
ಕಳಸ ಲೈವ್ ವರದಿ
ರಾಜ್ಯದ ಖಾಸಗಿ ಬಸ್ ಉದ್ಯಮವು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಮುಂಬರುವ 2025-26ನೇ ಸಾಲಿನ ಆಯವ್ಯಯದಲ್ಲಿ ತೆರಿಗೆ ವಿನಾಯಿತಿ ಹಾಗೂ ರಿಯಾಯಿತಿ ದರದ ಬಸ್ ಪಾಸ್ ಮೊತ್ತವನ್ನು ಮರುಪಾವತಿಸುವಂತೆ ‘ಕರ್ನಾಟಕ ರಾಜ್ಯ ಮಜಲು ವಾಹನ ಬಸ್ ಮಾಲೀಕರ ಸಂಘಗಳ ಒಕ್ಕೂಟ’ ಸರ್ಕಾರವನ್ನು ಒತ್ತಾಯಿಸಿದೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒಕ್ಕೂಟವು ಮನವಿ ಪತ್ರ ಸಲ್ಲಿಸಿದ್ದು, ಖಾಸಗಿ ಬಸ್ ಮಾಲೀಕರು ಎದುರಿಸುತ್ತಿರುವ ಸವಾಲುಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ರಾಜ್ಯದ 16 ಜಿಲ್ಲೆಗಳಲ್ಲಿ ಸುಮಾರು 7,000 ಖಾಸಗಿ ಬಸ್ಗಳು ಸಂಚರಿಸುತ್ತಿವೆ. ರಸ್ತೆ ತೆರಿಗೆ, ಡೀಸೆಲ್ ಮೇಲಿನ ಸೆಸ್, ಟೈರ್ ಮತ್ತು ಬಿಡಿಭಾಗಗಳ ಜಿಎಸ್ಟಿ ರೂಪದಲ್ಲಿ ಸರ್ಕಾರಕ್ಕೆ ವಾರ್ಷಿಕ ಸುಮಾರು ₹8,400 ಕೋಟಿ ಆದಾಯ ಸಂದಾಯವಾಗುತ್ತಿದೆ ಎಂದು ಒಕ್ಕೂಟ ತಿಳಿಸಿದೆ.

ಸರ್ಕಾರದ ‘ಶಕ್ತಿ’ ಯೋಜನೆ ಜಾರಿಗೆ ಬಂದಾಗಿನಿ0ದ ಖಾಸಗಿ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಇದರಿಂದ ಮಾಲೀಕರು, ಚಾಲಕರು ಮತ್ತು ನಿರ್ವಾಹಕರು ಸೇರಿದಂತೆ ಸಾವಿರಾರು ಕುಟುಂಬಗಳು ಬೀದಿಗೆ ಬೀಳುವ ಆತಂಕ ಎದುರಾಗಿದೆ.
ಸರ್ಕಾರಿ ಬಸ್ಗಳಲ್ಲಿ ನೀಡಲಾಗುವ ಉಚಿತ/ರಿಯಾಯಿತಿ ದರದ ಪಾಸ್ಗಳ ಮೊತ್ತವನ್ನು ಸರ್ಕಾರ ಮರುಪಾವತಿ ಮಾಡುತ್ತದೆ. ಆದರೆ, ಖಾಸಗಿ ಬಸ್ಗಳಲ್ಲಿ ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಮತ್ತು ಅಂಗವಿಕಲರಿಗೆ ನೀಡುವ ರಿಯಾಯಿತಿ ಪಾಸ್ಗಳ ಮೊತ್ತವನ್ನು ಸರ್ಕಾರ ಭರಿಸುತ್ತಿಲ್ಲ. ಈ ವ್ಯವಸ್ಥೆಯನ್ನು ಖಾಸಗಿ ಬಸ್ಗಳಿಗೂ ವಿಸ್ತರಿಸಬೇಕು ಎಂದು ಮನವಿಯಲ್ಲಿ ಕೋರಲಾಗಿದೆ.
ಮಲೆನಾಡು, ಕರಾವಳಿ ಮತ್ತು ಗ್ರಾಮೀಣ ಭಾಗಗಳಲ್ಲಿ ರಸ್ತೆಗಳು ಕಿರಿದಾಗಿದ್ದು, ವಾಹನ ನಿರ್ವಹಣೆ ವೆಚ್ಚ ಹೆಚ್ಚಿದೆ. ಇಂತಹ ಕಡೆಗಳಲ್ಲಿ ಸರ್ಕಾರಿ ಬಸ್ಗಳು ಅತಿಯಾಗಿ ಕಾರ್ಯಾಚರಣೆ ಮಾಡುವ ಮೂಲಕ ಖಾಸಗಿ ಬಸ್ಗಳೊಂದಿಗೆ ಅನಗತ್ಯ ಸ್ಪರ್ಧೆ ನೀಡುತ್ತಿವೆ ಎಂದು ಒಕ್ಕೂಟ ದೂರಿದೆ.
2025-26ನೇ ಸಾಲಿನ ಬಜೆಟ್ನಲ್ಲಿ ಬಸ್ಗಳ ಮೇಲಿನ ತೆರಿಗೆಯನ್ನು ಇಳಿಕೆ ಮಾಡಬೇಕು.
ಗ್ರಾಮೀಣ ಭಾಗದಲ್ಲಿ ಸಂಚರಿಸುವ ಬಸ್ಗಳಿಗೆ ತೆರಿಗೆ ವಿನಾಯಿತಿ ನೀಡಬೇಕು.
ಖಾಸಗಿ ಬಸ್ಗಳಲ್ಲಿ ನೀಡುವ ರಿಯಾಯಿತಿ ಪಾಸ್ಗಳ ಮೊತ್ತವನ್ನು ಸರ್ಕಾರವೇ ಭರಿಸಬೇಕು ಎಂಬ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗಿದೆ.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಕೆ. ಬಾಲಕೃಷ್ಣ ಅವರ ನೇತೃತ್ವದಲ್ಲಿ ಈ ಮನವಿ ಸಲ್ಲಿಸಲಾಗಿದ್ದು, ಸಾರಿಗೆ ಸಚಿವರು ಹಾಗೂ ಹಣಕಾಸು ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೂ ಇದರ ಪ್ರತಿಯನ್ನು ರವಾನಿಸಲಾಗಿದೆ. ಸರ್ಕಾರವು ತಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಉದ್ಯಮವನ್ನು ಉಳಿಸಿಕೊಳ್ಳುವುದು ಅಸಾಧ್ಯ ಎಂದು ಸಂಘದ ಪದಾಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ
