ಕಳಸ ಲೈವ್ ವರದಿ
ಇಲ್ಲಿನ ಇನ್ನರ್ ವೀಲ್ ಕ್ಲಬ್ ವತಿಯಿಂದ ಸಮಾಜಮುಖಿ ಸೇವಾ ಕಾರ್ಯಗಳ ಭಾಗವಾಗಿ ಕಳಸ ಸರ್ಕಾರಿ ಆಸ್ಪತ್ರೆಯ ಭೌತಚಿಕಿತ್ಸಾ (ಫಿಸಿಯೋಥೆರಪಿ) ವಿಭಾಗಕ್ಕೆ ಸುಧಾರಿತ ಐಎಫ್ಟಿ (Interferential Therapy) ಯಂತ್ರವನ್ನು ಶನಿವಾರ ದೇಣಿಗೆಯಾಗಿ ಹಸ್ತಾಂತರಿಸಲಾಯಿತು.
ಈ ಸುಧಾರಿತ ಯಂತ್ರವನ್ನು ಸ್ನಾಯು ನೋವು, ಕೀಲು ನೋವು, ಬೆನ್ನು ಮತ್ತು ಕುತ್ತಿಗೆ ನೋವು, ಕ್ರೀಡಾ ಗಾಯಗಳು ಹಾಗೂ ವಿವಿಧ ನರ-ಸ್ನಾಯು ಸಂಬಂಧಿತ ತೊಂದರೆಗಳ ಚಿಕಿತ್ಸೆಯಲ್ಲಿ ಪ್ರಮುಖವಾಗಿ ಬಳಸಲಾಗುತ್ತದೆ. ಐಎಫ್ಟಿ ಚಿಕಿತ್ಸೆಯು ರೋಗಿಗಳಲ್ಲಿ ತೀವ್ರ ನೋವು ನಿವಾರಣೆಗೆ ಸಹಕಾರಿಯಾಗಿದ್ದು, ರಕ್ತಸಂಚಾರವನ್ನು ಸುಧಾರಿಸುವ ಮೂಲಕ ಶೀಘ್ರ ಚೇತರಿಕೆಗೆ ಸಹಕಾರಿಯಾಗಲಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಈ ಅತ್ಯಾಧುನಿಕ ಯಂತ್ರದ ಲಭ್ಯತೆಯಿಂದಾಗಿ ಕಳಸ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಮತ್ತು ಬಡ ರೋಗಿಗಳಿಗೆ ಗುಣಮಟ್ಟದ ಭೌತಚಿಕಿತ್ಸಾ ಸೇವೆ ಇನ್ಮುಂದೆ ಉಚಿತ ಹಾಗೂ ಸುಲಭವಾಗಿ ದೊರೆಯಲಿದೆ. ಸಾರ್ವಜನಿಕರು ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಇನ್ನರ್ ವೀಲ್ ಕ್ಲಬ್ ಪದಾಧಿಕಾರಿಗಳು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಕ್ಲಬ್ ಕಳಸದ ಅಧ್ಯಕ್ಷೆ ಶ್ರೀವಾಣಿ ಸುಗಮ್ ಕಾರ್ಯದರ್ಶಿ ನಿತ್ಯಾ ಸಂದೀಪ್, ಸದಸ್ಯೆಯರಾದ ಶ್ರುತಿ ಪನೀಶ್, ರಮ್ಯಾ ಅಶ್ವತ್, ಮಾಲಾ ಗಣೇಶ್, ಉಷಾ ಕುಮಾರ್, ಲೀಲಾ ಶ್ರೀಕಾಂತ್ ಮತ್ತು ವಿದ್ಯಾ ಭಾಸ್ಕರ್ ಉಪಸ್ಥಿತರಿದ್ದರು.
ಆಸ್ಪತ್ರೆಯ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಇನ್ನರ್ ವೀಲ್ ಕ್ಲಬ್ನ ಈ ಜನಪರ ಮತ್ತು ಸಮಾಜಮುಖಿ ಕಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿ, ಸಂಸ್ಥೆಗೆ ಕೃತಜ್ಞತೆ ಸಲ್ಲಿಸಿದರು.
