ಕಳಸ ಲೈವ್ ವರದಿ
ಕಳಸ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಜ್ಞ ವೈದ್ಯರು ಮತ್ತು ಸಿಬ್ಬಂದಿಗಳನ್ನು ತುರ್ತು ನೇಮಕ ಮಾಡಿ ಇಲ್ಲವಾದಲ್ಲಿ ಮೇ 15ರಿಂದ ಸಮುದಾಯ ಆರೋಗ್ಯ ಕೇಂದ್ರ ಮುಂಬಾಗ ಉಪವಾಸ ಸತ್ಯಾಗ್ರಹ ಮಾಡುವುದಾಗಿ ಡಾ.ರಾಜ್ ಕನ್ನಡ ಸಂಘ ಮತ್ತು ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ಎಚ್ಚರಿಸಿದೆ.
ಈ ಬಗ್ಗೆ ಕಳಸ ತಹಶೀಲ್ದಾರ್ ಅವರಿಗೆ ಮನವಿಯನ್ನು ಸಲ್ಲಿಸಿದ್ದು, ಕಳಸ ಪೇಟೆಯಲ್ಲಿ ಸುಸಜ್ಜಿತವಾದ ಸಮುದಾಯ ಆರೋಗ್ಯ ಕೇಂದ್ರವಿದ್ದು, ಈ ಸಮುದಾಯ ಆರೋಗ್ಯ ಕೇಂದ್ರವು ಈ ಭಾಗದ ಸುತ್ತಮುತ್ತಲಿನ ಎಲ್ಲಾ ಹಳ್ಳಿಗಳಿಗೂ ಪ್ರಮುಖವಾದ ಆಸ್ಪತ್ರೆಯಾಗಿರುತ್ತದೆ ಮತ್ತು ಈ ಭಾಗದಲ್ಲಿ ವಾಸ ಮಾಡುತ್ತಿರುವ ಬಡಕೃಷಿಕರು ಮತ್ತು ಕೂಲಿ ಕಾರ್ಮಿಕರು, ಸಣ್ಣ ಸಣ್ಣ ರೈತಾಪಿವರ್ಗದವರು ಈ ಸಮುದಾಯ ಆರೋಗ್ಯ ಕೇಂದ್ರವನ್ನೇ ನಂಬಿಕೊಂಡಿರುತ್ತಾರೆ.
ಆದರೆ ಆಸ್ಪತ್ರೆಯಲ್ಲಿ ಒಂದು ತಿಂಗಳಿನಿಂದ ವೈದ್ಯರೇ ಇರುವುದಿಲ್ಲ ಮತ್ತು ಸಿಬ್ಬಂದಿಗಳ ಕೊರತೆಯು ಸಹಾ ಇರುತ್ತದೆ. ತುರ್ತಾಗಿ ಯಾರೇ ರೋಗಿಗಳು ಇಲ್ಲಿಗೆ ಬಂದರೂ ವೈದ್ಯರಿಲ್ಲದೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಮತ್ತು ಯಾವುದೇ ಅಪಘಾತ ಅಥವಾ ಇನ್ನಿತರ ಕಾರಣಗಳಿಂದ ಮೃತರಾದ ವ್ಯಕ್ತಿಯ ಮರಣೋತ್ತರ ಪರೀಕ್ಷೆ ಮಾಡಲು ಸಹಾ ಇಲ್ಲಿ ವೈದ್ಯರಿಲ್ಲದೆ ಇರುವುದರಿಂದ ದೂರದ ಬಾಳೆಹೊನ್ನೂರು, ಕೊಪ್ಪ, ಮೂಡಿಗೆರೆ ಮುಂತಾದ ಕಡೆಗಳಿಗೆ ಶವ ತೆಗೆದುಕೊಂಡು ಹೋಗಬೇಕಾಗಿರುತ್ತದೆ. ವೈದ್ಯರ ಸಹಿ ವಗೈರೆ ಆಗಬೇಕಾದರೆ ಮೂಡಿಗೆರೆ, ಬಾಳೆಹೊನ್ನೂರು, ಕಾರ್ಕಳ, ಕೊಪ್ಪ ಮುಂತಾದ ಕಡೆಗಳಿಗೆ ಹೋಗಬೇಕಾದ ಅನಿವಾರ್ಯತೆ ಉಂಟಾಗಿರುತ್ತದೆ.
ಆದುದರಿಂದ ಕಳಸದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರುಗಳನ್ನು ನೇಮಕ ಮಾಡಿ. ಇಲ್ಲವಾದಲ್ಲಿ ಖಾಯಂ ವೈದ್ಯರನ್ನು ನೇಮಕ ಆಗುವವರೆಗೂ ದಿನಾಂಕ : 15-05-2025ರಿಂದ ಸಮುದಾಯ ಆರೋಗ್ಯ ಕೇಂದ್ರದ ಎದುರು ಉಪವಾಸ ಸತ್ಯಾಗ್ರಹವನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ತಮ್ಮ ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ಕೊಡುವ ಸಂದರ್ಭದಲ್ಲಿ ಡಾ.ರಾಜ್ ಕನ್ನಡ ಸಂಘದ ಅಧ್ಯಕ್ಷ ಕನ್ನಡ ರಾಜು, ಕರವೇ ಅಧ್ಯಕ್ಷ ಚೌಡ ನಾಯ್ಕ್, ಗೌರವಾಧ್ಯಕ್ಷ ಮಲ್ನಾಡ್ ಶರೀಫ್, ಸಂತೋಷ್, ಶ್ಯಾಮಚಾರ್ ಇತರರು ಇದ್ದರು.


