ಕಳಸ ಲೈವ್ ವರದಿ
ಜಾತ್ರೆಗಳೆಂದರೆ ಜನಸಂದಣಿ, ಭಕ್ತಿ, ಸಂಭ್ರಮ… ಆದರೆ ಅದರ ಜೊತೆಗೆ ಮರೆತುಹೋಗುವ ಒಂದು ಮಹತ್ವದ ಜವಾಬ್ದಾರಿ ಸ್ವಚ್ಛತೆ. ಹಳುವಳ್ಳಿಯ ಜಾತ್ರೆ ಪೂರ್ವಭಾವಿಯಾಗಿ ನಡೆದ ಸ್ವಚ್ಛತಾ ಕಾರ್ಯವು ಈ ಜವಾಬ್ದಾರಿಯನ್ನು ನೆನಪಿಸುವ ಸತ್ಯಘಟನೆಯಾಗಿದೆ.
ದೇವಸ್ಥಾನ ಆಡಳಿತ ಹಾಗೂ ಸ್ಥಳೀಯ ಸಂಘ ಸಂಸ್ಥೆಗಳು ಕೈಜೋಡಿಸಿ ಜಾತ್ರೆ ಪ್ರದೇಶವನ್ನು ಸ್ವಚ್ಛಗೊಳಿಸಿದ ಕ್ರಮ ಶ್ಲಾಘನೀಯ. ಇನ್ನೂ ಶ್ಲಾಘನೀಯವೆಂದರೆ ಹಾಸಂಗಿ ಶೈಲೇಶ್ ಅವರ ವೈಯಕ್ತಿಕ ಆಸಕ್ತಿ ಹಳುವಳ್ಳಿಯಿಂದ ನಲ್ಲಿಕೆರೆಯ ಮಾವಿನಕೆರೆ ಕೈಮರದವರೆಗೆ ರಸ್ತೆ ಬದಿಗಳಲ್ಲಿ ಎಸೆಯಲ್ಪಟ್ಟ ಪ್ಲಾಸ್ಟಿಕ್ ಹಾಗೂ ಬಾಟಲಿಗಳನ್ನು ಸಂಗ್ರಹಿಸಿದ ಕೆಲಸ, ಪರಿಸರದ ಕಡೆಗಿನ ಜೀವಂತ ಜವಾಬ್ದಾರಿಯ ಉದಾಹರಣೆ.
50 ಚೀಲಕ್ಕಿಂತಲೂ ಹೆಚ್ಚು ಬಾಟಲಿ ಸಂಗ್ರಹವಾಗಿದೆ ಎಂದರೆ ಜನಸಾಮಾಣ್ಯರಾದ ನಾವು ಯೋಚಿಸುವಂತಾಗಿದೆ.
ಗ್ರಾಮಗಳ ಅಭಿವೃದ್ಧಿ ಕೇವಲ ಕಟ್ಟಡಗಳು ಅಥವಾ ರಸ್ತೆಗಳಿಂದ ಆಯಿತಲ್ಲ; ಸ್ವಚ್ಛತೆ ಮತ್ತು ಪರಿಸರದ ಮೇಲಿನ ಸಂವೇದನೆ ಕೂಡ ಅದಕ್ಕಿಂತ ಕಡಿಮೆಯಲ್ಲದ ಅಂಶ. ಜನಸಾಮಾನ್ಯರು, ಅಂಗಡಿ ಮಾಲೀಕರು, ಜಾತ್ರೆಯಲ್ಲಿ ಪಾಲ್ಗೊಳ್ಳುವವರು ಎಲ್ಲರಲ್ಲೂ ನಿತ್ಯ ಜಾಗೃತಿ ಅಗತ್ಯ. ಜಾತ್ರೆ ಸಮಯದಲ್ಲಿ “ಕಸ ಚೆಲ್ಲದಿರಿ”, “ಪುನಃಬಳಕೆಯ ಚೀಲ ಬಳಸಿ” ಎಂಬ ಸಂದೇಶಗಳು ಕೇವಲ ಬಣ್ಣದ ಫಲಕಗಳಲ್ಲ, ಜೀವನಶೈಲಿಯ ಭಾಗವಾಗಬೇಕು.
ಹಳುವಳ್ಳಿಯಂತಹ ಗ್ರಾಮಗಳಲ್ಲಿ ಪರಿಸರ ಜಾಗೃತಿಗೆ ಒಂದು ಶೈಲೇಶ್ ಸಾಕಾಗುವುದಿಲ್ಲ; ಶೈಲೇಶ್ಗಳ ಸಂಖ್ಯೆ ಹೆಚ್ಚಾಗಬೇಕು.
