ಕಳಸ ಲೈವ್ ವರದಿ
ಪ್ರವಾಸಿ ತಾಣಗಳ ರಾಣಿಯೆಂದೇ ಖ್ಯಾತಿ ಪಡೆದಿರುವ ಮಲೆನಾಡಿನ ಮುತ್ತು ರಾಣಿ ಝರಿಗೆ ತೆರಳುವ ಪ್ರವಾಸಿಗರಿಗೆ ಹೊಸ ವರ್ಷ ಆರಂಭದಲ್ಲೇ ಅರಣ್ಯ ಇಲಾಖೆ ಭಾರೀ ಶಾಕ್ ನೀಡಿದೆ.
ಇದುವರೆಗೆ ಯಾವುದೇ ಶುಲ್ಕವಿಲ್ಲದೆ ಮುಕ್ತವಾಗಿ ಭೇಟಿ ನೀಡಬಹುದಾಗಿದ್ದ ಈ ಪ್ರಕೃತಿ ಸೌಂದರ್ಯದ ತಾಣಕ್ಕೆ, ಜನವರಿ ೧ರಿಂದ ಪ್ರವೇಶಕ್ಕೆ ಶುಲ್ಕ ವಿಧಿಸಲಾಗಿದೆ. ಹೊಸ ನಿಯಮದಂತೆ ವಯಸ್ಕರಿಗೆ ₹೩೦ ಹಾಗೂ ಮಕ್ಕಳಿಗೆ ₹೧೦ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ.
ಇದರೊಂದಿಗೆ ವೀಕ್ಷಣಾ ಸಮಯಕ್ಕೂ ಮಿತಿ ವಿಧಿಸಲಾಗಿದ್ದು, ಬೆಳಿಗ್ಗೆ ೬ರಿಂದ ಸಂಜೆ ೬ ಗಂಟೆಯವರೆಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಅಲ್ಲದೆ, ಡ್ರೋನ್ ಕ್ಯಾಮರ ಬಳಕೆ,ಪ್ಲಾಸ್ಟಿಕ್ ವಸ್ತುಗಳ ಉಪಯೋಗ, ಮದ್ಯಪಾನ ಹಾಗೂ ಧೂಮಪಾನ ಇತ್ಯಾದಿಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಪ್ರಕೃತಿಯ ಸಂರಕ್ಷಣೆಯ ಉದ್ದೇಶವನ್ನು ಅರಣ್ಯ ಇಲಾಖೆ ಮುಂದಿಟ್ಟಿದ್ದರೂ, ಈ ನಿರ್ಧಾರ ಪ್ರವಾಸಿಗರು ಹಾಗೂ ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ. “ಇದುವರೆಗೆ ಉಚಿತವಾಗಿ ನೋಡಿಕೊಂಡು ಬಂದ ನೈಸರ್ಗಿಕ ತಾಣಕ್ಕೆ ಏಕಾಏಕಿ ಶುಲ್ಕ ವಿಧಿಸಿರುವುದು ಸರಿಯೇ?” ಎಂಬ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
ಮಲೆನಾಡಿನ ಪ್ರವಾಸೋದ್ಯಮಕ್ಕೆ ಜೀವಂತ ಉದಾಹರಣೆಯಾಗಿರುವ ರಾಣಿ ಝರಿಯ ಮೇಲೆ ಇಂತಹ ನಿಯಮಗಳು ಪ್ರವಾಸಿಗರ ಸಂಖ್ಯೆಗೆ ಕಡಿವಾಣ ಹಾಕಬಹುದೇ ಎಂಬ ಆತಂಕವೂ ವ್ಯಕ್ತವಾಗಿದೆ.
ಒಟ್ಟಾರೆ, ಪ್ರಕೃತಿ ಸಂರಕ್ಷಣೆ ಹಾಗೂ ಜನಸಾಮಾನ್ಯರ ಪ್ರವೇಶ ಈ ಎರಡರ ನಡುವೆ ಸಮತೋಲನ ಸಾಧಿಸುವ ಹೊಣೆಗಾರಿಕೆ ಇಲಾಖೆ ಮುಂದಿದೆ ಎಂಬ ಮಾತು ಇದೀಗ ಎಲ್ಲೆಡೆ ಕೇಳಿಬರುತ್ತಿದೆ.
