

ಕಳಸ ಲೈವ್ ವರದಿ
ಬಿಜೆಪಿ ಚಿಕ್ಕಮಗಳೂರು ಜಿಲ್ಲಾ ಘಟಕದಲ್ಲಿ ನಿಷ್ಠೆ, ಪರಿಶ್ರಮ ಮತ್ತು ಸಂಘಟನೆಗೆ ನೀಡಿದ ಕೊಡುಗೆಗೆ ಮತ್ತೊಮ್ಮೆ ಮಾನ್ಯತೆ ದೊರೆತಿದೆ. ಕಳಸದ ಪ್ರಗತಿಪರ ನಾಯಕಿ ಶ್ರೀಮತಿ ಸುಜಯ ಸದಾನಂದ ಅವರನ್ನು ಪಕ್ಷದ ಜಿಲ್ಲಾಧ್ಯಕ್ಷ ಎಂ.ಆರ್. ದೇವರಾಜ ಶೆಟ್ಟಿ ಅವರು ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾಗಿ ಮರು ನೇಮಿಸಿದ್ದಾರೆ.
2024ರಲ್ಲಿ ಜಿಲ್ಲಾ ಕಾರ್ಯದರ್ಶಿ ಹುದ್ದೆ ವಹಿಸಿಕೊಂಡ ನಂತರ ಪಕ್ಷ ಸಂಘಟನೆಗೆ ತೋರಿದ ಶ್ರಮ, ಹೊಣೆಗಾರಿಕೆಯನ್ನು ನಿಷ್ಠೆಯಿಂದ ನಿರ್ವಹಿಸಿದ ರೀತಿಯನ್ನು ಗಣನೀಯವಾಗಿ ಪರಿಗಣಿಸಿರುವ ಪಕ್ಷ, ಇದೇ ವಿಶ್ವಾಸವನ್ನು ಪುನರುಚ್ಚರಿಸಿ ಮತ್ತೊಮ್ಮೆ ಅದೇ ಜವಾಬ್ದಾರಿಯನ್ನು ಅವರಿಗೆ ಒಪ್ಪಿಸಿದೆ.
ಪಕ್ಷದಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿರುವ ಸುಜಯ ಸದಾನಂದ ಅವರು, ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಎರಡು ಬಾರಿ ಗೆದ್ದು, ಎರಡೂವರೆ ವರ್ಷ ಪಂಚಾಯಿತಿ ಅಧ್ಯಕ್ಷೆಯಾಗಿ ಯಶಸ್ವಿಯಾಗಿ ಕೆಲಸ ಮಾಡಿದ್ದಾರೆ. ತಮ್ಮ ಅಧ್ಯಕ್ಷಾವಧಿಯಲ್ಲಿ ಪಕ್ಷ–ಬೇಧ ಮರೆತು, ಜನರ ಸಮಸ್ಯೆಗಳನ್ನು ವಿಶ್ವಾಸದಿಂದ ಆಲಿಸಿ ಪರಿಹರಿಸುವ ಕ್ರಮವು ಜನಮನ ಗೆದ್ದಿತ್ತು.
2014ರಿಂದಲೇ ಬಿಜೆಪಿ ಸಂಘಟನೆಗೆ ತಮ್ಮನ್ನು ಅರ್ಪಿಸಿಕೊಂಡಿರುವ ಇವರು, ಕಳಸ ಶಕ್ತಿ ಕೇಂದ್ರ ಮಹಿಳಾ ಮೋರ್ಚಾ ಅಧ್ಯಕ್ಷೆ, ಮೂಡಿಗೆರೆ ಮಂಡಲ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮತ್ತಿತರ ಹುದ್ದೆಗಳಲ್ಲಿ ಪಕ್ಷದ ಸಂಘಟನೆ ಬಲಪಡಿಸಲು ಮಹತ್ವದ ಕೆಲಸ ಮಾಡಿದ್ದಾರೆ.
ರಾಜಕೀಯ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೆ, ಸಾರ್ವಜನಿಕ ಮತ್ತು ಸಾಂಸ್ಕೃತಿಕ ವಲಯದಲ್ಲಿಯೂ ತಮ್ಮದೇ ಛಾಪು ಮೂಡಿಸಿರುವ ಸುಜಯ ಸದಾನಂದ, ಪ್ರಸ್ತುತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ – ಚಿಕ್ಕಮಗಳೂರು ಜಿಲ್ಲಾ ಜನ ಜಾಗೃತಿ ವೇದಿಕೆಯ ಸದಸ್ಯೆ, ತಾಲ್ಲೂಕು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ, ಹಾಗೂ ಕನ್ನಡ ಜಾನಪದ ಪರಿಷತ್ತಿನ ಮಹಿಳಾ ಘಟಕದ ಅಧ್ಯಕ್ಷೆ ಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
