
ಕಳಸ ಲೈವ್ ವರದಿ
ಇಲ್ಲಿನ ತಾಲೂಕು ಪಂಚಾಯ್ತಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಬೇಸಿಗೆ ಬೆಸುಗೆ” ಶಿಬಿರದ ತಾಲೂಕು ಮಟ್ಟದ ಸಮಾರೋಪ ಹಾಗೂ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು. ಶಿಬಿರದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಗ್ರಾಮ ಪಂಚಾಯಿತಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಂಥಪಾಲಕರನ್ನು ಈ ಸಂದರ್ಭದಲ್ಲಿ ಗುರುತಿಸಿ ಸನ್ಮಾನಿಸಲಾಯಿತು.
ಶಿಬಿರದ ವಿವಿಧ ಚಟುವಟಿಕೆಗಳನ್ನು ಅತ್ಯಂತ ಸೃಜನಾತ್ಮಕವಾಗಿ ಮತ್ತು ಯಶಸ್ವಿಯಾಗಿ ನಿರ್ವಹಿಸಿದ ಗ್ರಾಮ ಪಂಚಾಯಿತಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಪ್ರಥಮ ಸ್ಥಾನ ಇಡಕಣಿ ಗ್ರಾಮ ಪಂಚಾಯಿತಿ, ದ್ವಿತೀಯ ಹೊರನಾಡು ಗ್ರಾಮ ಪಂಚಾಯಿತಿ, ತೃತೀಯ ತೋಟದೂರು ಗ್ರಾಮ ಪಂಚಾಯಿತಿ, ಮರಸಣಿಗೆ, ಕಳಸ ಮತ್ತು ಸಂಸೆ ಗ್ರಾಮ ಪಂಚಾಯಿತಿಗಳಿಗೆ ಸಮಾದಾನಕರ ಬಹುಮಾನ ನೀಡಲಾಯಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಸುದೀಪ್ ಹೆಚ್ ಅವರು, ಗ್ರಾಮೀಣ ಭಾಗದ ಮಕ್ಕಳಿಗಾಗಿ ಹಮ್ಮಿಕೊಳ್ಳಲಾಗಿದ್ದ ಈ ಬೇಸಿಗೆ ಬೆಸುಗೆ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿದೆ. ಪ್ರತಿಯೊಂದು ಪಂಚಾಯಿತಿ ವ್ಯಾಪ್ತಿಯಲ್ಲಿ ಮಕ್ಕಳಿಗೆ ಕೇವಲ ಪಠ್ಯ ಪುಸ್ತಕದ ಜ್ಞಾನ ಮಾತ್ರವಲ್ಲದೆ, ಕರಕುಶಲ ಕಲೆ, ಚಿತ್ರಕಲೆ, ನಾಯಕತ್ವದ ಗುಣಗಳು, ಸಂವಹನ ಕಲೆ ಸೇರಿದಂತೆ ವಿವಿಧ ಕೌಶಲ್ಯಗಳ ಬಗ್ಗೆ ತರಬೇತಿ ಮತ್ತು ಮಾಹಿತಿಯನ್ನು ನೀಡಲಾಗಿತ್ತು.ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಮೊಬೈಲ್ ಮತ್ತು ಟಿವಿ ಪರದೆಗಳಿಗೆ ಸೀಮಿತವಾಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ಶಿಬಿರವು ಗ್ರಾಮೀಣ ಭಾಗದ ಪ್ರತಿಭೆಗಳನ್ನು ಹೊರತರಲು ಉತ್ತಮ ವೇದಿಕೆಯಾಗಿದೆ. ಇದು ಮಕ್ಕಳ ಜ್ಞಾನಾರ್ಜನೆಯನ್ನು ವಿಸ್ತರಿಸುವುದರ ಜೊತೆಗೆ, ಅವರಲ್ಲಿ ಅಡಗಿರುವ ಸುಪ್ತ ಚೇತನವನ್ನು ಜಾಗೃತಗೊಳಿಸಿ, ಭವಿಷ್ಯವನ್ನು ಎದುರಿಸಲು ಅಗತ್ಯವಿರುವ ಆತ್ಮಸ್ಥೈರ್ಯ ಮತ್ತು ಧೈರ್ಯವನ್ನು ತುಂಬುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಇದಕ್ಕೆ ಶ್ರಮಿಸಿದ ಅಧಿಕಾರಿಗಳು ಮತ್ತು ಗ್ರಂಥಪಾಲಕರ ಸೇವೆ ಶ್ಲಾಘನೀಯ ಎಂದು ಹೇಳಿದರು.

ಶಿಬಿರವನ್ನು ತಳಮಟ್ಟದಲ್ಲಿ ಯಶಸ್ವಿಗೊಳಿಸಲು ಶ್ರಮಿಸಿದ ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಹಾಗೂ ಗ್ರಂಥಾಲಯದ ಮೂಲಕ ಮಕ್ಕಳನ್ನು ಆಕರ್ಷಿಸಿ ಓದುವ ಹವ್ಯಾಸ ಬೆಳೆಸಿದ ಗ್ರಂಥಪಾಲಕರನ್ನು ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಗುರುತಿಸಿ, ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಗಣೇಶ್ ಭಟ್, ಪ್ರಮುಖರಾದ ಸಂತೋಷ್, ಗುಲಾಬಿ, ವಿಮಲ, ಬಸವರಾಜ್, ಶಮೀರ, ಸುರಕ್ಷ ಸೇರಿದಂತೆ ತಾಲೂಕು ಪಂಚಾಯ್ತಿಯ ಸಿಬ್ಬಂದಿಗಳು, ವಿವಿಧ ಪಂಚಾಯಿತಿಗಳ ಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
