ಕಳಸ ಲೈವ್ ವರದಿ
ಕಳಸ ಭಗವಾನ್ ೧೦೦೮ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ 2025ರ ಮೇ 18ರಿಂದ ಮೇ 22ರ ವರೆಗೆ ನಡೆಯುವ ಧಾಮಸಂಪ್ರೋಕ್ಷಣಾ ಪೂರ್ವಕ ನಡೆಯುವ ಪಂಚಕಲ್ಯಾಣ ಮಹೋತ್ಸವದ ಆಹ್ವಾನ ಪತ್ರಿಕೆಯನ್ನು ಬುಧವಾರ ಬಿಡುಗಡೆ ಮಾಡಲಾಯಿತು.
ಪಟ್ಟದ ಪುರೋಹಿತರಾದ ಅಜಿತ್ ಪ್ರಸಾದ್ ಅವರು ವಿವಿಧ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದ ನಂತರ ಆಹ್ವಾನ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು.
ಕಾರ್ಕಳದ ಶ್ರೀ ಮಠದ ನಾಲ್ಕು ಸೀಮೆಗಳಲ್ಲಿ ಒಂದಾದ ಕಳಸ ಸೀಮೆಯ ಕಳಸ ಭಗವಾನ್ ೧೦೦೮ ಶ್ರೀ ಚಂದ್ರನಾಥ ಸ್ವಾಮಿಯ ನೂತನ ಶಿಲಾಮಯ ಬಸದಿಯ ಧಾಮಸಂಪ್ರೋಕ್ಷಣೆ ಪೂರ್ವಕ ಮತ್ತು ಮಾನಸ್ತಂಭೋಪರಿ ಚತುರ್ಮುಖ ಬಿಂಬ ಪ್ರತಿಷ್ಠಾಪನೆ ಹಾಗೂ ನೂತನ ಶಿಲಾಮಯ ಬಸದಿಯಲ್ಲಿ ಭಗವಾನ್ ಶ್ರೀ ೧೦೦೮ ಪಾಶ್ವನಾಥ ಸ್ವಾಮಿಯ ಜಿನಬಿಂಬದ ಪಂಚಕಲ್ಯಾಣ ಹಾಗೂ ಶ್ರೀ ಪದ್ಮಾವತಿ ಅಮ್ಮನವರ ದೇವಸ್ಥಾನದ ಧಾಮಸಂಪ್ರೋಕ್ಷಣಾ ಪೂರ್ವಕ ಪ್ರತಿಷ್ಠಾ ಮಹೋತ್ಸವವು ಪರಮಪೂಜ್ಯ ಆಚಾರ್ಯ ೧೦೮ ಗುಣಭದ್ರನಂದಿ ಮುನಿಮಹಾರಾಜರ ಮತ್ತು ಅವರ ಸಂಘದ ಪಾವನ ಸಾನಿಧ್ಯದಲ್ಲಿ ಮತ್ತು ಕಾರ್ಕಳ ಚತುಃಸಿದ್ಧ ಸಿಂಹಾಸನಾಧೀಶ್ವರರಾದ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರು, ಶ್ರೀ ಜೈನಮಠ ದಾನಾಶಾಲಾ ಕಾರ್ಕಳ ಇವರ ಪಾವನ ಸಾನಿಧ್ಯ ಮತ್ತು ಮಾರ್ಗದರ್ಶನದಲ್ಲಿ ಹಾಗೂ ನಾಡಿನ ಸಮಸ್ತ ಜೈನ ಮಠಗಳ ಪರಮಪೂಜ್ಯ ಭಟ್ಟಾರಕ ಸ್ವಾಮೀಜಿಗಳ ಪಾವನ ಸಾನಿಧ್ಯ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿಗಳಾದ ರಾಜರ್ಷಿ ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ದಿನಾಂಕ 18-05-2025ನೇ ರವಿವಾರದಿಂದ ದಿನಾಂಕ 22-05-2025ನೇ ಗುರುವಾರ ಪರ್ಯಂತ ಭಗವಾನ್ ಶ್ರೀ ಚಂದ್ರನಾಥಸ್ವಾಮಿ ಮತ್ತು ಶ್ರೀ ಜ್ವಾಲಾಮಾಲಿನಿ ಸನ್ನಿಧಿಯಲ್ಲಿ ಹಾಗೂ ಶ್ರೀ ಪಾರ್ಶ್ವನಾಥ ಸ್ವಾಮಿ ಮತ್ತು ಶ್ರೀ ಪದ್ಮಾವತಿ ಸನ್ನಿಧಿಯಲ್ಲಿ ಪಂಚಕಲ್ಯಾಣ ಮಹೋತ್ಸವವು ಜೈನ ಆಗಮೋಕ್ತ ವಿಧಿ-ವಿಧಾನಗಳೊಂದಿಗೆ ನೆರವೇರಲಿದೆ ಎಂದು ಕಳಸ ಭಗವಾನ್ ೧೦೦೮ ಶ್ರೀ ಚಂದ್ರನಾಥ ಸ್ವಾಮಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕೆ.ಸಿ.ಧರಣೇಂದ್ರ ಈ ಸಂದರ್ಭದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಸಮಿತಿ ಉಪಾಧ್ಯಕ್ಷ ಐ.ಎ.ಚಂದ್ರರಾಜಯ್ಯ, ಕಾರ್ಯದರ್ಶಿ ಎನ್.ನಿರ್ಮಲ್ಕುಮಾರ್, ಖಜಾಂಚಿ ಹೆಚ್.ಸಿ.ಅಣ್ಣಯ್ಯ, ಸಹಕಾರ್ಯದರ್ಶಿ ಅಜಿತ್ ಕುಮಾರ್ ಗುಮ್ಮಿನಕಾಡು, ಸದಸ್ಯರಾದ ಪ್ರಸಿದ್ಧ ಜೈನ್, ಬ್ರಹ್ಮದೇವ, ಎ.ಎ. ಸುರೇಶ್ ಕುಮಾರ್, ಎ.ಹರ್ಷೇಂದ್ರ, ಜಯಕೀರ್ತಿ, ರವಿ ಕೆಳಂಗಡಿ ಇತರರು ಇದ್ದರು.
