
ಕಳಸ ಲೈವ್ ವರದಿ
ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಕಳೆದ ಮೇ 23ರಂದು ಘೋಷಿಸಿರುವಂತೆ 2 ಸಾವಿರ ಮುಖಬೆಲೆಯ ನೋಟುಗಳ ಬಳಕೆ ಸೆಪ್ಟೆಂಬರ್ 30ಕ್ಕೆ ಕೊನೆಗೊಳ್ಳಲಿದೆ. ಹಾಗಾಗಿ, ಪಿಂಕ್ ನೋಟುಗಳನ್ನು ಬದಲಾಯಿಸಿಕೊಳ್ಳಲು 2023ರ ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ. ಈ ಗಡುವಿಗೆ ಕೆಲವೇ ದಿನಗಳು ಬಾಕಿ ಇವೆ.
ವರದಿಗಳ ಪ್ರಕಾರ, ದೇಶದಾದ್ಯಂತ ಇನ್ನೂ 240 ಬಿಲಿಯನ್ (2,400 ಕೋಟಿ ರೂ) ರೂಪಾಯಿ ಮೌಲ್ಯದ ನೋಟುಗಳು ಚಲಾವಣೆಯಲ್ಲಿದೆ. ಸೆಪ್ಟೆಂಬರ್ 1ರವರೆಗೆ 3.56 ಟ್ರಿಲಿಯನ್ ನೋಟುಗಳು ಬ್ಯಾಂಕ್ ಗಳಿಗೆ ಜಮಾ ಆಗಿತ್ತು. ಕೇವಲ ಶೇ. 7ರಷ್ಟು ನೋಟುಗಳು ಮಾತ್ರ ಚಲಾವಣೆಯಲ್ಲಿತ್ತು.
ನೋಟು ಹೀಗೆ ಬದಲಾಯಿಸಿ
ನಿಮ್ಮ ಬಳಿ 2000 ರೂ. ಮುಖಬೆಲೆಯ ನೋಟುಗಳಿದ್ದರೆ ಸೆಪ್ಟೆಂಬರ್ 30ರ ಒಳಗೆ ಬ್ಯಾಂಕ್ಗೆ ಭೇಟಿ ನೀಡಿ ತಮ್ಮ ಬ್ಯಾಂಕ್ ಖಾತೆಗಳಲ್ಲಿ ನೋಟುಗಳನ್ನು ಠೇವಣಿ ಮಾಡಬಹುದು ಅಥವಾ ಬದಲಾವಣೆ ಮಾಡಿಕೊಳ್ಳಬಹುದು. ಈ ಮೂಲಕ 2,000 ರೂ. ನೋಟನ್ನು ಬೇರೆ ನೋಟುಗಳಿಗೆ ಬದಲಾಯಿಸಿಕೊಳ್ಳಬಹುದು. ದೇಶಾದ್ಯಂತ ಎಲ್ಲ ಬ್ಯಾಂಕ್ಗಳಲ್ಲಿ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಬಹುದಾಗಿದೆ.
ಬ್ಯಾಂಕ್ ಶಾಖೆಗಳ ನಿಯಮಿತ ಕಾರ್ಯನಿರ್ವಹಣೆಯಲ್ಲಿ ಅಡಚಣೆ ಉಂಟಾಗಬಾರದು ಎಂಬ ಉದ್ದೇಶದಿಂದ ಒಂದು ಬಾರಿಗೆ 20,000 ರೂಪಾಯಿ 2,000 ರೂಪಾಯಿಯ 10 ನೋಟುಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ನೀಡಲಾಗಿದೆ. ನೋಟುಗಳನ್ನು ಬ್ಯಾಂಕ್ ಖಾತೆಗೆ ಜಮೆ ಮಾಡಲು ಈ ನಿಯಮ ಇಲ್ಲ. ಆದರೆ ನಿಮ್ಮ ಖಾತೆಗೆ ಕೆವೈಸಿ ಆಗಿರಬೇಕಾಗುತ್ತದೆ.
ಸೆ.30ರವರೆಗೆ ಆರ್ ಬಿಐ ನ 19 ಪ್ರಾದೇಶಿಕ ಕಚೇರಿಗಳು ಮತ್ತು ಸಮೀಪದ ಬ್ಯಾಂಕ್ ಗಳಲ್ಲಿ ಸಾರ್ವಜನಿಕರು ತಮ್ಮಲ್ಲಿರುವ 2 ಸಾವಿರ ಮುಖಬೆಲೆಯ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು.