

ಕಳಸ ಲೈವ್ ವರದಿ
ಚಿಕ್ಕಮಗಳೂರಿನ ಎಮ್.ಇ.ಎಸ್. ಪ್ರಾಯೋಗಿಕ ಪ್ರೌಢಶಾಲೆಯಲ್ಲಿ ಆಯೋಜನೆಗೊಂಡಿದ್ದ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಕಳಸದ ಕೆ.ಪಿ.ಎಸ್. ಪ್ರೌಢಶಾಲೆಯ ವಿದ್ಯಾರ್ಥಿ ಮತ್ತು ಶಿಕ್ಷಕರು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಶಾಲೆಗೆ ಹೆಮ್ಮೆಯನ್ನು ತಂದಿದ್ದಾರೆ.
ವಿದ್ಯಾರ್ಥಿಗಳ ವೈಯಕ್ತಿಕ ವಿಭಾಗದಲ್ಲಿ ಕೆ.ಪಿ.ಎಸ್. ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿ ಶಿವಾನಂದ್ ಅವರು ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಶಿಕ್ಷಕ ಸಂದೇಶ ಕೆ.ಎಲ್ ಅವರ ಮಾರ್ಗದರ್ಶನದಲ್ಲಿ ಶಿವಾನಂದ್ ತಯಾರಿಸಿದ ವಿಜ್ಞಾನ ಮಾದರಿಯು ಆಯ್ಕೆಗಾರರು ಮತ್ತು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಇದೇ ಪ್ರದರ್ಶನದಲ್ಲಿ ಶಿಕ್ಷಕರ ವಿಭಾಗದಲ್ಲಿ ಕೆ.ಪಿ.ಎಸ್. ಪ್ರೌಢಶಾಲೆಯ ಗಣಿತ ಶಿಕ್ಷಕ ಶ್ರೀ ಸಂದೇಶ ಕೆ.ಎಲ್. ರವರು ಪ್ರದರ್ಶಿಸಿದ ರೋಬೋಟಿಕ್ಸ್ ಮಾದರಿಯು ಆಯ್ಕೆಗಾರರ ಗಮನ ಸೆಳೆದು ಪ್ರಥಮ ಸ್ಥಾನ ಪಡೆಯಿತು. ವಿದ್ಯಾರ್ಥಿಯ ವಿಭಾಗಕ್ಕೂ ಮಾರ್ಗದರ್ಶನ ನೀಡಿದ್ದ ಸಂದೇಶ ಕೆ.ಎಲ್. ಅವರ ಈ ಸಾಧನೆಯು ದ್ವಿಗುಣ ಸಂತಸ ತಂದಿದೆ.
ಈ ಮೂಲಕ ಇವರಿಬ್ಬರೂ ಧಾರವಾಡದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಕಳಸವನ್ನು ಪ್ರತಿನಿಧಿಸಲಿದ್ದಾರೆ.
ಶಾಲೆಗೆ ಕೀರ್ತಿ ತಂದ ಇಬ್ಬರು ಸಾಧಕರಿಗೂ ಎಸ್.ಡಿ.ಎಂ.ಸಿ., ಪೋಷಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಪರವಾಗಿ ಶಾಲೆಯ ಉಪ ಪ್ರಾಂಶುಪಾಲರಾದ ಶ್ರೀ ಸುರೇಶ್ ರವರು ಹೃತ್ಪೂರ್ವಕವಾಗಿ ಅಭಿನಂದಿಸಿದರು.

