ಕಳಸ ಲೈವ್ ವರದಿ
(ಸುದೀಶ್ ಸುವರ್ಣ)
ಕಳಸ ತಾಲೂಕು ಕಚೇರಿಗೆ ಕಳೆದ ಎರಡು ವರ್ಷಗಳಿಂದ ಬರೋಬ್ಬರಿ ಒಂಬತ್ತು ಜನ ತಹಶೀಲ್ದಾರ್ ಬಂದು ಕರ್ತವ್ಯ ನಿರ್ವಹಿಸಿ, ತಾಲೂಕು ಕೇಂದ್ರದಲ್ಲಿ ಇರಬೇಕಾದ ಯಾವುದೇ ಕಚೇರಿಯು ಕರ್ತವ್ಯ ನಿರ್ವಹಿಸದೆ ಇರುವ ಹಿನ್ನಲೆಯಲ್ಲಿ ಕಳಸ ತಾಲೂಕು ಶಂಕಿತ ತಾಲೂಕು ಎಂಬ ಹಣೆ ಪಟ್ಟಿ ಕಟ್ಟಿಕೊಂಡಿದೆ.
ಕಳಸ ತಾಲೂಕು ಸಾಮಾಜಿಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಸದಾ ಮುಂಚೂಣಿಯಲ್ಲಿರುವ ತಾಲೂಕು ಕೇಂದ್ರ.ಹೊಬಳಿ ಕೇಂದ್ರವಾಗಿದ್ದ ಕಳಸ ತಾಲ್ಲೂಕು ಕೇಂದ್ರವಾಗಬೇಕು ಎನ್ನುವ ಸತತ ಮೂರು ದಶಕಗಳಿಂದ ನಡೆದ ಎಲ್ಲಾ ರಾಜಕೀಯ,ಸಂಘ ಸಂಸ್ಥೆಗಳ ಹೋರಾಟದ ಫಲವಾಗಿ 2019ರ ಪೆಬ್ರವರಿಯಲ್ಲಿ ಅಂದಿನ ಕಾಂಗ್ರೇಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಕಳಸವನ್ನು ತಾಲೂಕು ಕೇಂದ್ರವನ್ನಾಗಿ ಘೋಷನೆ ಮಾಡಿದ್ದರು.
ನಂತರದ ಸತತ ಹೋರಾಟದ ಪರಿಣಾಮ 2021 ಜೂನ್ 22 ರಂದು ಬಿಜೆಪಿ ಸರ್ಕಾರದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಂತಿಮ ಅಧಿಸೂಚನೆ ಹೊರಡಿಸಿದರು.
ಅಂದಿನಿಂದ ತಾಲೂಕು ಕಚೇರಿ ತೆರೆಯಲು ಕುಂಟುತ್ತಾ ಸಾಗಿ 2022ರ ಜನವರಿ 14ರಂದು ಮೂಡಿಗೆರೆ ತಾಲ್ಲೂಕಿನ ತಹಶಿಲ್ದಾರ್ ನಾಗರಾಜ್ ಅವರು ಪ್ರಭಾರಿಯಾಗಿ ಕಳಸ ತಾಲೂಕಿನ ಮೊದಲ ತಹಶೀಲ್ದಾರ್ ಆಗಿ ಅಧಿಕಾರ ವಹಿಸಿಕೊಂಡರು. ಅಂದು ತರಾತುರಿಯಾಗಿ ನಡೆದ ಕಾರ್ಯಕ್ರಮದಿಂದಾಗಿ ಒಂದಷ್ಟು ಭಿನ್ನಾಭಿಪ್ರಾಯಗಳು ಕೂಡ ವ್ಯಕ್ತವಾಗಿತ್ತು. ಅಂದಿನಿಂದ ಕಳಸ ತಾಲ್ಲೂಕು ಕಚೇರಿ ಸದಾ ಒಂದಲ್ಲ ಒಂದು ಸಮಸ್ಯೆಗಳಿಂದ ಸುದ್ಧಿಯಾಗುತ್ತಿದ್ದ ತಾಲ್ಲೂಕು ಕಛೇರಿಗೆ ಎರಡು ವರ್ಷಗಳ ಕಾಲ ಒಬ್ಬರೇ ಒಬ್ಬ ತಹಶೀಲ್ದಾರ್ ಕಳಸ ತಾಲ್ಲೂಕಿನಲ್ಲಿ ಸರಿಯಾಗಿ ನೆಲೆಯೂರದೆ ಮೂರ್ನಾಲ್ಕು ತಿಂಗಳಿಗೊಬ್ಬರಂತೆ ತಹಶೀಲ್ದಾರ್ ಬದಲಾವಣೆಯಾಗಿ ಈಗ ಪ್ರಸ್ತುತ ಕಳಸ ತಾಲ್ಲೂಕಿನ ಒಂಬತ್ತನೇ ತಹಶೀಲ್ದಾರ್ ಆಗಿ ಎಸ್.ಶಾರದ ಅವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಒಂದು ತಾಲ್ಲೂಕು ಎಂದು ಹೇಳಲು ಇರಬೇಕಾದ ಸುಮಾರು 28 ಕ್ಕೂ ಹೆಚ್ಚು ಕಚೇರಿಗಳು ಇರಬೇಕಾಗಿದ್ದು, ಇತ್ತೀಚೆಗೆ ಕಳಸ ತಾಲ್ಲೂಕು ಪಂಚಾಯಿತಿ ಆಗಿರುವುದು ಬಿಟ್ಟರೆ ಇನ್ಯಾವುದೇ ಕಚೇರಿ ತೆರೆಯುವ ಭಾಗ್ಯ ಕಳಸಕ್ಕೆ ಬರದೆ ಇರುವುದರಿಂದ ಕಳಸದಲ್ಲಿ ಪ್ರತಿ ನಿತ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮೆಸೇಜ್ ಗಳಂತೆ ಕಳಸ ಒಂದು ಶಂಕಿತ ತಾಲೂಕು ಆಗಿಯೇ ಉಳಿದಿದೆ.
ತಹಸೀಲ್ದಾರ್ ಹುದ್ದೆಗೆ 3 ತಿಂಗಳಿಗೆ ಓರ್ವರಂತೆ ಹೊಸ ಹೊಸ ತಹಸೀಲ್ದಾರ್ ಬರುತ್ತಿದ್ದು, ಇದು ತಾಲ್ಲೂಕು ಕಚೇರಿ ವಾಸ್ತು ದೋಷವೋ ಅಥವಾ ಆಡಳಿತ ಯಂತ್ರದ ಪ್ರಭಾವವೋ ಎಂದು ಜನರು ಗೊಂದಲದಲ್ಲಿದ್ದಾರೆ.
ಯಾರೊಬ್ಬ ತಹಸೀಲ್ದಾರ್ ಬಂದರೆ ಅವರು ಅಧಿಕೃತ ವಾಗಿ ಕಡತ ಮಂಜೂರು ಮಾಡಲು ಬೆಂಗಳೂರು ಕೇಂದ್ರ ಕಚೇರಿಯಿಂದ ಗುರುತಿನ ಚೀಟಿ ಪಡೆಯಬೇಕಿದೆ. ಈ ಪ್ರಕ್ರಿಯೆಗೆ ಸುಮಾರು 3 ತಿಂಗಳು ಬೇಕಾಗುತ್ತದೆ. ಆದರೆ ಕಳಸದಲ್ಲಿ ಹೊಸ ತಹಸೀಲ್ದಾರ್ ಗುರುತಿನ ಚೀಟಿ ಮಾಡುವಷ್ಟರಲ್ಲಿ ಇನ್ನೊರ್ವ ಹೊಸ ತಹಸೀಲ್ದಾರ್ ಬಂದಿರುತ್ತಾರೆ. ಪ್ರಸ್ತುತ 3 ತಿಂಗಳ ಹಿಂದೆ ಬಂದ ದಯಾನಂದ ತಹಸೀಲ್ದಾರ್ ವರ್ಗಾವಣೆಗೊಂಡಿದ್ದು, ಚಿಕ್ಕಮಗಳೂರು ಎ. ಸಿ. ಕಚೇರಿಯಲ್ಲಿದ್ದ ಎಸ್. ಶಾರದ ನೂತನ ತಹಸೀಲ್ದಾರ್ ಆಗಿ ಪ್ರಭಾರೆ ವಹಿಸಿಕೊಂಡಿರುತ್ತಾರೆ.
ರಾಜಕೀಯ ಮುಖಂಡರ ನಿರಂತರ ಹಸ್ತಕ್ಷೇಪ
ಯಾವುದೇ ಆಡಳಿತ ಪಕ್ಷ ಇದ್ದರೂ ಕೂಡ ತಾಲೂಕು ಆಡಳಿತದಲ್ಲಿ ತನ್ನದೇ ಆದ ಹಸ್ತಕ್ಷೇಪ ಮಾಡುತ್ತಿರುವುದು ಸಾಮಾನ್ಯವಾಗಿರುತ್ತದೆ. ಆದರೆ ದಿನೇ ದಿನೇ ಈ ಹಸ್ತಕ್ಷೇಪ ಮಿತಿಮೀರಿದು ಯಾರೊಬ್ಬ ಅಧಿಕಾರಿಯೂ ತಾಲೂಕಿನಲ್ಲಿ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುವ ಸ್ಥಿತಿ ಕಳಸದಲ್ಲಿ ಇಲ್ಲ ಎಂದು ಸಾರ್ವಜನಿಕರ ಆರೋಪ ಆಗಿರುತ್ತದೆ.
ಸಾರ್ವಜನಿಕರ ಕುಂದು ಕೊರತೆ ಕೇಳುವ ಬದಲು ತಾಲೂಕು ಕಚೇರಿಯಲ್ಲಿ ಅಧಿಕಾರಿ ಸಿಬ್ಬಂದಿಗಳು ಹೆಚ್ಚಾಗಿ ರಾಜಕೀಯ ಮುಖಂಡರ ಜೊತೆ ಚರ್ಚೆಯಲ್ಲಿ ತೊಡಗಿರುತ್ತಾರೆ. ಆಡಳಿತ ಪಕ್ಷದಲ್ಲಿಯೂ ಕೂಡ ಬಣ ರಾಜಕೀಯದಿಂದಾಗಿ, ಅಧಿಕಾರಿಗಳು ಯಾರ ಮಾತು ಕೇಳಬೇಕು ಎಂಬ ಗೊಂದಲದಲ್ಲಿದ್ದಾರೆ.
ಒಟ್ಟಾರೆಯಾಗಿ ಕಳಸ ತಾಲೂಕು, ಮೂಡಿಗೆರೆ ತಾಲ್ಲೂಕು ಕಚೇರಿಗಳನ್ನು ಅವಲಂಬಿಸದೆ ಶಂಕಿತ ತಾಲೂಕು ಎಂಬ ಹಣೆಪಟ್ಟಿಯಿಂದ ಯಾವಾಗ ಹೊರಬರಲಿದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಜಿ.ಕೆ.ಮಂಜಪ್ಪಯ್ಯ: ಅಧ್ಯಕ್ಷರು ಕೆಸಿಎ ಬ್ಯಾಂಕ್
ಇಲ್ಲಿಯ ತಾಲೂಕು ಕೇಂದ್ರದ ವಿಷ್ಯಾವಾಗಿ ಸಾರ್ವಜನಿಕ ಸಮಿತಿಯ ಮುಖಾಂತರ ಈಗಾಗಲೇ ಎಲ್ಲಾ ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಅರ್ಜಿ ನೀಡಿದ್ದೇವೆ.ಇಲ್ಲಿ ಯಾರಲ್ಲೂ ಹೇಳಿದರೂ ಕೂಡ ಯಾವುದೂ ಪ್ರಯೋಜನಕ್ಕೆ ಬರುತ್ತಿಲ್ಲ. ಸರ್ಕಾರದ ಮುಖಾಂತರ ಯಾವುದೂ ಆಗುತ್ತಿಲ್ಲ.ಯಾವ ಮಂತ್ರಿಯನ್ನು ಬೇಟಿ ಮಾಡಲು ಕೂಡ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಮಿತಿಯ ಮುಖಾಂತರ ಬರುವ ತಿಂಗಳಲ್ಲಿ ಹೈಕೋರ್ಟ್ ಮೆಟ್ಟಿಲೇರಲು ತೀರ್ಮಾನ ಮಾಡಿದ್ದೇವೆ.
ಗೋಪಾಲ ಎನ್ ಶೆಟ್ಟಿ: ಮುಖಂಡರು ಭಾರತೀಯ ಕಮ್ಯೂನೀಷ್ಟ್ ಪಕ್ಷ
ಕಳಸ ತಾಲೂಕಿನಲ್ಲಿ ಮೂರು ತಿಂಗಳಿಗೊಮ್ಮೆ ಬದಲಾವಣೆಯಾಗುತ್ತಿರುವ ತಹಶೀಲ್ದಾರ್ ನಿಂದ ಜನಸಾಮಾಣ್ಯರಿಗೆ ಸಾಕಷ್ಟು ತೊಂದರೆಗಳು ಆಗುತ್ತಿದೆ.ಒಬ್ಬ ತಹಶೀಲ್ದಾರ್ ಬಂದು ಇಲ್ಲಿಯ ಹಾಗು ಹೋಗುಗಳ ಬಗ್ಗೆ ತಿಳಿಯಲು ಕನಿಷ್ಟ ಆರು ತಿಂಗಳು ಕಾಲಾವಕಾಶ ಬೇಕು.ಆದರೆ ಇಲ್ಲಿ ಅಷ್ಟರೊಳಗಡೆ ವರ್ಗಾವಣೆಯಾಗುತ್ತಿದೆ.ಆಡಳಿತ ವ್ಯವಸ್ಥೆ ಅವರವರ ಹಿತಾಶಕ್ತಿಗೋಸ್ಕರ ಈ ರೀತಿಯ ಕೆಲಸಗಳು ಆಗುತ್ತಿದೆ.ಕಳಸ ತಾಲೂಕು ಕೇಂದ್ರವಾಗಿ ಇಲ್ಲಿಯ ಜನರಿಗೆ ಯಾವುದೇ ಪ್ರಯೋಜನ ಆಗುತ್ತಿಲ್ಲ. ನೇಮಕವಾದ ತಹಶೀಲ್ದಾರ್ ಅವರನ್ನು ಇಲ್ಲಿ ನಿಲ್ಲಿಸುವಂತ ಕೆಲಸ ಆಡಳಿತ ವ್ಯವಸ್ಥೆಗೆ ಆಗುತ್ತಿಲ್ಲ ಎಂದರೆ ಇದು ಅವರ ವೈಫ್ಯಲ್ಯವನ್ನು ಎತ್ತಿ ತೋರಿಸುತ್ತಿದೆ.
ವಿಶ್ವನಾಥ, ಪ್ರಧಾನ ಕಾರ್ಯದರ್ಶಿ ಕಳಸ ಬ್ಲಾಕ್ ಕಾಂಗ್ರೆಸ್ ಸಮಿತಿ
ಈ ಹಿಂದಿನ ಸರ್ಕಾರದ ಅವಧಿಯಲ್ಲಿ ಸಾಕಷ್ಟು ಪ್ರಮಾಣದ ನಕಲಿ ಸಾಗುವಾಳಿ ಚೀಟಿ ವಿತರಣೆ ಆಗಿದೆ. ಇದರ ತನಿಖೆಯು ಸಮಗ್ರವಾಗಿ ಈಗಾಗಲೇ ಆಗಿರುವುದರಿಂದ ಕೆಲವರ ಪಹಣಿ ವಜಾ ಆಗಿದ್ದಲ್ಲದೆ ಅಧಿಕಾರಿಗಳಿಗೂ ತೊಂದರೆ ಆಗಿದೆ.ಇದರಿಂದ ಅಧಿಕಾರಿಗಳು ಕಳಸಕ್ಕೆ ಬರಲು ಒಪ್ಪುತ್ತಿಲ್ಲ.ಈ ಬಗ್ಗೆ ಸದ್ಯದಲ್ಲಿಯೇ ಮಾನ್ಯ ಶಾಸಕರ ಮುಖಾಂತರವಾಗಿ ಸಚಿವರ ಗಮನ ಸೆಳೆದು ಕಳಸಕ್ಕೆ ಖಾಯಂ ತಹಶೀಲ್ದಾರರನ್ನು ನೇಮಕ ಮಾಡಲು ಪ್ರಯತ್ನಿಸುತ್ತೇವೆ.
ಬಿ.ಕೆ.ಮಹೇಶ್, ಅಧ್ಯಕ್ಷರು ಕಳಸ ಬಿಜೆಪಿ ಯುವ ಮೋರ್ಚಾ
ಕಳಸ ತಾಲೂಕು ಕಚೇರಿ ಹೆಸರಿಗೆ ಅಷ್ಟೇ ಎಂಬುದು ವಿಷಾದನೀಯ, ತಾಲೂಕು ದಂಡಾಧಿಕಾರಿಗಳು ನೇಮಕಗೊಳ್ಳುವುದು ನಂತರ ಕೆಲವೇ ದಿನಗಳಲ್ಲಿ ವರ್ಗಾವಣೆ ಆಗುವುದು. ಇದು ಕಳಸ ತಾಲೂಕಿನ ಸದ್ಯದ ಪರಿಸ್ಥಿತಿ. ತಾಲೂಕಿನ ಜನರಿಗೆ 94 ಸಿ ನಡಿ 53 ನಲ್ಲಿ ಹಕ್ಕು ಪತ್ರಗಳು ಸಿಗುವುದು ಮರೀಚಿಕೆಯಾಗಿ ಉಳಿದಿದೆ, ಇನ್ನು ದಿನನಿತ್ಯದ ಸಣ್ಣಪುಟ್ಟ ಕೆಲಸಗಳಿಗೂ ಕೂಡ ಮೂಡಿಗೆರೆಗೆ ಅಲೆಯುವಂತ ಪರಿಸ್ಥಿತಿ ಕಳಸದ ಜನತೆಗೆ ತಪ್ಪಿದ್ದಲ್ಲ . ಇವೆಲ್ಲ ನಿವಾರಣೆಗೊಳ್ಳಬೇಕೆಂದರೆ ಮುಂದಿನ ದಿನಗಳಲ್ಲಿ ಸರ್ಕಾರವು ಕಾಯಂ ದಂಡಾಧಿಕಾರಿಗಳ ನೇಮಕ ಮಾಡುವುದರ ಮೂಲಕ, ಕಳಸ ಸಾರ್ವಜನಿಕರಿಗೆ ನ್ಯಾಯವೊದಗಿಸಬೇಕು.