
ಕಳಸ ಲೈವ್ ವರದಿ
ತಾಲ್ಲೂಕಿನ ಸುಪ್ರಸಿದ್ಧ ಮತ್ತು ಬೃಹತ್ ಕುಟುಂಬಗಳಲ್ಲಿ ಒಂದಾದ ಕಳಸದ ‘ಮುನ್ನೂರ್ ಪಾಲ್’ ಕುಟುಂಬವು, ಕಾಲಧರ್ಮ ಹಾಗೂ ಪ್ರಾಯೋಗಿಕ ಅಡಚಣೆಗಳ ಹಿನ್ನೆಲೆಯಲ್ಲಿ ಪರಸ್ಪರ ಕುಟುಂಬಗಳ ನಡುವಿನ ಸೂತಕವನ್ನು ಶಾಸ್ತ್ರೋಕ್ತವಾಗಿ ಕೈಬಿಡುವ ಮಹತ್ವದ ನಿರ್ಣಯವನ್ನು ಕೈಗೊಂಡಿದೆ.
ಸುಮಾರು 72ಕ್ಕೂ ಹೆಚ್ಚು ಮನೆಗಳನ್ನು ಹೊಂದಿರುವ ಈ ದೊಡ್ಡ ಕುಟುಂಬದಲ್ಲಿ ವರ್ಷಕ್ಕೆ ಸರಾಸರಿ 95ಕ್ಕೂ ಹೆಚ್ಚು ವೈದೀಕ ಕಾರ್ಯಗಳು (ಮರಣ ಸಂಬ0ಧಿ ಕಾರ್ಯಗಳು) ನಡೆಯುತ್ತಿದ್ದವು. ವರ್ಷದ ಎಲ್ಲಾ ಮಾಸ ಹಾಗೂ ಪಕ್ಷಗಳಲ್ಲೂ ವೈದೀಕಗಳು ಇರುತ್ತಿದ್ದರಿಂದ, ಶಾಸ್ತ್ರೋಕ್ತವಾಗಿ ಒಂದು ಪಕ್ಷ ಬಿಟ್ಟು ಶುಭ ಕಾರ್ಯಗಳನ್ನು ನಡೆಸಲು ಕುಟುಂಬದ ಸದಸ್ಯರಿಗೆ ಸಾಧ್ಯವಾಗುತ್ತಿರಲಿಲ್ಲ.
ವೈದೀಕಗಳ ಜೊತೆಗೆ ವಾರದ ಮಂಗಳವಾರ, ಶನಿವಾರಗಳು, ಅಮಾವಾಸ್ಯೆ-ಹುಣ್ಣಿಮೆ, ಭರಣಿ-ಕೃತ್ತಿಕೆ ನಕ್ಷತ್ರಗಳು, ಆಷಾಢ, ಶೂನ್ಯ ಹಾಗೂ ಅಧಿಕ ಮಾಸಗಳನ್ನೆಲ್ಲಾ ಲೆಕ್ಕ ಹಾಕಿದರೆ ವರ್ಷದ 365 ದಿನಗಳಲ್ಲಿ ಸುಮಾರು 300 ದಿನಗಳು ಯಾವುದೇ ಶುಭ ಕಾರ್ಯಕ್ಕೆ ಲಭ್ಯವಿರುತ್ತಿರಲಿಲ್ಲ. ಇದರಿಂದಾಗಿ ಕಳೆದ ಮೂರ್ನಾಲ್ಕು ವರ್ಷಗಳಿಂದ ಗಣಪತಿ ಹಬ್ಬ, ದೀಪಾವಳಿಯಂತಹ ಹಬ್ಬಗಳನ್ನು ಆಚರಿಸಲು ಅಸಾಧ್ಯವಾಗಿತ್ತು. ಅಲ್ಲದೆ, ಕುಟುಂಬವು ಅತೀ ದೊಡ್ಡದಾಗಿ ಬೆಳೆದಿದ್ದರಿಂದ ಮೂರನೇ ತಲೆಮಾರಿನ ನಂತರದ ಸಂಬ0ಧಗಳ ಬಗ್ಗೆ ಯಾರಿಗೂ ಸ್ಪಷ್ಟ ಮಾಹಿತಿ ಇರಲಿಲ್ಲ.
ಈ ಎಲ್ಲ ಸಮಸ್ಯೆಗಳನ್ನು ಚರ್ಚಿಸಲು ದಿನಾಂಕ 10.01.2026 ರ ಶನಿವಾರದಂದು ಕುಟುಂಬದ ಕುಲಪುರೋಹಿತರ ನೇತೃತ್ವದಲ್ಲಿ ಸಮಸ್ತ ಕುಟುಂಬದ ಸದಸ್ಯರ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ತಲೆಮಾರುಗಳ ಅನ್ವಯ ಕುಟುಂಬವನ್ನು ಒಂಬತ್ತು ಭಾಗಗಳಾಗಿ ಪ್ರತ್ಯೇಕಿಸಿ, ಆ ಗುಂಪುಗಳ ನಡುವೆ ಇನ್ನು ಮುಂದೆ ಸೂತಕವನ್ನು ಪಾಲಿಸದಿರಲು ತೀರ್ಮಾನಿಸಲಾಯಿತು.
ದಿ. ಚಂದ್ರಶೇಖರಯ್ಯನವರ ಕುಟುಂಬ, ಹೊಸಳ್ಳಿ. ದಿ. ಅಣ್ಣಪ್ಪಯ್ಯನವರ ಕುಟುಂಬ, ಜಾವಳಿ. ದಿ. ವೆಂಕಪ್ಪಯ್ಯನವರ ಕುಟುಂಬ, ಹೆಕ್ಸಾರ್. ದಿ. ರಾಮಚಂದ್ರಯ್ಯನವರ ಕುಟುಂಬ, ಕಣದಮನೆ. ದಿ. ರಂಗಯ್ಯನವರ ಕುಟುಂಬ, ಮೇಲ್ಮನ್ಚಾಡಿ. ದಿ. ಅನಂತಯ್ಯನವರ ಕುಟುಂಬ, ಅಂಬಿನಕುಡಿಗೆ. ದಿ. ತಿಪ್ಪಯ್ಯನವರ ಕುಟುಂಬ, ಕವಿಲುಹೊಳೆ. ದಿ. ಕೃಷ್ಣದೇವರಯ್ಯನವರ ಕುಟುಂಬ, ಮುನ್ನೂರ್ ಪಾಲ್, ಹಾಸಂಗಿ, ಮೆಗೂರು. ದಿ. ನಾರಾಣಪ್ಪಯ್ಯನವರ ಕುಟುಂಬ, ಮುನ್ನೂರ್ ಪಾಲ್.
ಈ ನಿರ್ಧಾರದಂತೆ, ಕಳೆದ ಜನವರಿ 15ರ ಮಕರ ಸಂಕ್ರಾ0ತಿಯ ಶುಭ ದಿನದಂದು ಮೇಗೂರು ಶ್ರೀ ಲಕ್ಷ್ಮೀ ವೆಂಕಟರಮಣ ಸನ್ನಿಧಾನದಲ್ಲಿ ವಿಶೇಷ ಪೂಜೆ ಹಾಗೂ ಶಾಸ್ತ್ರೋಕ್ತ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಕುಲಪುರೋಹಿತರ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮದ ನೇತೃತ್ವವನ್ನು ಪ್ರಮೋದ್ ಭಾರತೀಪುರ, ಅ.ರಾ. ಸತೀಶ್ಚಂದ್ರ ಅಂಬಿನಕುಡಿಗೆ ಹಾಗೂ ಗೀತಾ ಮಕ್ಕಿಮನೆ ವಹಿಸಿದ್ದರು.
ಈ ನಿರ್ಧಾರದಿಂದಾಗಿ ಮುಂದಿನ ದಿನಗಳಲ್ಲಿ ಕುಟುಂಬದ ಪ್ರತ್ಯೇಕಗೊಂಡ ಶಾಖೆಗಳು ತಮ್ಮ ಶುಭ ಕಾರ್ಯಗಳನ್ನು ಹಾಗೂ ಹಬ್ಬ ಹರಿದಿನಗಳನ್ನು ಯಾವುದೇ ಅಡೆತಡೆಯಿಲ್ಲದೆ ಆಚರಿಸಲು ಅನುಕೂಲವಾದಂತಾಗಿದೆ.
