\



ಕಳಸ ಲೈವ್ ವರದಿ
ಕಳಸ ಕಲ್ಮಕ್ಕಿ ಗ್ರಾಮದ ಕುಕ್ಕೋಡು ಸೈಟ್ ನಿವಾಸಿ ಶಶಿಕಲಾ ಎಂಬುವರ ಶೀಟ್ ಮಾಡಿನ ಮನೆಗೆ ಭಾನುವಾರ ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.
ಮಧ್ಯಾಹ್ನ ಸುಮಾರು 4:30ರ ಸಮಯದಲ್ಲಿ ಶಶಿಕಲಾ ಅವರ ಮನೆಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಈ ಸಮಯದಲ್ಲಿ ಮನೆಯಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಹೋಟೆಲ್ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಈ ಬಡ ಕುಟುಂಬಕ್ಕೆ ಬೆಂಕಿ ಅವಘಡವು ಅಕ್ಷರಶಃ ಬೀದಿಗೆ ತಂದಿದೆ.
ಬೆAಕಿಯ ಕೆನ್ನಾಲಿಗೆಗೆ ಮನೆಯಲ್ಲಿದ್ದ ಅಕ್ಕಿ, ಆಹಾರ ಧಾನ್ಯಗಳು, ಪಾತ್ರೆಗಳು, ಬಟ್ಟೆಬರೆ ಹಾಗೂ ಪೀಠೋಪಕರಣಗಳು ಸಂಪೂರ್ಣವಾಗಿ ಸುಟ್ಟು ಹೋಗಿವೆ. ಅಷ್ಟೇ ಅಲ್ಲದೆ, ಜೀವನಕ್ಕೆ ಅತ್ಯಗತ್ಯವಾದ ರೇಷನ್ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ಪ್ರಮುಖ ದಾಖಲೆಗಳು ಹಾಗೂ ಗೋದ್ರೆಜ್ ಕೂಡ ಅಗ್ನಿಗೆ ಆಹುತಿಯಾಗಿವೆ.
ಮನೆಯಿಂದ ಹೊಗೆ ಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಕಾರ್ಯಪ್ರವೃತ್ತರಾದರು. ಗ್ರಾಮಸ್ಥರು ಹಾಗೂ ಕಳಸ ಪೊಲೀಸ್ ಠಾಣಾಧಿಕಾರಿಗಳು ಮತ್ತು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
