
oplus_0
ಕಳಸ ಲೈವ್ ವರದಿ
ಪೊಲೀಸರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ, ನನಗೆ ನ್ಯಾಯ ಕೊಡಿಸಿ ಎಂದು ಮರಣ ಪತ್ರ ಬರೆದು ಸಂಸೆಯ ಪರಿಶಿಷ್ಟ ಜಾತಿಯ ಯುವಕ ನಾಗೇಶ್(೨೯) ಇಂದು ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಳೆದ ತಿಂಗಳು ಸಂಸೆ ಗ್ರಾಮದಲ್ಲಿ ಪೊಲೀಸ್ ಕಾನ್ಸ್ಟೇಬಲ್ ಸಿದ್ದೇಶ್ ತನ್ನ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರು ನೀಡಿದ್ದ ಪರಿಶಿಷ್ಟ ಜಾತಿಯ ಯುವಕ ನಾಗೇಶ್ ಬುಧವಾರ ಆತ್ಮಹತ್ಯೆ ನಿರ್ಧಾರ ಮಾಡಿದ್ದಾರೆ. ಅವರಿಗೆ ಪತ್ನಿ, ಒಂದೂವರೆ ತಿಂಗಳ ಮಗು ಇದೆ.
ಸಂಸೆ ಗ್ರಾಮದ ಬಸ್ತಿಗದ್ದೆಯ ನಿವಾಸಿ ಆಗಿದ್ದ ನಾಗೇಶ್ ತನ್ನ ಮನೆಯ ಪಕ್ಕದ ನೆಂಟರ ಮನೆಯಲ್ಲಿ ಬೆಳಿಗ್ಗೆ ೮ ಗಂಟೆಗೆ ನೇಣುಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಕುದುರೆಮುಖ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಸಿದ್ದೇಶ್ ಮತ್ತು ಇಬ್ಬರು ಸ್ಥಳೀಯರು ತನ್ನ ಮೇಲೆ ಹಲ್ಲೆ ಮಾಡಿದರು ಎಂದು ಆರೋಪಿಸಿ ನಾಗೇಶ್ ಜಾತಿ ನಿಂದನೆ ಮತ್ತು ಹಲ್ಲೆ ಬಗ್ಗೆ ದೂರು ನೀಡಿದ್ದರು. ಆನಂತರ ಒಂದು ವಾರ ಚಿಕ್ಕಮಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು.
ಇದೇ ದೂರಿನ ಬೆನ್ನಲ್ಲೇ ನಾಗೇಶ್ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಿ ಕುದುರೆಮುಖ ಪೊಲೀಸರು ನಾಗೇಶ್ ವಿರುದ್ಧವೂ ಪ್ರಕರಣ ದಾಖಲಿಸಿ ಆತನ ಆಟೊ ಮತ್ತು ಅಡಿಕೆಗೆ ಔಷಧಿ ಸಿಂಪಡಿಸುವ ಯಂತ್ರವನ್ನು ವಶಪಡಿಸಿಕೊಂಡಿದ್ದರು.
ನಾಗೇಶ್ ಈ ಪ್ರಕರಣಕ್ಕೆ ಸಂಬAಧಿಸಿದAತೆ ಜಾಮೀನು ಪಡೆದುಕೊಂಡಿದ್ದರು. ಆದರೆ ತನ್ನ ಆಟೊ ಬಿಡಿಸಿಕೊಳ್ಳಲಾರದೆ, ದುಡಿಮೆಯೂ ಇಲ್ಲದೆ ಆಟೊ ಸಾಲದ ಕಂತು ಕೂಡ ಕಟ್ಟಲಾರದೆ ಆರ್ಥಿಕ ಸಂಕಷ್ಟದಿAದ ಕಂಗಾಲಾಗಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪೊಲೀಸರ ಜೊತೆಗೆ ಜಟಾಪಟಿ ನಂತರ ನಾಗೇಶ್ ತನ್ನ ಫೋನ್ ಕರೆಯನ್ನೂ ಸ್ವೀಕರಿಸುತ್ತಿರಲಿಲ್ಲ. ಪೊಲೀಸರ ಬಗ್ಗೆ ಹೆದರಿಕೊಂಡಿದ್ದರು ಎಂದು ಆತನ ಪತ್ನಿ ತಿಳಿಸಿದ್ದಾರೆ.
ನಾಗೇಶ್ ಆತ್ಮಹತ್ಯೆಗೆ ಮೊದಲು ಬರೆದಿರುವ ಅಂತಿಮ ಪತ್ರದಲ್ಲಿ ತನ್ನ ಮೇಲೆ ಪೊಲೀಸ್ ಸಿಬ್ಬಂದಿಯ ದೌರ್ಜನ್ಯ ಆಗಿರುವ ಬಗ್ಗೆ ಪ್ರಸ್ತಾಪಿಸಿ ಆರೋಪಿಗಳ ಮೇಲೆ ಸೂಕ್ತ ಕ್ರಮ ಆಗಬೇಕು ಎಂದು ತಿಳಿಸಿದ್ದಾರೆ.
ಕಳಸ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಜಯ ಕುಮಾರ್, ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್ ಇದ್ದರು.
ಒಂದು ಹಂತದಲ್ಲಿ ಪೊಲೀಸರ ಜೊತೆ ತೀರ ಹರಿ ಹಾಯ್ದ ಕುಟುಂಬಸ್ಥರು ಮೃತ ದೇಹವನ್ನು ಆತ್ಮಹತ್ಯೆ ಮಾಡಲು ಯಾರು ಕಾರಣರು ಅವರು ಸ್ಥಳಕ್ಕೆ ಬರಬೇಕು ಅವರಿಗೆ ಶಿಕ್ಷೆ ನಾವೇ ಕೊಡುತ್ತೇವೆ. ಮೃತದೇಹವನ್ನು ಹೊತ್ತು ಅವರೆ ಮನೆಗೆ ತರಬೇಕು. ಪೊಲೀಸ್ ಕಾನ್ಸ್ಟೇಬಲ್ ಸಿದ್ದೇಶ್ ಅವರನ್ನು ಕೂಡಲೇ ಬಂಧಿಸಬೇಕು.ಅಲ್ಲಿಯವರೆಗೂ ಮರಣೋತ್ತರ ಪರೀಕ್ಷೆ ನಡೆಸಬಾರದು ಎಂದು ನಾಗೇಶ್ ಬಂಧುಗಳು ಆಗ್ರಹಿಸಿ ಪ್ರತಿಭಟನೆ ನಡೆಸಿದರು.
ದೂರು ಸ್ವೀಕರಿಸಿ ಮಾತನಾಡಿದ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ ಜಯ ಕುಮಾರ್, ನಾಗೇಶ್ ಸಾವಿನಿಂದ ನಮಗೂ ನೋವಾಗಿದೆ. ಒಂದು ತಿಂಗಳ ಮಗು ಮತ್ತು ಆತನ ಪತ್ನಿ ಬಗ್ಗೆ ನಮಗೂ ಸಹಾನುಭೂತಿ ಇದೆ.ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಿ ನಿಷ್ಪಕ್ಷಪಾತದ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಭರವಸೆ ನೀಡಿದ ನಂತರ ಮರಣೋತ್ತರ ಪರೀಕ್ಷೆ ನಡೆಸಲು ಕುಟುಂಬಸ್ಥರು ಒಪ್ಪಿದರು.