ಕಳಸ ಲೈವ್ ವರದಿ
ಅಖಿಲ ಭಾರತ ಕನ್ನಡ ಚುಟುಕು ಸಾಹಿತ್ಯ ಸಮ್ಮೇಳನವು 2026 ಜನವರಿ 4ರಂದು ಶೃಂಗೇರಿಯಲ್ಲಿ ನಡೆಯಲಿದ್ದು, ಈ ಸಮ್ಮೇಳನದಲ್ಲಿ ನೀಡಲಾಗುವ ಪ್ರತಿಷ್ಠಿತ ಚುಟುಕು ಸಿರಿ ಪ್ರಶಸ್ತಿಗೆ ಕಳಸ ಅ.ರಾ. ಸತೀಶ್ಚಂದ್ರ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸೂರಿ ಶ್ರೀನಿವಾಸ್ ತಿಳಿಸಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಚಿಕ್ಕಮಗಳೂರು ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಶೃಂಗೇರಿ ಇವರ ಸಂಯುಕ್ತಾಶ್ರಯದಲ್ಲಿ ನಡೆಯುವ ಈ ಸಮ್ಮೇಳನದಲ್ಲಿ ಅ.ರಾ. ಸತೀಶ್ಚಂದ್ರ ಅವರ ಸಾಹಿತ್ಯಿಕ ಕೊಡುಗೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಕಳಸ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿರುವ ಅ.ರಾ. ಸತೀಶ್ಚಂದ್ರ ಅವರು ವಿದ್ಯಾರ್ಥಿ ಜೀವನದಲ್ಲಿಯೇ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಗುರುತು ಮೂಡಿಸಿಕೊಂಡವರು. 1999ರಲ್ಲಿ ನಡೆದ ರಾಜ್ಯ ಮಟ್ಟದ ಚುಟುಕು ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿಯಲ್ಲಿ ಭಾಗವಹಿಸುವ ಮೂಲಕ ಸಾಹಿತ್ಯ ಲೋಕದಲ್ಲಿ ಚುರುಕಾಗಿ ತೊಡಗಿಸಿಕೊಂಡಿದ್ದಾರೆ.
ಮಲೆನಾಡ ಮಡಿಲಿನಿಂದ, ಏಕೆ ಹೀಗೆ ನಮ್ಮ ನಡುವೆ, ಅನುಪಮ, ಸುಕನ್ಯಾ, ಮಾಯಾದಿ, ನಾವು ನಮ್ಮ ಹೆಂಡತಿಯರು, ಚರಣದಾಸಿ, ಶಾಂತಮ್ ಪಾಪಂ, ಮಿಥುನ ರಾಶಿ, ಗಂಗೆ ಗೌರಿ ಸೇರಿದಂತೆ ಹಲವು ಜನಪ್ರಿಯ ಧಾರಾವಾಹಿಗಳಲ್ಲಿ ನಟನೆಯ ಮೂಲಕ ಜನಮನ ಗೆದ್ದಿದ್ದಾರೆ. ಇದೇ ವೇಳೆ ಮಲೆನಾಡ ಮಡಿಲಿನಿಂದ, ಹಸಿರು ತೋರಣ, ಸಸ್ಯ ಪುಷ್ಕರಣಿ, ಶಂಕರಾಚಾರ್ಯ ಮತ್ತು ಕರ್ಣ, ಏಕೆ ಹೀಗೆ ನಮ್ಮ ನಡುವೆ, ಮಾಯಾವಿ ಧಾರಾವಾಹಿಗಳಿಗೆ ಕಲಾ ನಿರ್ದೇಶನ ನೀಡಿರುವುದು ಗಮನಾರ್ಹ.
ನನಗೆ ನೀನು ನಿನಗೆ ನಾನು ಚಲನಚಿತ್ರಕ್ಕೆ ಗೀತಾರಚನೆ, ಕಳಸ ಗಿರಿಜಾ ಕಲ್ಯಾಣ ಉತ್ಸವದ ಕಿರುಚಿತ್ರ ನಿರ್ಮಿಸಿ ಚಂದನ ವಾಹಿನಿಯಲ್ಲಿ ಪ್ರಸಾರ, ಸಹಕಾರಿ ಸಿರಿ ಹೊನ್ನೆ ಸ್ಮರಣ ಸಂಚಿಕೆಯ ವಿನ್ಯಾಸ ಹಾಗೂ ಸಂಪಾದನೆ, ಸ್ಮೃತಿ ಸ್ಮರಣ ಸಂಚಿಕೆಯ ಸಹ ಸಂಪಾದಕರಾಗಿ ಕಾರ್ಯನಿರ್ವಹಿಸಿರುವುದು ಅವರ ಬಹುಮುಖ ಪ್ರತಿಭೆಯನ್ನು ಸಾರುತ್ತದೆ.
ಸಾಹಿತ್ಯ, ಕಲೆ, ನಟನೆ, ನಿರ್ದೇಶನ, ಬರವಣಿಗೆ ಹಾಗೂ ಸಂಘಟನಾ ಕ್ಷೇತ್ರಗಳಲ್ಲಿ ಅಪಾರ ಸೇವೆ ಸಲ್ಲಿಸಿರುವ ಅ.ರಾ. ಸತೀಶ್ಚಂದ್ರ ಅವರು, ಪ್ರಸ್ತುತ ಕಳಸ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸಕ್ರಿಯ ಹಾಗೂ ಸೃಜನಾತ್ಮಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪರಿಷತ್ತಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಈವರೆಗೆ ಹಲವಾರು ಪ್ರಶಸ್ತಿಗಳನ್ನು ಪಡೆದಿರುವ ಅವರು, ಇದೀಗ ಚುಟುಕು ಸಿರಿ ಪ್ರಶಸ್ತಿ ಗೆ ಆಯ್ಕೆಯಾಗಿರುವುದು ಕಳಸ ಸಾಹಿತ್ಯ ವಲಯಕ್ಕೆ ಹೆಮ್ಮೆಯ ವಿಷಯವಾಗಿದೆ
