ಕಳಸ ಲೈವ್ ವರದಿ
ಮಾವಿನಕೆರೆ ಗ್ರಾಮದ ಸರ್ವೆ ನಂಬರ್ 175ರಲ್ಲಿ ನಮ್ಮ ಕುಟುಂಬದ 5 ಎಕರೆ ಭೂಮಿ ಇದೆ. ಅದೇ ಸರ್ವೆ ನಂಬರಿನಲ್ಲಿ 2019ರಲ್ಲಿ ಬಿಳುಗೋಡು ಪ್ರದೇಶದ ಕೃಷ್ಣಾಚಾರಿ ಮತ್ತು ಜಯಲಕ್ಷ್ಮಿ ಅವರಿಗೆ ಮನೆ ನಿವೇಶನ ಮಂಜೂರು ಮಾಡಿಸಿದಂತೆ ನಕಲಿ ಹಕ್ಕುಪತ್ರ ಸೃಷ್ಟಿಸಲಾಗಿದೆ. ಈ ನಕಲಿ ಹಕ್ಕುಪತ್ರದ ಆಧಾರದಲ್ಲಿ 2020ರಲ್ಲಿ ಗ್ರಾಮ ಪಂಚಾಯಿತಿ ಅವಧಿ ಮುಗಿದು ಆಡಳಿತಾಧಿಕಾರಿ ಇದ್ದ ಕಾಲದಲ್ಲಿ ಕಳಸ ಗ್ರಾಮ ಪಂಚಾಯಿತಿಯು ಇ-ಸ್ವತ್ತು ಕೂಡ ಮಾಡಿದೆ ಎಂದು ಜೆಡಿಎಸ್ ಕಳಸ ಘಟಕದ ಅಧ್ಯಕ್ಷ ಎಂ.ಬಿ. ಸಂತೋಷ್ ಸುದ್ದಿಗೋಷ್ಟಿಯಲ್ಲಿ ದೂರಿದರು.
ಫಾರಂ ನಂಬರ್ 53 ಮೂಲಕ ಅನರ್ಹರಿಗೂ ನೂರಾರು ಎಕರೆ ಭೂಮಿ ಕೊಡಿಸಲು ಈಗಾಗಲೇ ಹಲವಾರು ನಕಲಿ ಸಾಗುವಳಿ ಚೀಟಿ ನೀಡಲಾಗಿದ್ದು ಹಗರಣ ತನಿಖೆ ಹಂತದಲ್ಲಿದೆ. ಇದೀಗ 94 ಸಿ ಅರ್ಜಿ ಬಳಸಿ ಮನೆ ನಿವೇಶನಕ್ಕೆ ನಕಲಿ ಹಕ್ಕುಪತ್ರ ಕೊಡಿಸುವ ಜಾಲವೂ ಕೆಲಸ ಮಾಡುತ್ತಿರುವುದು ಪತ್ತೆ ಆಗಿದೆ. ತಾಲ್ಲೂಕಿನಲ್ಲಿ ನಕಲಿ ಹಕ್ಕುಪತ್ರ ಕೊಡಿಸುವ ನಾಲ್ಕೈದು ಜಾಲ ವ್ಯಾಪಕವಾಗಿದ್ದು ಕಂದಾಯ ಇಲಾಖೆ ಈ ಬಗ್ಗೆ ತನಿಖೆ ನಡೆಸಬೇಕು ಎಂದು ಜೆಡಿಎಸ್ ಕಳಸ ಘಟಕದ ಅಧ್ಯಕ್ಷ ಎಂ.ಬಿ.ಸAತೋಷ್ ಆಗ್ರಹಿಸಿದ್ದಾರೆ.
ಕಳಸ ಠಾಣೆಗೆ ಈ ಬಗ್ಗೆ ದೂರು ಸಲ್ಲಿಸಿರುವ ಎಂ.ಬಿ.ಸAತೋಷ್, ನಮ್ಮ ಕುಟುಂಬದ ಜಮೀನಿನ 175 ಸರ್ವೆ ನಂಬರಿನಲ್ಲಿ ನಕಲಿ ಹಕ್ಕು ಪತ್ರ ಪಡೆದಿರುವ ಕೃಷ್ಣಾಚಾರ್-ಜಯಲಕ್ಷ್ಮಿ ಅವರನ್ನು ಈ ಬಗ್ಗೆ ಕೇಳಿದಾಗ ಅವರು, ನಾವು ಅಮಾಯಕರು, ನಮಗೆ ಕಳಸ ಗ್ರಾಮ ಒನ್ ಕೇಂದ್ರದ ಆದರ್ಶ ಎಂಬುವರು 38 ಸಾವಿರ ಪಡೆದು ಹಕ್ಕು ಪತ್ರ ಮತ್ತು ಇ- ಸ್ವತ್ತು ಮಾಡಿಸಿಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.ಆದರೆ ಈ ಹಕ್ಕುಪತ್ರವು ನಕಲಿ ಎಂದು ಕಂದಾಯ ಇಲಾಖೆ ತಿಳಿಸಿದೆ. ಆದ್ದರಿಂದ ನಕಲಿ ಹಕ್ಕುಪತ್ರ ಕೊಡಿಸಿದ ಆದರ್ಶ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಸಂತೋಷ್ ಮನವಿ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅವರಿಗೂ ದೂರು ನೀಡುವುದಾಗಿ ತಿಳಿಸಿದ್ದಾರೆ.
ನಕಲಿ ಹಕ್ಕುಪತ್ರದ ದೂರಿನ ಬಗ್ಗೆ ಗ್ರಾಮ ಒನ್ ಕೇಂದ್ರದ ಆದರ್ಶ ಅವರನ್ನು ಕೇಳಿದಾಗ ಅವರು, 2019ರಲ್ಲಿ ನನ್ನ ಗ್ರಾಮ ಒನ್ ಕೇಂದ್ರವೇ ಇರಲಿಲ್ಲ. ಜೊತೆಗೆ 94ಸಿ ಅರ್ಜಿಯನ್ನು ಗ್ರಾಮ ಒನ್ ಮೂಲಕ ಸಲ್ಲಿಸಲು ಅವಕಾಶವೂ ಇಲ್ಲ. ಈ ನಕಲಿ ಹಕ್ಕುಪತ್ರಕ್ಕೂ ನನಗೂ ಸಂಬAಧ ಇಲ್ಲ. ನನ್ನ ಮೇಲಿನ ವೈಯಕ್ತಿಕ ದ್ವೇಷದಿಂದ ತೇಜೋವಧೆ ಮಾಡಲು ಬಡ ಕುಟುಂಬವೊAದನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
