
ಕಳಸ ಲೈವ್ ವರದಿ
ತಾಲ್ಲೂಕಿನ ಕಳಸ ಠಾಣಾ ವ್ಯಾಪ್ತಿಯಲ್ಲಿ,”ಅಂತರಾಷ್ಟ್ರೀಯ ಮಾದಕ ವಸ್ತುಗಳ ಹಾಗೂ ಅಕ್ರಮ ಮಕ್ಕಳ ಕಳ್ಳ ಸಾಗಾಣಿಕೆ ವಿರೋಧಿ ದಿನ’ದ ಅಂಗವಾಗಿ ಕಾಲ್ನಡಿಗೆ ಜಾಥಾ ನಡೆಯಿತು.
ಬೆಳಿಗ್ಗೆ ಸುಮಾರು 11.30ರಿಂದ ಆರಂಭವಾದ ಈ ಜಾಥವು ನಾಢಕಛೇರಿಯಿಂದ ಕಳಸ ಪೇಟೆಯ ಮುಖ್ಯರಸ್ತೆಯ ಮೂಲಕ ಪೊಲೀಸ್ ಠಾಣೆಯ ವೃತ್ತದವರೆಗೆ ಸಾಗಿ, ಆನಂತರ ಅರಳಿಕಟ್ಟೆ ವೃತ್ತಕ್ಕೆ ಬಂದು ತಲುಪಿತು. ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮದ ಕುರಿತು ವಿದ್ಯಾರ್ಥಿಗಳು ಹಿಡಿದಿದ್ದ ಎಚ್ಚರಿಕೆಯ ಫಲಕಗಳು ನೋಡುಗರ ಗಮನ ಸೆಳೆದವು.
ಪ್ರತಿಜ್ಞಾ ವಿಧಿ ಬೋಧಿಸಿ, ವಿದ್ಯಾರ್ಥಿಗಳು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಕಳಸ ಠಾಣಾಧಿಕಾರಿ ಚಂದ್ರಶೇಖರ್, ಮಾದಕ ವಸ್ತುಗಳ ಸೇವನೆಯಿಂದಿಗುವ ದುಷ್ಪರಿಣಾಮಗಳ ಬಗ್ಗೆ ಎಚ್ಚರಿಕೆ ನೀಡಿದರು. ಉತ್ತಮ ಸಮಾಜಕ್ಕಾಗಿ, ಮಾದಕ ವಸ್ತುಗಳ ಮಾರಾಟ, ಡ್ರಗ್ಸ್ ಸೇವನೆಯಂತಹ ಕೆಟ್ಟ ಅಭ್ಯಾಸಗಳಿಗೆ ಬಲಿಯಾದವರು ಯಾರಾದರೂ ಕಂಡುಬಂದಲ್ಲಿ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು. ಅಲ್ಲದೇ ಮಾಹಿತಿ ನೀಡುವವರ ಹೆಸರನ್ನು ಗೌಪ್ಯವಾಗಿಡುವುದರ ಜೊತೆಗೆ ಬಹುಮಾನವನ್ನು ನೀಡಲಾಗುವುದು ಎಂದರು.
ಎಲ್ಲಾ ಪಕ್ಷದ ಮುಖಂಡರುಗಳು ಮಾತನಾಡಿ ಭವಿಷ್ಯದ ಕನಸು ಕಾಣುತ್ತಿರುವ ವಿದ್ಯಾರ್ಥಿಗಳು ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಉತ್ತಮ ಪ್ರಜೆಗಳಾಗಲು ಮಾದಕ ವಸ್ತುಗಳ ದುಶ್ಚಟಗಳಿಗೆ ಬಲಿಯಾಗದಂತೆ ಕರೆ ನೀಡಿದರು.
ವಿವಿಧ ಪಕ್ಷಗಳ ಮುಖಂಡರಾದ, ಮಂಜಪ್ಪಯ್ಯ, ಶೇಷಗಿರಿ, ರಫೀಕ್, ರಾಜೆಂದ್ರಪ್ರಸಾದ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನೀತಾ, ಭಾಸ್ಕರ್, ಶ್ರೇಣಿಕ್, ವೀರೇಂದ್ರ, ಸುಧೀರ್, ಮಹೇಶ್, ರಂಜನ್, ರಾಘು, ಜಗದೀಶ್ ಭಟ್ ಹಾಗೂ ಆಟೊ ಚಾಲಕರು ಮತ್ತು ಮಾಲೀಕರು, ಕಳಸ ಪೊಲೀಸ್ ಠಾಣೆಯ ಎಲ್ಲಾ ಸಿಬ್ಬಂದಿಗಳು, ವಿವಿಧ ಸಂಘಟನೆಗಳ ಪ್ರಮುಖರು, ಸಾರ್ವಜನಿಕರು ಪಾಲ್ಗೊಂಡಿದ್ದರು.