ಕಳಸ ಲೈವ್ ವರದಿ
ತಾಲ್ಲೂಕಿನ ಸಂಸೆಯ ಶ್ರೀ ಪದ್ಮಾವತಿ ಅಮ್ಮನವರ ಸನ್ನಿಧಿಯಲ್ಲಿ ನಡೆಯುವ ವರ್ಷಂಪ್ರತಿ ಜಾತ್ರೆಯು ಅತ್ಯಂತ ಸಡಗರ ಸಂಭ್ರಮದಿಂದ ನೆರವೇರಿತು.
ಕಳೆದ ಐದು ದಿನಗಳಿಂದ ಇಲ್ಲಿ ನಡೆದ ಜಾತ್ರಾ ಮಹೋತ್ಸವದ ಪೂಜಾ ವಿಧಿ ವಿಧಾನಗಳು ನಡೆದು ಮಂಗಳವಾರ ಬೆಳಿಗ್ಗೆ ಭಗವಾನ್ ಶ್ರೀ ಶಾಂತಿನಾಥ ಸ್ವಾಮಿಗೆ ಕ್ಷೀರಾಭಿಷೇಕ,ನಿತ್ಯ ನಿಧಿ ಸಹಿತ ಗ್ರಾಮ ಬಲಿ,ಬಸದಿಯಲ್ಲಿ ಭಗವಾನ್ ಶಾಂತಿನಾಥ ಸ್ವಾಮಿಗೆ ಕ್ಷೀರಾಭಿಷೇಕ ಇನ್ನಿತರೆ ಪೂಜಾ ವಿಧಾನಗಳನ್ನು ನೆರವೇರಿಸಲಾಯಿತು.

ಸಂಸೆಯಲ್ಲಿ ಬೆಳಿಗ್ಗೆಯಿಂದಲೇ ಜನ ಜಂಗುಳಿಯಿಂದ ಕೂಡಿತ್ತು. ಸಂಸೆ ಸುತ್ತಮುತ್ತಲಿನ ಕಳಸ, ಕುದುರೇಮುಖ, ಜಾಂಬ್ಳೆ, ನೆಲ್ಲಿನೀಡು, ಮುಳ್ಳೋಡಿ, ಹೊರನಾಡು ಮುಂತಾದ ಗ್ರಾಮಗಳ ಸಾವಿರಾರು ಜನ ತಂಡೋಪ ತಂಡವಾಗಿ ಬಂದು ಶ್ರೀದೇವರಿಗೆ ತಲೆಬಾಗಿ ಪ್ರಸಾದವನ್ನು ಸ್ವೀಕರಿಸಿದರು.
ಜಾತ್ರೆ ನಿಮಿತ್ತ ಊರಿಗೆ ಊರನ್ನು ಸ್ವಚ್ಚಗೊಳಿಸಿ ತಳಿರು ತೋರಣಗಳ ಶೃಂಗಾರ ಮಾಡಲಾಗಿತ್ತು, ಇಡೀ ದೇವಾಲಯ ವಿದ್ಯುತ್ ದ್ವೀಪಗಳಿಂದ ಶೃಂಗಾರಗೊಂಡು ಭಕ್ತರನ್ನು ಕೈಬೀಸಿ ಕರೆಯುತ್ತಿತ್ತು.
ಸಿದ್ದಪಡಿಸಿದ ಭವ್ಯ ಬ್ರಹ್ಮರಥದಲ್ಲಿ ಶಾಂತಿನಾಥ ತೀರ್ಥಂಕರರ ಮತ್ತು ಶ್ರೀ ವರಮಹಾಲಕ್ಷ್ಮೀ ದೇವರು ವಿರಾಜಮಾನರಾಗುವುದನ್ನು ಕಣ್ತುಂಬಿಸಿಕೊಳ್ಳಲು ಬಕ್ತರು ಕಾತುರದಿಂದ ಕಾಯುತ್ತಿದ್ದರು. ಮದ್ಯಾಹ್ನ ಮಂಗಳವಾದ್ಯಗಳು,ಚತ್ರಿ ಚಾಮರಗಳೊಂದಿಗೆ ಹೂೀವಿನ ಅಲಂಕಾರದಿಂದ ಸಿಂಗರಿಸಿದ ಶಾಂತಿನಾಥ ತೀರ್ಥಂಕರರ ಮತ್ತು ಶ್ರೀ ವರಮಹಾಲಕ್ಷ್ಮೀ ದೇವರ ಉತ್ಸವ ಮೂರ್ತಿಯನ್ನು ಹೊತ್ತುಕೊಂಡು ಬರಲಾಯಿತು..ಈ ಸಂದರ್ಭದಲ್ಲಿ ನೆರೆದ ಸಾವಿರಾರು ಕೃಷಿಕ ಬಂದುಗಳ ಮನೆ ಮನಗಳಲ್ಲಿ ಸಂಭ್ರಮ ಸಡಗರ ಸಂತೋಷ ಎದ್ದು ಕಾಣುತ್ತಿತ್ತು. ಶ್ರೀ ದೇವರ ಮೂರ್ತಿಯನ್ನು ಕಂಡು ಸೇರಿದ ಸಾವಿರಾರು ಭಕ್ತರು ಭಕ್ತಿ,ಭಾವ ಪರವಶವಾದರು.ಶಾಂತಿನಾಥ ತೀರ್ಥಂಕರರ ಮತ್ತು ಶ್ರೀ ವರಮಹಾಲಕ್ಷ್ಮೀ ಮೂರ್ತಿಯನ್ನು ಹೊತ್ತು ರಥದ ಬಳಿ ಉತ್ಸವ ನಡೆಯಿತು. ನಂತರ ದೇವರ ರಥರೋಹನ ನಡೆದ ಬಳಿಕ ಅಲಂಕೃತಗೊಂಡ ಭವ್ಯ ಬ್ರಹ್ಮ ರಥವನ್ನು ಶ್ವೇತ ವಸ್ತ್ರದಾರಿಗಳಾದ ಭಕ್ತಾಧಿಗಳು ಎಳೆದರು.
