

ಕಳಸ ಲೈವ್ ವರದಿ
ಸಂಸೆ ಪಟ್ಟಣದಲ್ಲಿ ತುಂಬಿಕೊಂಡಿದ್ದ ರಾಶಿ ರಾಶಿ ಕಸದಿಂದ ಬೇಸೆತ್ತ ಗ್ರಾಮಸ್ಥರು, ಆಟೋ, ಜೀಪ್ ಚಾಲಕರು ಸೇರಿ ಸಂಸೆ ಪಟ್ಟಣದ ಸ್ವಚ್ಚತೆಯನ್ನು ತಾವೇ ಮಾಡಿಕೊಂಡರು.
ಸಂಸೆ ಪಟ್ಟಣದ ಆಟೋ ನಿಲ್ದಾಣ, ಪ್ರಯಾಣಿಕರ ತಂಗುದಾನ, ಜೀಪ್ ನಿಲ್ದಾಣದಲ್ಲಿ ಕಳೆದ ಕೆಲ ದಿನಗಳಿಂದ ತ್ಯಾಜ್ಯಗಳು ತುಂಬಿ ಹೋಗಿದ್ದವು.ಅಲ್ಲದೆ ಮಳೆ ನೀರಿನಿಂದ ಕೊಚ್ಚಿಕೊಂಡು ಬಂದಿದ್ದ ಮಣ್ಣಿನ ರಾಶಿಯು ತುಂಬಿ ಹೋಗಿತ್ತು. ಸಂಸೆ ಪಂಚಾಯಿತಿಗೆ ಹೋಗುವ ರಸ್ತೆಯಲ್ಲೇ ಸಾಕಷ್ಟು ಕಸಗಳು ತುಂಬಿ ಹೋಗಿತ್ತು.ಈ ಬಗ್ಗೆ ಗ್ರಾಮಸ್ಥರು, ಜೀಪ್, ಆಟೋ ಚಾಲಕರು ಗ್ರಾಮ ಪಂಚಾಯಿತಿ ಹಾಗೂ ಜನ ಪ್ರತಿನಿಧಿಗಳ ಗಮನಕ್ಕೆ ತಂದರೂ ಕೂಡ ಯಾವುದೇ ಪ್ರಯೋಜನವಾಗಿರಲಿಲ್ಲ. ಇದರಿಂದ ಬೇಸೆತ್ತ ಗ್ರಾಮಸ್ಥರು ಹಣ ಸಂಗ್ರಹಿಸಿ ಜೆಸಿಬಿ ಮತ್ತು ಶ್ರಮದಾನದ ಮೂಲಕ ಮಣ್ಣುಗಳನ್ನು ತೆರವು ಮಾಡಿ ಪಟ್ಟಣವನ್ನು ಸ್ವಚ್ಚಗೊಳಿಸಿದರು.

ಸಂಸೆ ಗ್ರಾಮ ಪಂಚಾಯಿತಿಯಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಭಿನ್ನಾಭಿಪ್ರಾಯದಿಂದಾಗಿ ಗ್ರಾಮದ ಅಭಿವೃದ್ಧಿಗೆಂದು ಬಂದಿರುವ ಸುಮಾರು 1ಕೋಟಿ 26 ಲಕ್ಷ ಹಣವನ್ನು ಯಾವುದೇ ಅಭಿವೃದ್ಧಿಗೆ ಖರ್ಚು ಮಾಡದೆ ಹಾಗೆ ಇರಿಸಿಕೊಂಡ ಬಗ್ಗೆ ಕಳಸ ಲೈವ್ ಸೇರಿದಂತೆ ಪತ್ರಿಕೆಗಳು, ಸ್ಥಳಿಯ ಯೂಟ್ಯೂಬ್ ಚಾನಲ್ ಗಳು ವರದಿಯನ್ನು ಮಾಡಿತ್ತು.
ಆದರೂ ಎಚ್ಚೆತ್ತುಕೊಳ್ಳದ ಇಲ್ಲಿಯ ಅಡಳಿತ ವರ್ಗ ತನ್ನ ಗ್ರಾಮದ ಸ್ವಚ್ಚತೆಯನ್ನು ಕೂಡ ಮಾಡದೆ ನಿರ್ಲಕ್ಷ್ಯ ವಹಿಸುತ್ತಿದೆ.ಗ್ರಾಮದಲ್ಲಿರುವ ತ್ಯಾಜ್ಯದ ತೊಟ್ಟಿಗಳು ತುಂಬಿ ಕಸ ರಸ್ತೆಪೂರ್ತಿ ಹರಡಿಕೊಂಡಿದೆ. ತಮ್ಮ ಊರಿನ ಅಭಿವೃದ್ಧಿಯ ಹಿನ್ನಡೆ ಮತ್ತು ಪಂಚಾಯಿತಿಯ ನೀರಸ ಪ್ರತಿಕ್ರೀಯೆಯನ್ನು ಸಾಮಾಜಿಕ ಜಾಲತಾಣದಲ್ಲಿ ಗ್ರಾಮಸ್ಥರು ಅಸಮಾದಾನವನ್ನು ಕೂಡ ವ್ಯಕ್ತಪಡಿಸಿದ್ದರು.

ಸಾಕಷ್ಟು ಅನುದಾನ ಇದ್ದರೂ ಕೂಡ ಯಾವುದೇ ಅಭಿವೃದ್ಧಿಯನ್ನು ಮಾಡದೆ ಗ್ರಾಮ ಪಂಚಾಯಿತಿ ನಿರ್ಲಕ್ಷ್ಯ ವಹಿಸುತ್ತಿದೆ.ಕನಿಷ್ಟ ಊರಿನಲ್ಲಿ ತುಂಬಿಕೊಂಡಿರುವ ಕಸ ವಿಲೇವಾರಿ ಕೂಡ ಮಾಡುತ್ತಿಲ್ಲ. ಸಂಸೆ ಪಟ್ಟಣ ಸೇರಿದಂತೆ ಪಂಚಾಯಿತಿಗೆ ಹೋಗುವ ರಸ್ತೆಯಲ್ಲಿಯೇ ಕಸ ತುಂಬಿಕೊಂಡಿದೆ.ಮಳೆಗಾಲದಲ್ಲಿ ನೀರಿನ ಜೊತೆ ಬಂದ ಮಣ್ಣನ್ನು ಕೂಡ ತೆರವು ಮಾಡದೆ ಸಾಕಷ್ಟು ತೊಂದರೆ ಉಂಟಾಗುತ್ತಿತ್ತು.ಆದ್ದರಿಂದ ಗ್ರಾಮಸ್ಥರು ಆಟೋ ಚಾಲಕರು, ಜೀಪ್ ಚಾಲಕರು ಸೇರಿ ಮಣ್ಣು ತೆರವಿನ ಜೊತೆ ಪಟ್ಟದಲ್ಲಿ ತುಂಬಿಕೊಂಡಿದ್ದ ಕಸವನ್ನು ತೆರವು ಮಾಡಿದ್ದೇವೆ ಎಂದು ಆಟೋ ಚಾಲಕ ವರ್ಧಮಾನ ಬೇಸರದಿಂದ ಹೇಳುತ್ತಾರೆ.
ಸ್ವಚ್ಚತೆಯ ಶ್ರಮದಾನದಲ್ಲಿ ಬದ್ರುದ್ಧಿನ್, ಪ್ರವೀಣ್, ಚೇತನ, ಯೂಸೆಫ್, ವಿಷ್ಣು, ರಮೇಶ್, ಹೆರಾಲ್ಡ್, ರವಿ, ಸಿದ್ದಾರ್ಥ್ ಇತರರು ಇದ್ದರು.
