ಕಳಸ ಲೈವ್ ವರದಿ
ಬಹುಮುಖ ಪ್ರತಿಭೆಯ ಲೇಖಕ ಹಾಗೂ ಕಳಸದ ಯೋಗ ಗುರುಗಳಾಗಿರುವ ವೈ. ಪ್ರೇಮ್ಕುಮಾರ್ ಅವರ ಬಹುನಿರೀಕ್ಷಿತ ಹೊಸ ಕಾದಂಬರಿ ‘ಕಡಲ ಮಕ್ಕಳು’ ಮುಂದಿನ ತಿಂಗಳು ಕಡೂರಿನಲ್ಲಿ ನಡೆಯಲಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಅದ್ಧೂರಿಯಾಗಿ ಲೋಕಾರ್ಪಣೆಗೊಳ್ಳಲಿದೆ.
ಎಳನೀರು ಗ್ರಾಮದವರಾದ ವೈ. ಪ್ರೇಮ್ಕುಮಾರ್ ಅವರು ಕನ್ನಡದಲ್ಲಿ ಸ್ನಾತಕೋತ್ತರ (ಎಂ.ಎ) ಪದವೀಧರರು. ಕುದುರೆಮುಖದಲ್ಲಿ ಗುತ್ತಿಗೆದಾರರಾಗಿ ವೃತ್ತಿಜೀವನ ಆರಂಭಿಸಿದ ಇವರು, ಪ್ರಸ್ತುತ ಕಳಸದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯೋಗ ಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿ ದೆಸೆಯಲ್ಲೇ ನಾಟಕಗಳಲ್ಲಿ ಆಸಕ್ತಿ ಹೊಂದಿದ್ದ ಇವರು, ಕಾಲೇಜು ದಿನಗಳಲ್ಲಿ ರಾಜ್ಯಮಟ್ಟದ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ವಿಜೇತರಾಗಿದ್ದಾರೆ.
ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿರುವ ಇವರು, ಹಲವಾರು ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ:
ಹೇರೆತ್ತು, ಬೇಂಗ್ರೆ ಮಾಸ್ತರು, ಕಾಳಯ್ಯ, ಮಾರ್ನಹಳ್ಳಿ ಅಂಚೆ ಕಚೇರಿ.ಮೂಡಲ ಮೌನ, ಹೊನ್ನ ಕಿರಣ. ಡೆನ್ಮಾರ್ಕ್ ಪ್ರವಾಸ ಕಥನ. ಇವರ ‘ಹೇರೆತ್ತು’ ಮತ್ತು ‘ಮಾರ್ನಹಳ್ಳಿ ಅಂಚೆ ಕಚೇರಿ’ ಕಾದಂಬರಿಗಳು ಇಂಗ್ಲಿಷ್ ಭಾಷೆಗೂ ಅನುವಾದಗೊಂಡು ನಾಡಿನಾಚೆಗೂ ಗಮನ ಸೆಳೆದಿವೆ
ಪ್ರಸ್ತುತ ಬಿಡುಗಡೆಗೆ ಸಿದ್ಧವಾಗಿರುವ ‘ಕಡಲ ಮಕ್ಕಳು’ ಕಾದಂಬರಿಯ ಜೊತೆಗೆ, ಇವರ ‘ಕಾಡೆಡೆಗೆ’ (ಕಾದಂಬರಿ), ‘ಕಾವ್ಯಾಂಜಲಿ’ (ನಾಲ್ಕು ನೀಳ್ಗತೆಗಳು), ಮತ್ತು ‘ಮಲೆನಾಡ ಕತೆಗಳು’ (ಸಣ್ಣ ಕಥೆಗಳು) ಮುದ್ರಣ ಹಂತದಲ್ಲಿವೆ. ಬಿಡುಗಡೆಗಾಗಿ ನೂರಾರು ಕವನಗಳು ಕಾದಿವೆ. ಹಲವಾರು ಸೆಮಿನಾರ್ ಪುಸ್ತಕಗಳಲ್ಲೂ ಇವರ ಲೇಖನಗಳು ಪ್ರಕಟವಾಗಿವೆ.
