
ಕಳಸ ಲೈವ್ ವರದಿ
ಉದ್ಯೋಗ ಮಾರುಕಟ್ಟೆಯಲ್ಲಿ ಕೆಲಸಗಿಟ್ಟಿಸಿ ಯಶಸ್ವಿಯಾಗಲು ಉದ್ಯೋಗ ಸಂಬಂಧಿ ಕೌಶಲಗಳ ಜ್ಞಾನ ಅನಿವಾರ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪಠ್ಯಜ್ಞಾನದ ಜೊತೆಗೆ ಕೌಶಲಗಳನ್ನು ಪದವಿ ಹಂತದಲ್ಲಿಯೇ ಕಲಿತುಕೊಳ್ಳಬೇಕು ಎಂದು ಬೆಂಗಳೂರಿನ ಎ.ಎನ್.ಝಡ್ ಸಂಸ್ಥೆಯ ಉಪಾಧ್ಯಕ್ಷ ಯಡೂರಿನ ಓಸ್ವಾಲ್ಡ್ ಪಿರೆರಾ ಅಭಿಪ್ರಾಯಪಟ್ಟರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಪದವಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಒಂದು ದಿನದ ವೃತ್ತಿ ಕೌಶಲ ತರಭೇತಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಬಾಗವಹಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಆತ್ಮವಿಶ್ವಾಸವೊಂದೇ ಮನುಷ್ಯನನ್ನು ಉನ್ನತ ಮಟ್ಟಕ್ಕೆ ಏರಿಸುತ್ತದೆ. ಕೌಶಲಜ್ಞಾನ ಹಾಗೂ ಪಠ್ಯಜ್ಞಾನ ಉದ್ಯೋಗಾಕಾಂಕ್ಷಿಗಳಿಗೆ ಆತ್ಮವಿಶ್ವಾಸ ತುಂಬುತ್ತದೆ. ವಿದ್ಯಾರ್ಥಿಗಳು ಪ್ರತಿದಿನವೂ ತಮ್ಮ ಕೌಶಲ್ಯಾಬಿವೃದ್ಧಿಗೆ ಸಾಕಷ್ಟು ಸಮಯ ಮೀಸಲಿಡಬೇಕು, ಇದರಿಂದ ಸ್ಪರ್ಧಾತ್ಮಕ ವಾತಾವರಣದಲ್ಲಿ ಯಶಸ್ಸು ಪಡೆಯಲು ಸಾಧ್ಯ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಳಸ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಜಯಾ ಸದಾನಂದ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಕೌಶಲ ಕಲೆಗಳಾದ ಪರಿಣಾಮಕಾರಿ ಸಂವಹನ, ನಾಯಕತ್ವ ಗುಣ, ನಿರ್ಧಾರ ತೆಗೆದುಕೊಳ್ಳುವಿಕೆ ಮೊದಲಾದವುಗಳನ್ನು ಪದವಿ ಹಂತದಲ್ಲೇ ರೂಡಿಸಿಕೊಂಡರೆ ಉದ್ಯೋಗ ಮಾರುಕಟ್ಟೆಯಲ್ಲಿ ಉತ್ತಮ ಕೆಲಸ ದೊರೆಯಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ಮುಂದಾಗಿರುವ ಯಡೂರಿನ ಓಸ್ವಾಲ್ಡ ಪಿರೆರಾ ಮತ್ತು ಅವರ ತಂಡದ ಪ್ರಯತ್ನ ಶ್ಲಾಘನೀಯ ಎಂದು ಪ್ರಶಂಸಿಸಿದರು.
ಕಾರ್ಯಕ್ರಮದ ವಿಶೇಷ ಆಹ್ವಾನಿತರಾಗಿದ್ದ ಕಳಸ ಪೊಲೀಸ್ ಠಾಣೆಯ ಸಬ್ಇನ್ಸಪೆಕ್ಟರ್ ಹರ್ಷವರ್ಧನ್ ಮಾತನಾಡಿ ‘ವಿದ್ಯಾರ್ಥಿಗಳು ಪ್ರತಿದಿನವೂ ತಮ್ಮ ಜ್ಞಾನ ಹಾಗೂ ಕೌಶಲವನ್ನು ಹೆಚ್ಚಿಸಿಕೊಳ್ಳುತ್ತಿರಬೇಕು ಇದರಿಂದ ಸಂದರ್ಶನ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಸಹಾಯವಾಗಲಿದೆ’ ಎಂದರು.
ಕಾರ್ಯಕ್ರಮದಲ್ಲಿ ಅಂತಿಮ ವರ್ಷದ ಪದವಿಯ ವಿದ್ಯಾರ್ಥಿಗಳಿಗೆ ಕೌಶಲಗಳ ಬಗ್ಗೆ ತರಬೇತಿಯನ್ನು ಎ.ಎನ್.ಝಡ್ ಸಂಸ್ಥೆಯ ಸದಸ್ಯರು ನೀಡಿದರು. ನಂತರ ಆಯ್ದ ವಿದ್ಯಾರ್ಥಿಗಳಿಗೆ ಅಣಕು ಸಂದರ್ಶನವನ್ನು ಎರಡು ಹಂತದಲ್ಲಿ ನೆಡೆಸಲಾಯಿತು. ಕಾಲೇಜಿನ ಉದ್ಯೋಗ ಕೋಶದ ಸಂಚಾಲಕರಾದ ಸಂತೋಷ ಕೆ. ಬಿ ಪ್ರಾಸ್ತಾವಿಕ ಭಾಷಣ ಮಾಡಿ ಕಾರ್ಯಕ್ರಮದ ಉದ್ದೇಶವನ್ನು ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ವಿನಯಕುಮಾರ್ ಶೆಟ್ಟಿ ವಹಿಸಿದ್ದರು. ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕ ಡಾ. ಆದಿತ್ಯ ಅಡಿಗ, ವಿದ್ಯಾರ್ಥಿಗಳಾದ ಕೌಶಿಕ್, ಸುಕೇಶ್, ಮಂಜುನಾಥ್ ಉಪಸ್ಥಿತರಿದ್ದರು.