
ಕಳಸ ಲೈವ್ ವರದಿ
ಪ್ರಸಿದ್ಧ ಧಾರ್ಮಿಕ ಕ್ಷೇತ್ರ, ನಿತ್ಯ ಸಾವಿರಾರು ಭಕ್ತರ ಆರಾಧ್ಯ ದೈವ ಶ್ರೀ ಅನ್ನಪೂರ್ಣೇಶ್ವರಿ ದೇವಿ ನೆಲೆಸಿರುವ ಹೊರನಾಡಿಗೆ ಬರಬೇಕೆಂದರೆ ಭಕ್ತರು ಮೊದಲು ದೇವಿಯ ದರ್ಶನಕ್ಕಿಂತ ಹೆಚ್ಚಾಗಿ ಸಾವಿರಾರು ರಸ್ತೆ ಗುಂಡಿಗಳ ‘ದರ್ಶನ’ ಮಾಡಬೇಕಾದ ಶೋಚನೀಯ ಪರಿಸ್ಥಿತಿ ನಿರ್ಮಾಣವಾಗಿದೆ!
ಕಳಸ ಪಟ್ಟಣಕ್ಕೆ ಕಾಲಿಡುತ್ತಿದ್ದಂತೆಯೇ ವಾಹನ ಸವಾರರನ್ನು, ಪ್ರವಾಸಿಗರನ್ನು ಸ್ವಾಗತಿಸುವುದು ಸ್ವಾಗತ ಗೋಪುರವಲ್ಲ, ಬದಲಿಗೆ ಸಾಲು ಸಾಲು ಬೃಹತ್ ಗುಂಡಿಗಳು. ಕಳಸದಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯುದ್ದಕ್ಕೂ ಎಣಿಕೆಗೂ ಸಿಗದಷ್ಟು ಹೊಂಡಗಳು ಬಾಯಿತೆಗೆದುಕೊಂಡು ಕುಳಿತಿದ್ದು, ಈ ಮಾರ್ಗದಲ್ಲಿ ಪ್ರಯಾಣಿಸುವುದು ಭಕ್ತರಿಗೆ ಹಾಗೂ ಸ್ಥಳೀಯರಿಗೆ ನಿತ್ಯ ನರಕಯಾತನೆಯಾಗಿ ಪರಿಣಮಿಸಿದೆ.
ಹೊರನಾಡು ರಸ್ತೆಯ ಪಂಚಾಯಿತಿ ಸಮೀಪವಿರುವ ರಸ್ತೆಯ ಸ್ಥಿತಿಯಂತೂ ಹೇಳತೀರದಾಗಿದೆ. ರಸ್ತೆಯಲ್ಲಿ ಇಷ್ಟು ದೊಡ್ಡ ಮಟ್ಟದ ಹೊಂಡಗಳು ಬಿದ್ದಿರುವುದನ್ನು ಕಂಡು ರೋಸಿಹೋದ ಸ್ಥಳೀಯ ಗ್ರಾಮಸ್ಥರು, ಈ ಭಾಗಕ್ಕೆ “ಗುಂಡಿ ಗ್ರಾಮ” ಎಂದೇ ವ್ಯಂಗ್ಯವಾಗಿ ನಾಮಕರಣ ಮಾಡಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.
ರಾಜ್ಯ ಹಾಗೂ ಹೊರರಾಜ್ಯಗಳಿಂದ ನಿತ್ಯ ಸಾವಿರಾರು ವಾಹನಗಳು, ಪ್ರವಾಸಿಗರು ಮತ್ತು ಭಕ್ತರು ಆಗಮಿಸುವ ಇಂತಹ ಪ್ರಮುಖ ಪ್ರವಾಸಿ ಹಾಗೂ ಧಾರ್ಮಿಕ ಕೇಂದ್ರದ ರಸ್ತೆ ಈ ಮಟ್ಟಕ್ಕೆ ತಲುಪಿದ್ದರೂ ಸಂಬ0ಧಪಟ್ಟ ಅಧಿಕಾರಿಗಳು ಕಣ್ಣಿದ್ದು ಕುರುಡರಂತೆ ವರ್ತಿಸುತ್ತಿರುವುದು ಸಾರ್ವಜನಿಕರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
ಹೊರನಾಡಿಗೆ ಬರುವ ಭಕ್ತರು ಈ ರಸ್ತೆಯ ಪರಿಸ್ಥಿತಿಯನ್ನು ಕಂಡು ಅಸಮಾದಾನ ವ್ಯಕ್ತಪಡಿಸುತ್ತಿದ್ದಾರೆ.ಈ ಊರಿಗೆ ನಾವು ಅತ್ಯಂತ ಭಕ್ತಿಯಿಂದ ಬರುತ್ತೇವೆ.ಆದರೆ ಇಲ್ಲಿಯ ರಸ್ತೆಯ ಪರಸ್ಥಿತಿ ನಮ್ಮನ್ನು ಬರೋದಕ್ಕೆ ಹಿಂದೇಟು ಹಾಕಿಸುತ್ತಿದೆ.ಕಳಸಕ್ಕೆ ಬಂದ ಮೇಲೆನೆ ಅತೀ ಹೆಚ್ಚು ಹೊಂಡಗಳ ದರ್ಶನ ಆಗುತ್ತಿದೆ ಎನ್ನುತ್ತಾರೆ ಭಕ್ತರು.
ಈ ಅವಾಂತರದಿ0ದಾಗಿ ಕೇವಲ ಪ್ರಯಾಣ ವಿಳಂಬವಾಗುತ್ತಿಲ್ಲ, ಬದಲಾಗಿ ವಾಹನಗಳ ಬಿಡಿಭಾಗಗಳು ಮುರಿದುಬಿದ್ದು ದಾರಿ ಮಧ್ಯದಲ್ಲೇ ಕೆಟ್ಟು ನಿಲ್ಲುವುದು ನಿತ್ಯದ ಕಥೆಯಾಗಿದೆ. ಗುಂಡಿ ತಪ್ಪಿಸಲು ಹೋಗಿ ಅದೆಷ್ಟೋ ವಾಹನಗಳ ಆಕ್ಸಲ್, ಶಾಕ್ ಅಬ್ಸಾರ್ಬರ್ ಮುರಿದು ಬೀಳುತ್ತಿವೆ. ದ್ವಿಚಕ್ರ ವಾಹನ ಸವಾರರಂತೂ ಪ್ರಾಣ ಕೈಯಲ್ಲಿಡಿದು ಸಂಚರಿಸಬೇಕಾದ ಪರಿಸ್ಥಿತಿ ಇದೆ. ಸಣ್ಣ ಅಜಾಗರೂಕತೆಯೂ ದೊಡ್ಡ ಅನಾಹುತಕ್ಕೆ ದಾರಿ ಮಾಡಿಕೊಡುತ್ತಿದೆ. ತುರ್ತು ಚಿಕಿತ್ಸೆಗೆ ರೋಗಿಗಳನ್ನು ಸಾಗಿಸುವಾಗ ಈ ಗುಂಡಿಗಳೇ ದೊಡ್ಡ ಕಂಠಕವಾಗುತ್ತಿವೆ.
ಮಳೆಗಾಲ ಆರಂಭವಾದರೆ ಮಲೆನಾಡಿನ ಪ್ರದೇಶಗಳಲ್ಲಿ ರಸ್ತೆ ದುರಸ್ತಿ ಕಾರ್ಯ ಕಷ್ಟಸಾಧ್ಯ. ಹೀಗಾಗಿ ಮಳೆಗಾಲಕ್ಕೆ ಮುಂಚಿತವಾಗಿಯೇ ಕಡೇ ಪಕ್ಷ ಈ ಅಪಾಯಕಾರಿ ಹೊಂಡಗಳನ್ನು ಮುಚ್ಚಿ ತೇಪೆ ಹಚ್ಚುವ ಕೆಲಸವನ್ನಾದರೂ ಲೋಕೋಪಯೋಗಿ ಇಲಾಖೆ ಹಾಗೂ ಸಂಬ0ಧಪಟ್ಟ ಪ್ರಾಧಿಕಾರಗಳು ಮಾಡಬೇಕಿತ್ತು. ಆದರೆ, ಇಲಾಖೆ ಮಾತ್ರ ಸಂಪೂರ್ಣ ಮೌನಕ್ಕೆ ಶರಣಾಗಿದ್ದು, ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದಿರುವುದು ಸಾರ್ವಜನಿಕರಲ್ಲಿ ಭಾರೀ ಆಕ್ರೋಶ ಹುಟ್ಟುಹಾಕಿದೆ. ಮಳೆ ಬಂದು ಈ ಗುಂಡಿಗಳಲ್ಲಿ ನೀರು ತುಂಬಿ ಕೆರೆಯಂತಾಗಿದೆ.ರಸ್ತೆ ಎಲ್ಲಿದೆ, ಗುಂಡಿ ಎಲ್ಲಿದೆ ಎಂದೇ ತಿಳಿಯದ ಅಪಾಯ ಎದುರಾಗಿದೆ.
ಇಲಾಖೆ ಎಲ್ಲಾ ದೊಡ್ಡ ಹೊಂಡಗಳನ್ನು ವೈಜ್ಞಾನಿಕವಾಗಿ ಮುಚ್ಚಿ ಸಂಚಾರ ಯೋಗ್ಯಗೊಳಿಸಬೇಕು. ರಸ್ತೆ ಬದಿಯ ಚರಂಡಿಗಳನ್ನು ಸ್ವಚ್ಛಗೊಳಿಸಿ, ರಸ್ತೆ ಮೇಲೆ ನೀರು ನಿಲ್ಲದಂತೆ ಕ್ರಮ ವಹಿಸಬೇಕು. ಕೇವಲ ಕಣ್ಣೊರೆಸುವ ತೇಪೆ ಹಚ್ಚದೆ, ಮಳೆಗಾಲ ಮುಗಿದ ತಕ್ಷಣವೇ ಕಳಸ-ಹೊರನಾಡು ರಸ್ತೆಗೆ ಗುಣಮಟ್ಟದ ಕಾಂಕ್ರೀಟ್ ಅಥವಾ ಸುಸಜ್ಜಿತ ಡಾಂಬರೀಕರಣ ಮಾಡಬೇಕು.
ದೇವರ ದರ್ಶನಕ್ಕೆ ಬರುವ ಭಕ್ತರು ಹಾಗೂ ನಿತ್ಯ ಸಂಚರಿಸುವ ಗ್ರಾಮಸ್ಥರು ರಸ್ತೆ ಅವ್ಯವಸ್ಥೆಯಿಂದ ನೊಂದುಕೊ0ಡಿದ್ದಾರೆ. ಸಂಬ0ಧಪಟ್ಟ ಇಲಾಖೆ ಇನ್ನುಮುಂದಾದರೂ ನಿದ್ರೆಯಿಂದ ಎದ್ದು, ತಕ್ಷಣವೇ ರಸ್ತೆ ದುರಸ್ತಿಗೆ ಮುಂದಾಗಬೇಕಾಗಿದೆ.
