ಕಳಸ ಲೈವ್ ವರದಿ
ಅಖಿಲ ಭಾರತ ಹುಲಿ ಗಣತಿ 2026ರ ಪ್ರಕ್ರಿಯೆಯು ಜನವರಿ 5 ರಿಂದ ಆರಂಭವಾಗಲಿರುವ ಹಿನ್ನೆಲೆಯಲ್ಲಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಸೇರಿದಂತೆ ಸುತ್ತಮುತ್ತಲಿನ ಪ್ರಮುಖ ಚಾರಣ ಪಥಗಳು ಮತ್ತು ಜಲಪಾತಗಳಿಗೆ ಸಾರ್ವಜನಿಕರ ಪ್ರವೇಶವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ ಇವರು ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, ಜನವರಿ 5, 2026 ರಿಂದ ಜನವರಿ 12, 2026 ರವರೆಗೆ (ಒಟ್ಟು 8 ದಿನಗಳು) ಈ ನಿರ್ಬಂಧ ಜಾರಿಯಲ್ಲಿರುತ್ತದೆ.
ಹುಲಿ ಗಣತಿ ಕಾರ್ಯವು ಸುಗಮವಾಗಿ ನಡೆಯಲು ಅರಣ್ಯ ಇಲಾಖೆಯು ಕುದುರೆಮುಖ ಚಾರಣ, ಗಂಗಡಿಕಲ್ ಚಾರಣ, ಕುರಿಂಜಾಲ್ ಚಾರಣ, ವಾಲಿಕುಂಜ ಕೆರೆಕಟ್ಟೆ ಚಾರಣ, ನೇತ್ರಾವತಿ ಚಾರಣ, ಕೊಡಚಾದ್ರಿ ಮಾಲೂರು ಚಾರಣ, ಕೊಡಚಾದ್ರಿ ಹಿಡ್ಲುಮನೆ ಜಲಪಾತ ಚಾರಣ, ನರಸಿಂಹ ಪರ್ವತ ಮಲ್ಲಂದೂರು ಚಾರಣ, ನರಸಿಂಹ ಪರ್ವತ ಕಿಗ್ಗ ಚಾರಣ, ವಾಲಿಕುಂಜ ಕಾರ್ಕಳ ಚಾರಣ, ಬಂಡಾಜೆ ಓಲಂಬ್ರ ಚಾರಣ ತಾಣಗಳನ್ನು ಬಂದ್ ಮಾಡಿದೆ:
ಕೇವಲ ಚಾರಣ ಪಥಗಳಲ್ಲದೆ, ಈ ವಲಯಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಜಲಪಾತಗಳಿಗೂ ಪ್ರವಾಸಿಗರು ಮತ್ತು ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಅರಣ್ಯ ಪ್ರದೇಶದಲ್ಲಿ ಗಣತಿ ಕಾರ್ಯಕ್ಕೆ ಯಾವುದೇ ಅಡಚಣೆಯಾಗದಂತೆ ಮತ್ತು ವನ್ಯಜೀವಿಗಳ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಪ್ರವಾಸಿಗರು ಈ ದಿನಾಂಕಗಳAದು ತಮ್ಮ ಪ್ರವಾಸವನ್ನು ಯೋಜಿಸದಂತೆ ಅರಣ್ಯ ಇಲಾಖೆ ಮನವಿ ಮಾಡಿದೆ. ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮತ್ತು ಚಾರಣ ಪಥಗಳಲ್ಲಿ ಕಾವಲುಗಾರರನ್ನು ನಿಯೋಜಿಸಲು ಇಲಾಖೆ ಸೂಚಿಸಿದೆ.
