
ಕಳಸ ಲೈವ್ ವರದಿ
ಬಾಳೆಹೊಳೆ ಶ್ರೀ ಚನ್ನಕೇಶವ ದೇವಾಲಯದಲ್ಲಿ ವರ್ಷಾವದಿ ಜಾತ್ರೆಯ ಅಂಗವಾಗಿ ಸೋಮವಾರ ರಥೋತ್ಸವವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

ಪ್ರತಿ ವರ್ಷದಂತೆ ಈ ವರ್ಷವೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡ ರಥೋತ್ಸವದಲ್ಲಿ ಸಾವಿರಾರು ಭಕ್ತಾದಿಗಳು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡರು.
ಭಾನುವಾರದಂದು ಶ್ರೀ ಗಣಪತಿ ಹೋಮ,ದ್ವಜಾರೋಹಣ ಮತ್ತು ದಿಂಡಿ ಉತ್ಸವದೊಂದಿಗೆ ಜಾತ್ರೆಯು ಆರಂಭಗೊಂಡಿತು.ಸೋಮವಾರ ಮಧ್ಯಾಹ್ನ ಶ್ರೀ ದೇವರ ಸುತ್ತು ಸೇವೆ ಮಂಗಳಾರತಿ ಮುಗಿದ ಬಳಿಕ ಚನ್ನಕೇಶವ ದೇವರ ವಿಗ್ರಹವನ್ನು ಸಿಂಗಾರಗೊಂಡ ಬ್ರಹ್ಮ ರಥದಲ್ಲಿ ಇಟ್ಟು ಪೂಜಿಸಿ ಶ್ರೀಮನ್ಮಹಾರತಾರೋಹಣ ನಡೆಸಲಾಯಿತು.ಈ ಸಂದರ್ಭದಲ್ಲಿ ಭಕ್ತಾದಿಗಳು ತಮ್ಮ ಹರಕೆಯಂತೆ ತಾವು ಬೆಳೆದ ಕಾಳು ಮೆಣಸು, ಏಲಕ್ಕಿ,ಅಡಿಕೆ,ಕಾಫಿ ಬೀಜ ಇತ್ಯಾದಿ ದವಸ ದಾನ್ಯಗಳನ್ನು ರಥಕ್ಕೆ ಎಸೆದು ಕೃತಾರ್ಥರಾದರು.

ರಾತ್ರಿ ಭಕ್ತರ ಜಯಘೋಷಗಳ ಝೇಂಕಾರಗಳ ನಡುವೆ ಶ್ರೀಮನ್ಮಹಾರಥೋತ್ಸವ ನಡೆಯಿತು.
ವಿದ್ಯುತ್ ದೀಪಗಳ ಅಲಂಕಾರ ವಿವಿಧ ಹೂಗಳಿಂದ ದೇವಸ್ಥಾನವನ್ನು ಸಿಂಗರಿಸಲಾಗಿತ್ತು.ಜಾತ್ರೆಯ ಪ್ರಯಕ್ತ ಬೆಳಿಗ್ಗೆಯಿಂದಲೇ ದೇವಸ್ಥಾನದಲ್ಲಿ ವಿಶೇಷ ಪೂಜೆ ಪುರಸ್ಕಾರಗಳು ನಡೆದವು.
ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ಶ್ರೀ ಚನ್ನಕೇಶವ ಭಕ್ತವೃಂದ ಬಾಳೆಹೊಳೆ ಮಹಿಳಾ ಸದಸ್ಯರಿಂದ ಭಜನಾ ಕಾರ್ಯಕ್ರಮ ರಾತ್ರಿ 7ರಿಂದ ಹೊಳ್ಳಾಸ್ ಶ್ರೀ ಚನ್ನಕೇಶವ ಯಕ್ಷಗಾನ ಕಲಾ ಪ್ರತಿಷ್ಠಾನ ಗೊರಸುಕುಡಿಗೆ ಇವರಿಂದ ಭೀಷ್ಮಪ್ರತಿಜ್ಞೆ ಯಕ್ಷಗಾನ ನಡೆಯಿತು.

