
ಕಳಸ ಲೈವ್ ವರದಿ
ರೈತನೇ ನಮ್ಮ ಸಂಸ್ಕೃತಿಯ ಮೂಲ. ಜಾನಪದ ಪರಂಪರೆ ಕೃಷಿಯೊಡನೆ ಬೆಸೆದುಕೊಂಡಿದೆ. ರೈತರ ಹೊಲಕ್ಕೆ ಹೋಗಿ ಅವರ ಬದುಕನ್ನು ಅರಿತುಕೊಳ್ಳುವ ಮೂಲಕ ಜಾನಪದ ಸಂಸ್ಕೃತಿಯನ್ನು ಜೀವಂತವಾಗಿಟ್ಟುಕೊಳ್ಳಬೇಕು ಎಂದು ಕನ್ನಡ ಜಾನಪದ ಪರಿಷತ್ತು ಅಧ್ಯಕ್ಷ ಅಜಿತ್ ಪ್ರಸಾದ್ ಹೇಳಿದರು.
ತಾಲ್ಲೂಕು ಕನ್ನಡ ಜಾನಪದ ಪರಿಷತ್ತು (ಕಜಾಪ) ವತಿಯಿಂದ ಹಮ್ಮಿಕೊಳ್ಳಲಾದ “ರೈತರ ಹೊಲದ ಕಡೆ ಕನ್ನಡ ಜಾನಪದ ಪರಿಷತ್ ನಡೆ” ಎಂಬ ವಿನೂತನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು “ಜಾನಪದ ಕಲೆ ಮತ್ತು ಸಂಸ್ಕೃತಿಯ ಬೇರುಗಳು ಇರುವುದೇ ಮಣ್ಣಿನ ನೆಲೆಯಲ್ಲಿ. ಕೃಷಿ ಚಟುವಟಿಕೆಯಿಂದ ದೂರವಾಗುತ್ತಿರುವ ಇಂದಿನ ಪೀಳಿಗೆಗೆ ಮಣ್ಣಿನ ಸಂಸ್ಕೃತಿಯನ್ನು ಪರಿಚಯಿಸುವುದು ಮತ್ತು ರೈತರೊಂದಿಗೆ ನಾವಿದ್ದೇವೆ ಎನ್ನುವ ಭರವಸೆ ನೀಡುವುದು ಈ ಕಾರ್ಯಕ್ರಮದ ಉದ್ದೇಶ. ಸದಸ್ಯರೆಲ್ಲರೂ ಒಟ್ಟಾಗಿ ಪೈರು ಕೊಯ್ದ ಈ ಕ್ಷಣ ಅತ್ಯಂತ ತೃಪ್ತಿ ನೀಡಿದೆ ಎಂದರು.
ಕಜಾಪ ಮಹಿಳಾ ಅಧ್ಯಕ್ಷೆ ಸುಜಯ ಸದಾನಂದ ಮಾತನಾಡಿ ಕೃಷಿ ಕೇವಲ ಒಂದು ಕಸುಬಲ್ಲ, ಅದು ನಮ್ಮ ಬದುಕಿನ ಶಕ್ತಿ. ಮಹಿಳೆಯರು ಕೃಷಿ ಮತ್ತು ಜಾನಪದ ಸಂಸ್ಕೃತಿಯನ್ನು ಉಳಿಸುವಲ್ಲಿ ದೊಡ್ಡ ಪಾತ್ರ ವಹಿಸುತ್ತಿದ್ದಾರೆ. ಸದಸ್ಯೆ ಪ್ರತಿಮಾ ಅವರ ಗದ್ದೆಯಲ್ಲಿ ಎಲ್ಲರೂ ಸೇರಿ ಕೆಲಸ ಮಾಡಿದ್ದು ನಮಗೆ ಹಬ್ಬದಂತಿದೆ. ಇಂತಹ ಕಾರ್ಯಕ್ರಮಗಳು ನಮ್ಮ ಸಂಘಟನೆಯನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಹೇಳಿದರು.
ತಾಲ್ಲೂಕಿನ ಎಡದಾಳು ಗ್ರಾಮದ ಕಜಾಪ ಸದಸ್ಯೆ ಪ್ರತಿಮಾ ಅವರ ಗದ್ದೆಯಲ್ಲಿ ಬೆಳೆದಿದ್ದ ಪೈರನ್ನು ಕೊಯ್ಲು ಮಾಡುವ ಮೂಲಕ ಈ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಪರಿಷತ್ತಿನ ಪದಾಧಿಕಾರಿಗಳು ಹಾಗೂ ಸದಸ್ಯರೆಲ್ಲರೂ ಸ್ವತಃ ಗದ್ದೆಗೆ ಇಳಿದು, ಸಾಂಪ್ರದಾಯಿಕ ಶೈಲಿಯಲ್ಲಿ ಪೈರು ಕೊಯ್ಲು ಮಾಡುವ ಮೂಲಕ ಕೃಷಿ ಚಟುವಟಿಕೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಜಾನಪದ ಹಾಡುಗಳ ಗುನುಗಿನೊಂದಿಗೆ ಸಾಗಿದ ಈ ಕಾರ್ಯಕ್ರಮವು ನೆರೆದವರಲ್ಲಿ ಸಂಭ್ರಮ ಮೂಡಿಸಿತು.
ಈ ಸಂದರ್ಭದಲ್ಲಿ ಕಜಾಪ ತಾಲ್ಲೂಕು ಅಧ್ಯಕ್ಷರಾದ ಅಜಿತ್ ಪ್ರಸಾದ್, ಮಹಿಳಾ ಘಟಕದ ಅಧ್ಯಕ್ಷೆ ಸುಜಯ ಸದಾನಂದ, ಉಪಾಧ್ಯಕ್ಷ ವಿನಾಯಕ, ಸದಸ್ಯರಾದ ಭರತರಾಜ್, ವಿದ್ಯಾ, ಪ್ರೇಮ್ ಕುಮಾರ್, ಕಲ್ಪನಾ ಅಜಿತ್, ಅಮಿತ ವಿನಾಯಕ, ಮುರುಳಿ ಭಟ್, ಹಿತೇಶ್ ಹಾಗೂ ಇತರರು ಉಪಸ್ಥಿತರಿದ್ದು ಕೃಷಿ ಕಾರ್ಯದಲ್ಲಿ ಕೈಜೋಡಿಸಿದರು.
