
ಕಳಸ ಲೈವ್ ವರದಿ
ಛಲ ಮತ್ತು ಪರಿಶ್ರಮವಿದ್ದರೆ ಎಂತಹ ಸಾಧನೆಯನ್ನಾದರೂ ಮಾಡಬಹುದು ಎಂಬುದನ್ನು ಕಳಸದ ಯುವತಿ ಸ್ವಾತಿ ಕೆ. ಪಿ. ಸಾಬೀತುಪಡಿಸಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿ (MSW) ಪರೀಕ್ಷೆಯಲ್ಲಿ ಪ್ರಥಮ ರಾಂಕ್ ಪಡೆಯುವುದರ ಜೊತೆಗೆ ಚಿನ್ನದ ಪದಕವನ್ನು ಮುಡಿಗೇರಿಸಿಕೊಳ್ಳುವ ಮೂಲಕ ಇವರು ತಮ್ಮ ಊರು ಹಾಗೂ ಸಂಸ್ಥೆಗೆ ಕೀರ್ತಿ ತಂದಿದ್ದಾರೆ.
ಕಳಸದ ನಿವಾಸಿ ಪ್ರಕಾಶ್ ಹಾಗೂ ಸಾದ್ವಿ ದಂಪತಿಯ ಪುತ್ರಿಯಾದ ಸ್ವಾತಿ ಅವರು ಅತ್ಯಂತ ಸಾಮಾನ್ಯ ಕುಟುಂಬದಿoದ ಬಂದವರು. ತಂದೆ ಪ್ರಕಾಶ್ ಅವರು ಇಲ್ಲಿನ ವಾಮನ ಭಟ್ ಬಟ್ಟೆ ಅಂಗಡಿಯಲ್ಲಿ ಉದ್ಯೋಗಿಯಾಗಿದ್ದು, ತಾಯಿ ಸಾದ್ವಿ ಗೃಹಿಣಿಯಾಗಿದ್ದಾರೆ. ಸ್ವಾತಿ ಅವರು ಕಳಸದ ಪ್ರಬೋಧಿನಿ ವಿದ್ಯಾ ಕೇಂದ್ರದ ಹಿರಿಯ ವಿದ್ಯಾರ್ಥಿನಿಯಾಗಿದ್ದು, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ತಮ್ಮ ಸ್ನಾತಕೋತ್ತರ ವ್ಯಾಸಂಗವನ್ನು ಪೂರೈಸಿದ್ದಾರೆ.
ಬಡತನದ ನಡುವೆಯೂ ಶಿಕ್ಷಣದಲ್ಲಿ ಅತ್ಯುನ್ನತ ಸಾಧನೆ ಮಾಡಿದ ಸ್ವಾತಿಯವರನ್ನು ಕಂಡು ಪ್ರಬೋಧಿನಿ ವಿದ್ಯಾ ಕೇಂದ್ರದ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕ ವೃಂದದವರು ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಹಿರಿಯ ವಿದ್ಯಾರ್ಥಿನಿಯ ಈ ಮಹೋನ್ನತ ಸಾಧನೆಯನ್ನು ಶಾಲಾ ಆಡಳಿತ ಮಂಡಳಿಯು ಹೃತ್ಪೂರ್ವಕವಾಗಿ ಅಭಿನಂದಿಸಿದೆ
