

ಕಳಸ ಲೈವ್ ವರದಿ
ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ. ಕಳೆದ ಎರಡು ವರ್ಷಗಳಲ್ಲಿ ಕಳಸ ತಾಲ್ಲೂಕಿಗೆ ಸುಮಾರು 100 ಕೋಟಿ ರೂ. ಅನುದಾನ ತರುವ ಮೂಲಕ ಮೂಲಭೂತ ಸೌಲಭ್ಯಗಳ ಕ್ರಾಂತಿ ಮಾಡಲಾಗಿದೆ ಎಂದು ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ತಿಳಿಸಿದರು.
ತಾಲ್ಲೂಕಿನ ಮಾರ್ಕೋಡು ಗ್ರಾಮದಲ್ಲಿ ಬಹುಕಾಲದ ಬೇಡಿಕೆಯಾಗಿದ್ದ ಕಾಲು ಸಂಕದ ಉದ್ಘಾಟನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಕಳಸ ತಾಲ್ಲೂಕಿನ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವುದು ನನ್ನ ಜವಾಬ್ದಾರಿ. ಇದುವರೆಗೆ 100 ಕೋಟಿ ರೂ. ಅನುದಾನದಲ್ಲಿ ಹತ್ತಾರು ಕಿರು ಸೇತುವೆಗಳು ಹಾಗೂ ರಸ್ತೆಗಳನ್ನು ನಿರ್ಮಿಸಲಾಗಿದೆ. ಈ ಹಿಂದೆ ಕಾಂಕ್ರೀಟ್ ಕಾಣದ ರಸ್ತೆಗಳು ಇಂದು ಸುಸಜ್ಜಿತವಾಗಿವೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಪ್ರತಿಯೊಂದು ಭಾಗಕ್ಕೂ ಮೂಲಭೂತ ಸೌಲಭ್ಯ ಒದಗಿಸಲು ಹಂತ ಹಂತವಾಗಿ ಶಕ್ತಿ ಮೀರಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು.
ಸಂಸೆ ಗ್ರಾಮದ ಮಾಕೋಡು ಎಂಬಲ್ಲಿನ ಗ್ರಾಮಸ್ಥರ ದಶಕಗಳ ಬೇಡಿಕೆಯಾಗಿದ್ದ ಕಾಲು ಸಂಕವನ್ನು ಶಾಸಕರು ಉದ್ಘಾಟಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿದರು.
ಕಳಸ-ಬಾಳೆಹೊನ್ನೂರು ಸಂಪರ್ಕಿಸುವ ಕಗ್ಗನಳ್ಳದ ಶಿಥಿಲಗೊಂಡಿದ್ದ ಸೇತುವೆಯನ್ನು 3.5 ಕೋಟಿ ರೂ. ವೆಚ್ಚದಲ್ಲಿ ಮರು ನಿರ್ಮಾಣ ಮಾಡಲು ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು.ಶಂಕರಗುಡಿಗೆ ಗ್ರಾಮದಲ್ಲಿ 20 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಕಳಸ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಕೆ.ಎ. ಶ್ರೇಣಿಕ್, ಪ್ರಮುಖ ಮುಖಂಡರಾದ ರಾಜೇಂದ್ರ ಹೆಬ್ಬಾರ್, ಮಹಮ್ಮದ್ ರಫೀಕ್, ವೀರೇಂದ್ರ ಜೈನ್, ವಿಶ್ವನಾಥ್, ಸುಧಾಕರ್ ಕಡೆಕುಡಿಗೆ, ಸುಜಿತ್ ಬೆಳ್ಳ, ಶ್ರೀನಿವಾಸ್, ಸಂಶುದ್ದೀನ್, ರಾಮ್ದೇವ್, ಚೇತನ್, ಉದಯ ಮುಳ್ಳೋಡಿ, ಗಣೇಶ್ ಭಟ್ ಇತರರು ಉಪಸ್ಥಿತರಿದ್ದರು.
