
ಕಳಸ ಲೈವ್ ವರದಿ
ಕಳಸ ಪ್ರದೇಶದ ಅಭಿವೃದ್ಧಿ ಕುರಿತು ಕಾಂಗ್ರೆಸ್ ನಾಯಕರು ನೀಡಿದ ಟೀಕೆಗಳಿಗೆ ಕಳಸ ಭಾರತೀಯ ಜನತಾ ಪಾರ್ಟಿಯ ತಾಲೂಕು ಅಧ್ಯಕ್ಷ ಶ್ರೀಕಾಂತ್ ಅವರು ತೀವ್ರ ಪ್ರತಿಕ್ರಿಯೆ ನೀಡಿದ್ದಾರೆ. ಅವರು ಪತ್ರಿಕಾ ಪ್ರಕಟಣೆಯ ಮೂಲಕ “ಕಳಸ ಭಾಗದ ಜನತೆಗೆ ಶಾಶ್ವತವಾದ ಅಭಿವೃದ್ಧಿ ಕೊಟ್ಟಿರುವುದು ಕಾಂಗ್ರೆಸ್ ಅಲ್ಲ, ಬಿಜೆಪಿ ಸರ್ಕಾರ” ಎಂದು ಸ್ಪಷ್ಟಪಡಿಸಿದ್ದಾರೆ.
ಅವರು ನೀಡಿದ ಮಾಹಿತಿಯ ಪ್ರಕಾರ:
ಹಿಂದೆ ಮಳೆಗಾಲದ ಆರು ತಿಂಗಳು ಕಳಸ ಪಟ್ಟಣವು ದ್ವೀಪದಂತಾಗುತ್ತಿತ್ತು. ಆದರೆ ಬಿಜೆಪಿ ಅಧಿಕಾರಾವಧಿಯಲ್ಲಿ ಹಲವಾರು ಪ್ರಮುಖ ಸೇತುವೆಗಳು ನಿರ್ಮಾಣಗೊಂಡು ಗ್ರಾಮಗಳ ಸಂಪರ್ಕ ಸುಗಮವಾಗಿದೆ. ಹೆಬ್ಬಾಳೆ ಸೇತುವೆ (₹16.5 ಕೋಟಿ), ಕೋಟೆಹೊಳೆ ಸೇತುವೆ (₹6 ಕೋಟಿ), ಕೊಲಮಗೆ ಸೇತುವೆ, ಮುಳ್ಳೋಡಿ ಸೇತುವೆ, ಬಿಳಿಗಲ್ ಸೇತುವೆ, ಕಾರ್ಲೆ ಸೇತುವೆ, ಗುಳ್ಯ ಸೇತುವೆ, ಸಂಪಾನೆ ಸೇತುವೆ, ಹೊಕ್ಕಳಿಕೊಪ್ಪ ಸೇತುವೆ, ಮರಸಣಿಗೆ ಹೊಳೆಬಾಗಿಲು ಸೇತುವೆ, ಹೆಮ್ಮಕ್ಕಿ ಸೇತುವೆ ಸೇರಿದಂತೆ ಅನೇಕ ತೂಗು ಸೇತುವೆಗಳನ್ನು ಬಿ.ಜೆ.ಪಿ. ಸರ್ಕಾರ ನಿರ್ಮಿಸಿದೆ.
ತೂಗು ಸೇತುವೆಗಳಲ್ಲಿ ಜಾಂಬ್ಳೆ, ಅನ್ಮಗೆ, ಕಲ್ಲುಗೋಡು, ಸಂಜೀವ ಮೆಟ್ಟಿಲು ಸೇರಿದಂತೆ ಹಲವಾರು ಹಳ್ಳಿಗಳಿಗೆ ಜೀವನಾಡಿಯಂತಾಗಿವೆ.
ಕಳಸ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ, ವಿಜ್ಞಾನ ವಿಭಾಗದ ಮಂಜೂರಾತಿ, ಕಾಲೇಜಿಗೆ ಪಾಗ ಮಂಜೂರು ಮಾಡಿ ಶಾಶ್ವತ ಕಟ್ಟಡ ನಿರ್ಮಾಣ, ಜ್ಯೂನಿಯರ್ ಕಾಲೇಜಿಗೆ ವಿಜ್ಞಾನ ವಿಭಾಗವನ್ನು ಮಂಜೂರು ಮಾಡಿರುವುದು ಬಿಜೆಪಿ ಅವದಿಯಲ್ಲೇ “ಇದು ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಶಿಕ್ಷಣದ ಅವಕಾಶ ಕಲ್ಪಿಸಿದೆ,”
ಬಡಜನರಿಗಾಗಿ 50 ಹಾಸಿಗೆಯುಳ್ಳ ಸಮುದಾಯ ಆರೋಗ್ಯ ಕೇಂದ್ರವನ್ನು ಬಿ.ಜೆ.ಪಿ. ಸರ್ಕಾರದ ಅವಧಿಯಲ್ಲಿ ಮಂಜೂರು ಮಾಡಲಾಗಿದೆ.
ವಿಧಾನಪರಿಷತ್ ಸದಸ್ಯ ಎಂ.ಕೆ. ಪ್ರಾಣೇಶ್ ಹಾಗೂ ಜಿಲ್ಲೆಯ ಐದು ಶಾಸಕರ ಒತ್ತಡದಿಂದಲೇ ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಅವರು ಕಳಸವನ್ನು ತಾಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿದರು. “ಇದು ಕಳಸದ ಜನರ 70 ವರ್ಷಗಳ ಬೇಡಿಕೆಗೆ ತೃಪ್ತಿ ತಂದಿದೆ,”
ಹಿಂದಿನ ಸಂಸದರಿAದ ಕಳಸ ಪ್ರದೇಶದಲ್ಲಿ ಎರಡು ಕಡೆ ಪಿಎಂಜಿಎಸ್ವೈ ಯೋಜನೆಯಡಿಯಲ್ಲಿ ರಸ್ತೆ ನಿರ್ಮಾಣ ಕಾರ್ಯ ನಡೆದಿದ್ದು, ಇತ್ತೀಚಿನ ಸಂಸದರು ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸಿ ಬಿಎಸ್ಎನ್ಎಲ್ ಟವರ್ಗಳ ದುರಸ್ತಿ ಕಾರ್ಯ ಮಾಡಿಸಿರುವುದನ್ನೂ ಬಿಜೆಪಿ ಅಧ್ಯಕ್ಷರು ಉಲ್ಲೇಖಿಸಿದರು.
ಕಾಂಗ್ರೇಸ್ನ ಹಾಲಿ ರಾಜ್ಯ ಸಭಾ ಸದಸ್ಯ ಜಯರಾಮ್ ರಮೇಶ್ ಕಳಸಕ್ಕೆ ಹುಲಿಯೋಜನೆಯನ್ನು ತಂದಿದ್ದು ಬಿಟ್ಟರೆ ಬೇರೆ ಯಾವ ಕಾಮಗಾರಿ ತಂದಿದ್ದಾರೆ? “ಕಾಂಗ್ರೆಸ್ ನಾಯಕರು ಕೇವಲ ರಾಜಕೀಯ ಪ್ರಯೋಜನಕ್ಕಾಗಿ ಟೀಕೆ ಮಾಡುತ್ತಿದ್ದಾರೆ. ಇಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುಮೋದನೆಗೊಂಡ ಕಾಮಗಾರಿಗಳನ್ನು ತಮ್ಮ ಸಾಧನೆ ಎಂದು ಹೇಳಿಕೊಳ್ಳುವುದು ನಗೆಯ ವಿಷಯ,” ಎಂದು ಶ್ರೀಕಾಂತ್ ಆರೋಪಿಸಿದರು.