
ಕಳಸ ಲೈವ್ ವರದಿ
ಇಲ್ಲಿನ ಗಣಪತಿಕಟ್ಟೆಯ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ಆವರಣದಲ್ಲಿ ಗಿಡಗಳನ್ನು ನೆಡುವ ಮೂಲಕ ಹಸಿರು ಆಂದೋಲನಕ್ಕೆ ಚಾಲನೆ ನೀಡಲಾಯಿತು.
ಗಿಡ ನೆಟ್ಟು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಲೆಯ ಪ್ರಾಂಶುಪಾಲರಾದ ಸುನೀತಾ ಬಡಿಗೆರ ಪರಿಸರ ಮಾಲಿನ್ಯದ ಇಂದಿನ ದಿನಗಳಲ್ಲಿ ಪ್ರಕೃತಿಯನ್ನು ರಕ್ಷಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ. ಪರಿಸರ ದಿನಾಚರಣೆ ಎನ್ನುವುದು ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗಬಾರದು. ನಾವು ನೆಡುವ ಪ್ರತಿ ಗಿಡವೂ ನಮ್ಮ ಭವಿಷ್ಯದ ಉಸಿರು. ವಿದ್ಯಾರ್ಥಿಗಳು ಕೇವಲ ಗಿಡಗಳನ್ನು ನೆಡುವುದಷ್ಟೇ ಅಲ್ಲದೆ, ಅವುಗಳನ್ನು ಪೋಷಿಸಿ ಬೆಳೆಸುವ ಜವಾಬ್ದಾರಿಯನ್ನೂ ತೆಗೆದುಕೊಳ್ಳಬೇಕು. ಇಂದಿನ ಯುವ ಪೀಳಿಗೆಯಲ್ಲಿ ಪರಿಸರ ಪ್ರಜ್ಞೆ ಮೂಡಿದಾಗ ಮಾತ್ರ ಸ್ವಚ್ಛ ಹಾಗೂ ಹಸಿರು ಸಮಾಜ ನಿರ್ಮಾಣ ಮಾಡಲು ಸಾಧ್ಯ, ಎಂದು ಅವರು ಹೇಳಿದರು.

ವಿದ್ಯಾರ್ಥಿಗಳು ಶಾಲಾ ಆವರಣದ ಸುತ್ತಮುತ್ತ ವಿವಿಧ ಜಾತಿಯ ನೆರಳು ನೀಡುವ ಹಾಗೂ ಹಣ್ಣಿನ ಗಿಡಗಳನ್ನು ನೆಟ್ಟು, ಅವುಗಳಿಗೆ ನಿತ್ಯ ನೀರುಣಿಸಿ ಪೋಷಿಸುವುದಾಗಿ ಉತ್ಸಾಹದಿಂದ ಪ್ರತಿಜ್ಞೆ ಮಾಡಿದರು.
ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕ ವೃಂದ, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.
