎಸ್.ಜಿ. ಕಾಲೇಜಿಗೆ ವರ್ಗಾವಣೆಗೊಂಡು ತೆರಳುತ್ತಿರುವ ಶ್ರೀ ವಿನಯ ಕುಮಾರ್ ಶೆಟ್ಟಿ ಅವರಿಗೆ ಕಳಸ ಲೈವ್ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು ಹಾಗೂ ಅವರ ಮುಂದಿನ ಶೈಕ್ಷಣಿಕ ಪಯಣಕ್ಕೆ ಶುಭ ಹಾರೈಕೆಗಳು!
