
ಕಳಸ ಲೈವ್ ವರದಿ
ಇಲ್ಲಿನ ಹೊರನಾಡು ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರೀ ದೇವಸ್ಥಾನದಲ್ಲಿ 17ನೇ ವರ್ಷದ “ಆದಿಗುರು ಶ್ರೀ ಪುರಂದರದಾಸರು ಹಾಗೂ ಸದ್ಗುರು ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವ ನಡೆಯಿತು.
ಬೆಳಿಗ್ಗೆ ಸ್ಥಳೀಯ ಸಂಸ್ಥೆಗಳು ಮತ್ತು ಅತಿಥಿ ಕಲಾವಿದರಿಂದ “ಉಂಛವೃತ್ತಿ ಉತ್ಸವ” ನಡೆಯಿತು. ನಂತರ ಶ್ರೀ ಕ್ಷೇತ್ರದ ಧರ್ಮಕರ್ತರಾದ ಶ್ರೀ ಜಿ. ಭೀಮೇಶ್ವರ ಜೋಷಿಯವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ಗಾನ ಕಲಾವಿಭೂಷಣ ಡಾ. ಶ್ರೀಮತಿ ನಾಗವಲ್ಲಿ ನಾಗರಾಜ್ ಅವರು ಆರಾಧನಾ ಮಹೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಸಂಗೀತ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ವಿದ್ವಾನ್ ನಟರಾಜ್ (ಹಿರೇಗದ್ದೆ), ವಿದುಷಿ ಶ್ರೀಮತಿ ಮಾಲಿನಿ (ಚಿಕ್ಕಮಗಳೂರು) ಮತ್ತು ವಿದ್ವಾನ್ ಶ್ರೀ ಬಾಲಚಂದ್ರ ಭಾಗವತ್ (ಉಡುಪಿ) ಅವರಿಗೆ ಈ ಸಂದರ್ಭದಲ್ಲಿ ಸನ್ಮಾನ ಮಾಡಲಾಯಿತು. ಅಲ್ಲದೆ ಶ್ರೀ ಕ್ಷೇತ್ರದ ವತಿಯಿಂದ ಆಯೋಜಿಸಲಾಗಿದ್ದ ಭಜನಾ ಸ್ಪರ್ಧೆಯ ವಿಜೇತರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಭಾ ಕಾರ್ಯಕ್ರಮದ ನಂತರ ಪುರಂದರದಾಸರು ಹಾಗೂ ತ್ಯಾಗರಾಜರ ಪಂಚರತ್ನ ಕೃತಿಗಳ ಘೋಷ್ಠಿ ಗಾಯನ ನಡೆಯಿತು.ಮಧ್ಯಾಹ್ನದಿಂದ ರಾತ್ರಿಯವರೆಗೆ ವಿವಿಧ ಕಲಾವಿದರಿಂದ ಹಾಡುಗಾರಿಕೆ, ವೀಣಾ ವಾದನ ಹಾಗೂ ವಾದ್ಯ ವೈವಿಧ್ಯ ಕಾರ್ಯಕ್ರಮಗಳು ಜರುಗಿತು. ಸಂಜೆ ಡಾ. ನಾಗವಲ್ಲಿ ನಾಗರಾಜ್ ಮತ್ತು ಡಾ. ರಂಜನಿ ವಾಸುಕಿ ತಂಡದವರಿ0ದ ಸಂಗೀತ ಕಚೇರಿ ನಡೆಯಿತು.
