ಕಳಸ ಲೈವ್ ವರದಿ
ಬದುಕಿನ ನೌಕೆಯನ್ನು ದಡ ಸೇರಿಸಲು ದಿನವೂ ಹೋರಾಡುತ್ತಿದ್ದ ಮಂಜುನಾಥ್ (40) ಎಂಬುವವರು ಅಡಿಕೆ ತೆಗೆಯುವಾಗ ಆಯತಪ್ಪಿ ಬಿದ್ದು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಕಳಸದ ಹಳುವಳ್ಳಿಯಲ್ಲಿ ನಡೆದಿದೆ.
ಹಿರೇಬೈಲು ಬೂದಿಗುಂಡಿ ಗ್ರಾಮದ ನಿವಾಸಿ ಮಂಜುನಾಥ್ (40) ಅವರು ತಮ್ಮ ಕುಟುಂಬದ ಹೊಟ್ಟೆ ತುಂಬಿಸಲು ಮತ್ತು ಜೀವನ ಸಾಗಿಸಲು ಪ್ರತಿದಿನವೂ ಕೂಲಿ ಕೆಲಸವನ್ನೇ ನಂಬಿದ್ದರು. ತಮ್ಮ ಜೀವವನ್ನೇ ಪಣಕ್ಕಿಟ್ಟು ಮರ ಏರುತ್ತಿದ್ದ ಮಂಜುನಾಥ್ಗೆ ಅಡಿಕೆ ತೆಗೆಯುವುದು ಹೊಸತೇನೂ ಆಗಿರಲಿಲ್ಲ. ಎಂದಿನAತೆ ಗುರುವಾರ ಬೆಳಿಗ್ಗೆಯೂ ಹಳುವಳ್ಳಿಯ ತೋಟವೊಂದಕ್ಕೆ ಅಡಿಕೆ ತೆಗೆಯಲು ಮರ ಏರಿದ್ದರು.
ಆದರೆ ವಿಧಿಯಾಟವೇ ಬೇರೆ ಇತ್ತು. ದುರಂತ ಘಟನೆಯಲ್ಲಿ, ಮರದಿಂದ ಆಯ ತಪ್ಪಿ ಕೆಳಗೆ ಬಿದ್ದ ಮಂಜುನಾಥ್ ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಕಳಸ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಂಜುನಾಥ್ ಕೊನೆಯುಸಿರೆಳೆದಿದ್ದಾರೆ.
ಈ ದುರ್ಘಟನೆಯು ಮಂಜುನಾಥ್ ಅವರ ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ತಮ್ಮ ಬದುಕಿನ ಆಸರೆಯಾಗಿದ್ದ, ತಾಯಿ, ಪತ್ನಿ, ಮಗಳು ಮತ್ತು ಮಗನ ಜೀವನದ ಆಸರೆಯಾಗಿದ್ದ ಮಂಜುನಾಥ್ ಅವರ ಅಗಲಿಕೆ ಕುಟುಂಬಕ್ಕೆ ತುಂಬಲಾರದ ನಷ್ಟವನ್ನುಂಟು ಮಾಡಿದೆ. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ಈ ಕುಟುಂಬ, ತಂದೆಯ ನಿಧನದಿಂದಾಗಿ ಈಗ ದಿಕ್ಕೇ ತೋಚದಂತೆ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.
“ನಮ್ಮನ್ನು ಯಾರು ಸಾಕಬೇಕು? ನನ್ನ ಮಕ್ಕಳಿಗೆ ಯಾರು ಆಸರೆಯಾಗುತ್ತಾರೆ?” ಎಂದು ಪತ್ನಿಯ ಆಕ್ರಂದನ, ತಮ್ಮ ಬದುಕಿನ ಆಧಾರ ಕಳಕೊಂಡ ಮಕ್ಕಳು ಮತ್ತು ಮಗನನ್ನು ಕಳೆದುಕೊಂಡ ತಾಯಿಯ ಗೋಳು ಅಲ್ಲಿ ನೆರೆದಿದ್ದವರ ಕಣ್ಣಂಚನ್ನೂ ತೇವಗೊಳಿಸಿತು.
