
ಕಳಸ ಲೈವ್ ವರದಿ
ಕಳಸ ತಾಲ್ಲೂಕಿನಾಧ್ಯಂತ ಸುರಿದ ಧಾರಾಕಾರ ಮಳೆಯ ನಡುವೆಯೂ ದೀಪಾವಳಿ ಹಬ್ಬವನ್ನು ಸಂಪ್ರದಾಯಬದ್ಧವಾಗಿ ಮತ್ತು ಸಡಗರದಿಂದ ಆಚರಿಸಲಾಯಿತು. ಮಳೆಯಿಂದಾಗಿ ಪಟಾಕಿ ಸಿಡಿಸುವ ಉತ್ಸಾಹಕ್ಕೆ ತೀವ್ರ ಹಿನ್ನಡೆಯಾಗಿದ್ದು, ಪಟಾಕಿ ವ್ಯಾಪಾರಿಗಳು ನಿರಾಸೆಗೊಂಡಿದ್ದಾರೆ.
ಇಲ್ಲಿನ ಸಾಂಪ್ರದಾಯದಂತೆ ಮನೆ-ಮನೆಗಳಲ್ಲಿ ಮತ್ತು ಅಂಗಡಿ, ಬ್ಯಾಂಕ್ ಹಾಗೂ ಇನ್ನಿತರೆ ವ್ಯಾಪಾರ ಸ್ಥಳಗಳಲ್ಲಿ ಮಹಾಲಕ್ಷ್ಮೀ ಪೂಜೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮೀಯನ್ನು ಆರಾಧಿಸುವ ಮೂಲಕ ಜನರು ಸುಖ-ಸಮೃದ್ಧಿಯನ್ನು ಕೋರಿದರು.

ಪಾಡ್ಯಮಿಯಂದು ಬರುವ ಗೋ ಪೂಜೆ ಮತ್ತು ಬಲಿಯೇಂದ್ರ ಪೂಜೆಯ ಸಂಪ್ರದಾಯವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಗೋವುಗಳನ್ನು ಸಿಂಗರಿಸಿ, ಪೂಜಿಸಿ ಕೃತಜ್ಞತೆ ಸಲ್ಲಿಸಲಾಯಿತು. ಬಲೀಂದ್ರನನ್ನು ಸ್ಮರಿಸುವ ಪೂಜಾ ಕಾರ್ಯಕ್ರಮಗಳಂತೂ ಹಳ್ಳಿ ಪ್ರದೇಶಗಳಲ್ಲಿ ವಿಶೇಷ ಕಳೆ ತಂದಿದ್ದವು. ಮನೆ ಮನೆಗಳಲ್ಲಿ ನಂಬಿಕೊಂಡು ಬಂದಿರುವ ದೈವ ದೇವರುಗಳಿಗೆ, ಅಗಲಿದ ಚೇತನಗಳಿಗೆ ಪೂಜೆಗಳನ್ನು ಸಲ್ಲಿಸಲಾಯಿತು.
ದೀಪಾವಳಿಯ ಇನ್ನೊಂದು ಪ್ರಮುಖ ಆಕರ್ಷಣೆಯಾದ ಪಟಾಕಿ ಸಿಡಿಸುವುದಕ್ಕೆ ಈ ಬಾರಿಯ ಮಳೆಯು ಸಂಪೂರ್ಣ ಅಡ್ಡಿಪಡಿಸಿದೆ. ಬಲಿಪಾಡ್ಯಮಿಯ ದಿನದಂದು ನಿರಂತರವಾಗಿ ಸುರಿದ ಮಳೆಯ ಕಾರಣದಿಂದ ಬಹುತೇಕ ಪಟಾಕಿ ಪ್ರೀಯರು ತಮ್ಮ ಆಸೆಯನ್ನು ಮೊಟಕುಗೊಳಿಸಬೇಕಾಯಿತು. ಮಕ್ಕಳು ಮತ್ತು ಯುವಕರಲ್ಲಿ ಪಟಾಕಿ ಹೊಡೆಯುವ ಉತ್ಸಾಹವಿದ್ದರೂ, ಮಳೆಯಿಂದಾಗಿ ಹೆಚ್ಚಿನವರು ತಮ್ಮ ಪಟಾಕಿಗಳನ್ನು ಬಾಕ್ಸ್ನಲ್ಲೇ ಇರಿಸಬೇಕಾಯಿತು.
ಮಳೆಯ ನೇರ ಪರಿಣಾಮವು ಪಟಾಕಿ ಮಾರಾಟ ಮಳಿಗೆಗಳ ಮೇಲಾಗಿದೆ. ಪಟ್ಟಣದ ಕೆಪಿಎಸ್ ಕ್ರೀಡಾಂಗಣದಲ್ಲಿ ತೆರೆದಿದ್ದ ಪಟಾಕಿ ಮಳಿಗೆಳಲ್ಲಿ ಪಟಾಕಿ ವ್ಯಾಪಾರವು ಗಣನೀಯವಾಗಿ ಕುಸಿತ ಕಂಡಿದೆ. “ನಾವು ಲಕ್ಷಾಂತರ ರೂಪಾಯಿ ಮೌಲ್ಯದ ಪಟಾಕಿಗಳನ್ನು ತಂದಿದ್ದೆವು. ಆದರೆ ಮಳೆಯಿಂದಾಗಿ ನಿರೀಕ್ಷೆಯ ಮಾರಾಟ ಕೂಡ ಆಗಿಲ್ಲ. ಈ ವರ್ಷ ಭಾರೀ ನಷ್ಟವಾಗಿದೆ” ಎಂದು ಸ್ಥಳೀಯ ಪಟಾಕಿ ವ್ಯಾಪಾರಿಯೊಬ್ಬರು ಅಳಲು ತೋಡಿಕೊಂಡರು.

