ಕಳಸ ಲೈವ್ ವರದಿ
ಅಜ್ಞಾನ ತೊಡೆದು ಜ್ಞಾನದ ದೀವಿಗೆ ಹಚ್ಚುವ ,ಕತ್ತಲೆಯಿಂದ ಬೆಳಕಿನೆಡೆಗೆ ಪ್ರೇರೇಪಿಸುವ ದೀಪಾವಳಿ ಹಬ್ಬವನ್ನು ಕಳಸ ತಾಲ್ಲೂಕಿನಾಧ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಸೋಮವಾರ ನರಕ ಚತುರ್ದಶಿ ಪ್ರಯುಕ್ತ ಅಭ್ಯಂಜಯ ಸ್ನಾನ ಮಾಡಿ, ಲಕ್ಷ್ಮೀ ಪೂಜೆಯನ್ನು ನೆರವೇರಿಸಿದರು. ಅಂಗಡಿ ಪೂಜೆ ನಿಮಿತ್ತ ತಮ್ಮ ಅಕ್ಕಪಕ್ಕದ ಮಳಿಗೆಗಳ ಮಾಲಿಕರು ಸ್ನೇಹಿತರು ಬಂಧುಗಳನ್ನು ಆಹ್ವಾನಿಸುತ್ತಿದ್ದ ದೃಶ್ಯ ಕಂಡು ಬಂತು. ಮಂಗಳವಾರ ಸೂರ್ಯಗ್ರಹಣ ನಿಮಿತ್ತ ಹಬ್ಬ ಮಂಕಾಗಿ ಕಂಡು ಬಂದರೆ, ಬುಧವಾರ ಬಲಿಪಾಢ್ಯ ನಿಮಿತ್ತ ಲಕ್ಷ್ಮೀ ಪೂಜೆ, ಗೋ ಪೂಜೆ, ವಾಹನ ಪೂಜೆಗಳನ್ನು ನೆರವೇರಿಸಿದರು. ಗೋವುಗಳನ್ನು ತೊಳೆದು ಹೂ ಹಾರ ಹಾಕಿ ಪೂಜೆ ಸಲ್ಲಿಸಿದರು.

ಸಂಜೆ ಮನೆಯ ಅಂಗಳದಲ್ಲಿ ಹೊಸ್ತಿಲ ಬಳಿ,ಕಿಟಕಿ ಹತ್ತಿರ ಮಹಿಳೆಯರು ಇಟ್ಟ ಹಣತೆಯ ಬೆಳಕು ಕಣ್ಮನಕ್ಕೆ ತಂಪು ತರುವಂತಿತ್ತು. ಸಣ್ಣ ಮಕ್ಕಳು ಹೊಸ ಬಟ್ಟೆ ತೊಟ್ಟು ಪಟಾಕಿ ಸಿಡಿಸುವ ಸಂಭ್ರಮದಲ್ಲಿದ್ದರೆ, ಇತ್ತ ಮನೆಯಲ್ಲಿ ಮಾತೆಯರು ವಿಶೇಷ ಭಕ್ಷ್ಯ ಭೋಜನ ತಯಾರಿಸುವ ಚಿತ್ತ ಹರಿಸಿದ್ದರು.

ಮಹಡಿ ಮನೆಗಳಲ್ಲಿ ಅಲಂಕೃತವಾಗಿ ಕಾಣುವಂತಹ ಆಕಾಶ ಬುಟ್ಟಿಗಳೂ ದೀಪಾವಳಿ ಹಬ್ಬದ ಅಂದವನ್ನು ಇನ್ನಷ್ಟು ಹೆಚ್ಚಿಸಿದ್ದವು .ವಿಧವಿಧವಾದ ಆಕಾಶ ಬುಟ್ಟಿಗಳು ನೋಡುಗರ ಕಣ್ಣು ಕೋರೈಸುವಂತಿತ್ತು.

ಕಳೆದ ಒಂದು ವಾರಗಳಿಂದ ವಿವಿಧ ವೇಷಧಾರಿಗಳು ಹಾಗೂ ಕುಣಿತಕ್ಕೆ ಲಯಬದ್ಧವಾದ ತಾಸೆಯ ಹೊಟೆತದ ಸದ್ದು ಹಬ್ಬದ ಸಡಗರಕ್ಕೆ ಮುನ್ಸೂಚನೆಯನ್ನು ನೀಡಿದರೆ, ಇನ್ನೊಂದೆಡೆ ಗ್ರಾಹಕರನ್ನು ಆಕರ್ಷಿಸಲು ವ್ಯಾಪಾರಿಗಳು ವಿಧವಿಧವಾದ ಹಣತೆ, ಆಕಾಶಬುಟ್ಟಿ, ವಿಭಿನ್ನ ಪಟಾಕಿ, ಹೂವಿನ ವ್ಯಾಪಾರ ಭರ್ಜರಿಯಾಗಿತ್ತು. ಗ್ರಾಹಕರು ತಮ್ಮ ಅಭಿರುಚಿ ಹಾಗೂ ಆರ್ಥಿಕ ಸ್ಥಿತಿಗೆ ತಕ್ಕಂತೆ ಹಬ್ಬದ ಸಾಮಾಗ್ರಿಗಳನ್ನು ಕೊಂಡುಕೊಂಡರು.

ಒಟ್ನಲ್ಲಿ ಮಳೆ, ಕೊರೋನದ ಹಿನ್ನಲೆಯಲ್ಲಿ ಕಳೆದ ಮೂರು ವರ್ಷಗಳಿಂದ ಮಂಕಾಗಿ ಕಂಡು ಬಂದಿದ್ದ ದೀಪಾವಳಿ ಹಬ್ಬ, ಈ ಬಾರಿ ಚೇತರಿಕೆ ಕಂಡು ಬಂದಿತ್ತು.
