ಕಳಸ ಲೈವ್ ವರದಿ
ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಗಾಗಿ ಸರ್ಕಾರ ಬಿಡುಗಡೆ ಮಾಡಿದ ಕೋಟ್ಯಂತರ ರೂಪಾಯಿ ಅನುದಾನದಲ್ಲಿ ಕಳಸ ತಾಲೂಕಿನ ನಕ್ಸಲ್ ಪೀಡಿತ ಮಾವಿನಕೆರೆ ಗ್ರಾಮದ ಮುಜೆಕಾನು ಪ್ರದೇಶಕ್ಕೆ ಯಾವುದೇ ಅನುದಾನ ಮೀಸಲಿಡದೆ ಜಿಲ್ಲಾಡಳಿತ ಅನ್ಯಾಯ ಎಸಗಿದೆ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಶಕಗಳಿಂದ ರಸ್ತೆ ಸಮಸ್ಯೆ ಎದುರಿಸುತ್ತಿರುವ ಈ ಗ್ರಾಮದ ಜನರು ಈಗ ಪ್ರತಿಭಟನೆಗೆ ಇಳಿಯಲು ನಿರ್ಧರಿಸಿದ್ದಾರೆ.

ಹಳುವಳ್ಳಿ ಹೊರನಾಡು ರಸ್ತೆಯಿಂದ ಮುಜೆಕಾನು ಸಂಪರ್ಕಿಸುವ ಸುಮಾರು 5 ಕಿ.ಮೀ. ರಸ್ತೆಯು ಸಂಪೂರ್ಣ ಹಾಳಾಗಿದೆ. ಸುಮಾರು 12 ಕಿ.ಮೀ. ದೂರದಲ್ಲಿರುವ ಕಳಸ ಪಟ್ಟಣಕ್ಕೆ ಶಾಲೆ, ಆಸ್ಪತ್ರೆ, ಸರ್ಕಾರಿ ಕಚೇರಿಗಳಿಗೆ ತೆರಳಲು ವಿದ್ಯಾರ್ಥಿಗಳು, ವೃದ್ಧರು ಮತ್ತು ಇತರೆ ಗ್ರಾಮಸ್ಥರು ಹರಸಾಹಸ ಪಡಬೇಕಿದೆ. ಈ ರಸ್ತೆಯ ದಯನೀಯ ಸ್ಥಿತಿಯಿಂದಾಗಿ ಕಳಸ ಪಟ್ಟಣಕ್ಕೆ ಒಮ್ಮೆ ಹೋಗಿ ಬರಲು ಆಟೋ ಬಾಡಿಗೆ 700 ರೂ. ನೀಡಬೇಕಾಗಿದೆ. ಮಕ್ಕಳನ್ನು ಶಾಲೆಗೆ ಕಳುಹಿಸಲು ತಿಂಗಳಿಗೆ ಬರೋಬ್ಬರಿ 4,000 ರೂ.ಗಳಷ್ಟು ಆಟೋ ಬಾಡಿಗೆ ಕೊಡಬೇಕಾಗಿದ್ದು, ಗ್ರಾಮಸ್ಥರ ತಿಂಗಳ ದುಡಿಮೆ ಸಂಪೂರ್ಣವಾಗಿ ವಾಹನಗಳ ಬಾಡಿಗೆಗೆ ಸಾಗುತ್ತಿದೆ.
ಮುಜೆಕಾನು ಗ್ರಾಮದ ರಸ್ತೆ ಸಮಸ್ಯೆ ಕೇವಲ ಮೂಲಭೂತ ಸೌಕರ್ಯದ ಕೊರತೆ ಮಾತ್ರವಲ್ಲ, ಈ ಭಾಗದ ಸೂಕ್ಷ್ಮತೆಯ ಪ್ರತೀಕವೂ ಆಗಿದೆ. 2003 ರಲ್ಲಿ ಕಾರ್ಕಳದ ಈದುವಿನಲ್ಲಿ ನಡೆದ ಪೊಲೀಸ್-ನಕ್ಸಲ್ ಎನ್ಕೌಂಟರ್ನಲ್ಲಿ ಗಾಯಗೊಂಡಿದ್ದ ಯಶೋಧ, 2017 ರಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾದ ಕನ್ಯಾಕುಮಾರಿ, ಮತ್ತು 2021 ರಲ್ಲಿ ಪೊಲೀಸರಿಂದ ಬಂಧಿತರಾಗಿ ಕೇರಳದ ಜೈಲಿನಲ್ಲಿರುವ ಸಾವಿತ್ರಿ – ಇವರೆಲ್ಲರೂ ಇದೇ ಮುಜೆಕಾನು ಗ್ರಾಮದ ಕರ್ನಾಳಿ-ಗುಬ್ಬಿ ಗೇದಿಗೆ ಗಿರಿಜನ ಕಾಲೋನಿಯ ನಿವಾಸಿಗಳು ಎಂಬುದು ಗಮನಾರ್ಹ.

ಗ್ರಾಮಸ್ಥರು ರಸ್ತೆ ದುರಸ್ತಿಗಾಗಿ ಒತ್ತಾಯಿಸಿ 2023 ರ ವಿಧಾನಸಭಾ ಚುನಾವಣೆಯನ್ನೂ ಬಹಿಷ್ಕರಿಸಿದ್ದರು. ಆ ಸಂದರ್ಭದಲ್ಲಿ ಚುನಾವಣೆಯಲ್ಲಿ ಪಾಲ್ಗೊಳ್ಳುವಂತೆ ಗ್ರಾಮಸ್ಥರ ಮನವೊಲಿಸಲು ಬಂದ ತಹಸೀಲ್ದಾರ್ ಅವರ ಬುಲೆರೋ ವಾಹನವು ರಸ್ತೆಯಲ್ಲಿ ಬರಲು ಸಾಧ್ಯವಾಗದೆ ಆಟೋ ರಿಕ್ಷಾದಲ್ಲಿ ಬರಬೇಕಾದ ಪರಿಸ್ಥಿತಿ ಬಂದಿತ್ತು. ಈ ಘಟನೆಯು ರಸ್ತೆಯ ಭೀಕರ ಸ್ಥಿತಿಗೆ ಹಿಡಿದ ಕನ್ನಡಿ.
ನಕ್ಸಲ್ ನಿಗ್ರಹ ದಳದ (ಎಎನ್ಎಫ್) ಅಧಿಕಾರಿಗಳು ಕೂಡ ಹಲವಾರು ಜನ ಸಂಪರ್ಕ ಸಭೆಗಳನ್ನು ನಡೆಸಿ ರಸ್ತೆ ದುರಸ್ತಿ ಮಾಡಿಸಿಕೊಡುವುದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದರು. ಆದರೆ, ಈ ಭರವಸೆಗಳೆಲ್ಲವೂ ಕೇವಲ ಮಾತಾಗಿಯೇ ಉಳಿದಿವೆ ಹೊರತು ರಸ್ತೆಯ ಪರಿಸ್ಥಿತಿ ಮಾತ್ರ ಸುಧಾರಿಸಿಲ್ಲ.
ಇಷ್ಟೆಲ್ಲಾ ಗಂಭೀರ ಬೆಳವಣಿಗೆಗಳು ಜಿಲ್ಲಾಡಳಿತದ ಗಮನದಲ್ಲಿದ್ದರೂ, ನಕ್ಸಲ್ ಪೀಡಿತ ಪ್ರದೇಶಗಳ ವಿಶೇಷ ಅನುದಾನದಲ್ಲಿ ಮುಜೆಕಾನು ರಸ್ತೆಯ ಡಾಮರೀಕರಣಕ್ಕೆ ಹಣ ನೀಡದಿರುವುದು ಗ್ರಾಮಸ್ಥರಲ್ಲಿ ತೀವ್ರ ಬೇಸರ ಮತ್ತು ಪ್ರತಿಭಟನೆಯ ಕಿಚ್ಚನ್ನು ಹುಟ್ಟಿಸಿದೆ.

“ನಕ್ಸಲ್ ಪೀಡಿತ ಪ್ರದೇಶಗಳ ಅಭಿವೃದ್ಧಿಯ ಹೆಸರಿನಲ್ಲಿ ಜಿಲ್ಲಾಡಳಿತ ಮುಜೆಕಾನು ರಸ್ತೆಯನ್ನು ನಿರ್ಲಕ್ಷಿಸಿದೆ. ಇದರಿಂದಾಗಿ ನಮ್ಮ ಜೀವನ ಸಂಪೂರ್ಣ ದುಸ್ತರವಾಗಿದೆ. ಬಡವರಾದ ನಮಗೆ ಇಷ್ಟು ದುಬಾರಿ ಬಾಡಿಗೆ ನೀಡಿ ಬದುಕುವುದು ಅಸಾಧ್ಯ,” ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಯಾವುದೇ ಕಾರಣಕ್ಕೂ ತಮ್ಮ ಬೇಡಿಕೆ ನಿರ್ಲಕ್ಷಿಸಬಾರದೆಂದು ನಿರ್ಧರಿಸಿರುವ ಗ್ರಾಮಸ್ಥರು, ಕಳಸ ತಹಶೀಲ್ದಾರ್ ಶಾರದ ಅವರ ಮುಖಾಂತರ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದ್ದಾರೆ. ಜಿಲ್ಲಾಡಳಿತವು ನಕ್ಸಲ್ ಚಳುವಳಿಯ ಹಿನ್ನೆಲೆ ಹೊಂದಿರುವ ಈ ಗ್ರಾಮದ ಮೂಲಭೂತ ಬೇಡಿಕೆಗೆ ಮುಂದಿನ 15 ದಿನಗಳ ಒಳಗೆ ಮುಜೆಕಾನು ರಸ್ತೆ ಡಾಮರೀಕರಣಕ್ಕೆ ಅನುದಾನ ಮೀಸಲಿಡದೇ ಇದ್ದರೆ, ಜಿಲ್ಲಾಧಿಕಾರಿಗಳ ಕಚೇರಿಯು ಮುಂದೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.
ಮನವಿ ಕೊಡುವ ಸಂದರ್ಭದಲ್ಲಿ ಗ್ರಾಮಸ್ಥರಾದ ಅನಿಲ್ ಕುಮಾರ್ ಮುಜೆಕಾನು, ಸುರೇಶ್ ಕರ್ನಾಲಿ, ನಾಗೇಂದ್ರ ಮುಜೆಕಾನು, ಶ್ರೀನಿವಾಸ ಕರ್ನಾಳಿ, ಸೀತಾ ಮುಕೆಕಾನು, ಮೀನಾಕ್ಷಿ ಕೆರ್ನಾಳಿ, ಸುಶೀಲ, ಮರಿಯ, ಸತೀಶ್, ವೆಂಕಟೇಶ, ಸುಬ್ಬಮ್ಮ ಜರಿಮನೆ ಇತರರು ಇದ್ದರು.

