
ಕಳಸ ಲೈವ್ ವರದಿ
ತಾಲ್ಲೂಕಿನ ಸಂಸೆ-ಕುದುರೆಮುಖ ರಾಜ್ಯ ಹೆದ್ದಾರಿಯ ಸಂಸೆಯಲ್ಲಿ ಸೋಮವಾತಿ ನದಿಗೆ ಕಟ್ಟಿರುವ ಸೇತುವೆಯ ಮುರಿದು ಹೋದ ಕೈಪಿಡಿಗಳಿಗೆ ಸಂಸೆ ಘಟದ ಶೌರ್ಯ ವಿಪತ್ತು ತಂಡದ ಸದಸ್ಯರು ಬಿದಿರು ದಬ್ಬೆಗಳನ್ನು ಕಟ್ಟಿದ್ದಾರೆ.
೨೦೧೯ರಲ್ಲಿ ಸುರಿದ ಮಹಾ ಮಳೆಗೆ ಈ ಸೇತುವೆಯ ಮೇಲೆ ನೀರು ಹರಿದು ಇದರ ಕೈಪಿಡಿಗಳು ತುಂಡಾಗಿ ಶಿಥಿಲಾವಸ್ಥೆ ತಲುಪಿತ್ತು.ರಾಜ್ಯ ಹೆದ್ದಾರಿಯಾಗಿದ್ದರೂ ಕೂಡ ಇದನ್ನು ಸರಿಪಡಿಸಲು ಲೋಕೋಪಯೋಗಿ ಇಲಾಖೆ ಮನಸ್ಸು ಮಾಡದೆ ನಿರ್ಲಕ್ಷತೆ ವಹಿಸಿತ್ತು.ಆದರೆ ಸೇತುವೆಗೆ ಕೈಪಿಡಿ ಇಲ್ಲದೆ ಸಾಕಷ್ಟು ಜಾನುವಾರುಗಳು ನದಿಗೆ ಬೀಳುತ್ತಿದ್ದವು.ಶಾಲಾ ಮಕ್ಕಳು ಇದೇ ಸೇತುವೆ ಮುಖಾಂತರವೇ ಶಾಲೆಗೆ ಹೋಗುತ್ತಾರೆ.ಶಾಲೆಗೆ ಹೋಗುವ ಮಕ್ಕಳು ಕೈಪಿಡಿ ಇಲ್ಲದ ಸೇತುವೆಯ ಮುಖಾಂತರ ನದಿಗೆ ಇಣುಕಿ ನೋಡುತ್ತಾರೆ.
ಇದನ್ನು ಗಮನಿಸಿದ ಶೌರ್ಯ ವಿಪತ್ತು ತಂಡದ ಸದಸ್ಯರು, ಆಟೋ ಚಾಲಕರು ಹಾಗೂ ಗ್ರಾಮಸ್ಥರು ಸೇರಿ ಕೈಪಿಡಿ ತುಂಡಾದ ಸ್ಥಳಗಳಿಗೆ ಬಿದಿರಿನ ದಬ್ಬೆಗಳನ್ನು ಕಟ್ಟಿ ಮಕ್ಕಳ ಮತ್ತು ಜಾನುವಾರುಗಳ ಸುರಕ್ಷತೆಯನ್ನು ಕಾಪಾಡಿದ್ದಾರೆ.
ಈ ಸೇತುವೆ ಶಿಥಿಲಗೊಂಡು ಆರು ವರ್ಷ ಸಂದರೂ ಕೂಡ ರಾಜ್ಯ ಹೆದ್ದಾರಿಯ ಈ ಸೇತುವೆಯನ್ನು ದುರಸ್ಥಿ ಮಾಡದೆ ಇರುವುದು ಲೋಕೋಪಯೋಗಿ ಇಲಾಖೆಯ ಬೇಜಾವಬ್ದಾರಿತನ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
