ಕಳಸ ಲೈವ್ ವರದಿ
ಪ್ರಧಾನ ಮಂತ್ರಿ ವನ್ ಧನ್ ವಿಕಾಸ ಯೋಜನೆಯಡಿ ಯಂತ್ರಗಳನ್ನು ಸ್ಥಾಪಿಸಲು ಜಾಗ ಮಂಜೂರು ಮಾಡಲು ವಿಳಂಬವಾಗುತ್ತಿರುವ ಬಗ್ಗೆ ಧನಲಕ್ಷ್ಮಿ ಗಿರಿಜನ ಕಾಫಿ ಬೆಳೆಗಾರರ ಸಂಘ ಮತ್ತು ಕಳಸ ಬುಡಕಟ್ಟು ರೈತ ಉತ್ಪಾದಕರ ಸಂಘದ ವತಿಯಿಂದ ಮಾನ್ಯ ತಹಶೀಲ್ದಾರ್ ರವರಿಗೆ ಮಂಗಳವಾರ ಮನವಿ ಸಲ್ಲಿಸಿದರು.
ಪ್ರಧಾನ ಮಂತ್ರಿ ವನ್ ಧನ್ ವಿಕಾಸ ಯೋಜನೆ (ಪಿಎಮ್ ವಿಡಿವಿಕೆ) ಯಡಿ ಗಿರಿಜನ ರೈತರು ಬೆಳೆಯುವ ಕಾಫಿ ಮತ್ತು ಕಾಳುಮೆಣಸು ಬೆಳೆಗಳ ಮೌಲ್ಯವರ್ಧನೆಗಾಗಿ ರೂ 30,00,000 ಅನುದಾನ ಮಂಜೂರಾಗಿ, ರೂ14,20,000 ಸಂಘದ ಖಾತೆಗೆ ಜಮೆ ಆಗಿ ಸುಮಾರು ಒಂದು ವರ್ಷ ಕಳೆದಿದೆ. ಈ ಅನುದಾನದಲ್ಲಿ ಯಂತ್ರಗಳನ್ನು ಸ್ಥಾಪಿಸಲು ಜಾಗ ಮಂಜೂರು ಮಾಡುವಂತೆ ಒಂದು ವರ್ಷದಿಂದ ಮನವಿ ಸಲ್ಲಿಸಿದರೂ ಕೂಡ ಕೇವಲ ಜಾಗ ಸರ್ವೇ ಮಾಡಿದ್ದು ಬಿಟ್ಟರೆ ಬೇರೆ ಯಾವುದೇ ಕಾರ್ಯ ನಡೆದಿಲ್ಲ.
ಈಗಾಗಲೇ ಕಾಫಿ ಕೊಯ್ಲು ಆರಂಭವಾಗಿದ್ದು ಕಾಳುಮೆಣಸು ಕೊಯ್ಲು ಇನ್ನೊಂದು ತಿಂಗಳಿನಲ್ಲಿ ಆರಂಭವಾಗಲಿದೆ. ಆದ್ದರಿಂದ ಆದಷ್ಟು ಶೀಘ್ರವಾಗಿ ಜಾಗ ಮಂಜೂರು ಮಾಡಿಕೊಡುವಂತೆ ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಎರಡು ಸಂಘಗಳ ಪ್ರತಿನಿಧಿಗಳಾದ ಓಬಯ್ಯ, ಸುರೇಶ್, ಸತೀಶ್, ದಿನೇಶ್, ಶ್ರೀನಿವಾಸ್, ಗೋಪಾಲ್, ಪೂರ್ಣೆಶ್, ರವೀಂದ್ರ, ಚಂದ್ರು ಗೌಡ, ಶ್ಯಾಮುಗೌಡ, ಕಾಶಿನಾಥ್, ವಾಸುದೇವ್, ವೆಂಕಟೇಶ್ ಇದ್ದರು.