ಕಳಸ ಲೈವ್ ವರದಿ
ಕಾರ್ತಿಕ ಮಾಸದ ಈ ವೇಳೆಯಲ್ಲಿ ಅಡಿಕೆ ಕಟಾವು ಜೋರಾಗಿದ್ದು, ಈ ವೇಳೆ ಹಸಿ ಅಡಿಕೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಕಳಸ ಹಾಗೂ ಸುತ್ತಮುತ್ತಲಿನ ಅಡಿಕೆ ಬೆಳೆಗಾರರು ಆತಂಕಕ್ಕೊಳಗಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ರಾತ್ರಿ ವೇಳೆ ತೋಟಗಳಿಗೆ ನುಗ್ಗುವ ಕಳ್ಳರು ಅಡಿಕೆ ಮರ ಏರಿ ಗೋನೆಯನ್ನೇ ಎಗರಿಸುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಿವೆ. ಕಳಸದ ಗೊಡ್ಲುಮನೆ ಎಂಬಲ್ಲಿ ಒಂದೆರಡು ದಿನಗಳ ಹಿಂದೆಯಷ್ಟೆ ಸುಮಾರು ಇಪ್ಪತ್ತು ಗೊನೆ ಹಸಿ ಅಡಿಕೆ ಕಳ್ಳತನ ನಡೆದಿದೆ ಎಂದು ಅಲ್ಲಿಯ ನಿವಾಸಿ ಹೇಳುತ್ತಾರೆ.
ಬೆಳೆಗಾರರ ಪ್ರಕಾರ, ಕಳ್ಳರು ತೋಟದ ಒಳನುಗ್ಗಿ ಅಡಿಕೆ ಮರ ಏರಿ ಅಡಕೆ ಗೊನೆಯನ್ನೇ ಎಗರಿಸುತ್ತಿದ್ದಾರೆ. ಇದು ಮರ ಹತ್ತುವ ನಿಪುಣತೆ ಹೊಂದಿದವರ ಕೈವಾಡವಿರಬಹುದೆಂಬ ಅನುಮಾನ ಬೆಳೆಗಾರರಲ್ಲಿ ಮೂಡಿದೆ.
ಈ ಬಾರಿಯ ಅತಿಯಾದ ಮಳೆಯಿಂದ ಅಡಿಕೆ ಇಳುವರಿ ಕುಸಿತ ಕಂಡುಬAದಿದ್ದು, ಅದರ ಜೊತೆಗೆ ಕಳ್ಳರ ಕಾಟ ರೈತರ ಕಷ್ಟವನ್ನು ಇನ್ನಷ್ಟು ಹೆಚ್ಚಿಸಿದೆ. ಒಂದು ರಾತ್ರಿ ಕಳ್ಳತನದಿಂದಲೇ ಬೆಳೆಗಾರರು ಸಾವಿರಾರು ರೂಪಾಯಿಗಳ ನಷ್ಟವನ್ನು ಅನುಭವಿಸುತ್ತಿದ್ದಾರೆ.
ಹೆಚ್ಚು ಎಕರೆ ತೋಟಗಳನ್ನು ಹೊಂದಿರುವ ದೊಡ್ಡ ಬೆಳೆಗಾರರು ಈಗ ತೋಟಗಳಿಗೆ ಸಿಸಿ ಕ್ಯಾಮರಾ, ಕಾವಲು ಗಾರರನ್ನು ಹಾಗೂ ಬೆಳಕಿನ ವ್ಯವಸ್ಥೆ ಅಳವಡಿಸುತ್ತಿದ್ದಾರೆ. ಆದರೆ ಸಣ್ಣ ಬೆಳೆಗಾರರಿಗೆ ಈ ರೀತಿಯ ಸುರಕ್ಷತಾ ವ್ಯವಸ್ಥೆ ಅಸಾಧ್ಯವಾಗಿದ್ದು, ಅವರು ತೀವ್ರ ಕಳವಳದಲ್ಲಿದ್ದಾರೆ.
“ವರ್ಷಪೂರ್ತಿ ಶ್ರಮಪಟ್ಟು ಬೆಳೆಸಿದ ಅಡಿಕೆಯನ್ನು ಕಳ್ಳರು ಕದಿಯುತ್ತಿರುವುದು ನಮ್ಮ ಬದುಕಿನ ಮೇಲೆ ನೇರ ಹಾನಿ,” ಎಂದು ಒಬ್ಬ ತೋಟದ ಮಾಲೀಕರು ಆತಂಕ ವ್ಯಕ್ತಪಡಿಸುತ್ತಾರೆ.
