ಕಳಸ ಲೈವ್ ವರದಿ
ಇಲ್ಲಿನ ಕೆಳಭಾಗದ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಫೆಬ್ರವರಿ 19ರಿಂದ 24ರವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮರಥೋತ್ಸವ ಹಾಗೂ ನೂತನ ಗೋಪುರ ಶಿಖರ ಲೋಕಾರ್ಪಣಾ ಸಮಾರಂಭವು ವಿಜೃಂಭಣೆಯಿ0ದ ನಡೆಯಲಿದೆ.
ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾಪೀಠಾಧೀಶ್ವರರಾದ ಜಗದ್ಗುರು ಶ್ರೀಶ್ರೀಶ್ರೀ ಭಾರತೀತೀರ್ಥ ಮಹಾಸನ್ನಿಧಾನಂಗಳವರ ಹಾಗೂ ಜಗದ್ಗುರು ಶ್ರೀಶ್ರೀಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ಪೂರ್ಣಾನುಗ್ರಹದೊಂದಿಗೆ ಈ ಪವಿತ್ರ ಕಾರ್ಯಕ್ರಮಗಳು ಜರುಗಲಿವೆ.
ಫೆಬ್ರವರಿ 19 (ಗುರುವಾರ): ಸಂಜೆ ಫಲನ್ಯಾಸ, ರಾಕ್ಷೋಘ್ನಹೋಮ ಹಾಗೂ ಶಿಖರ ಪ್ರತಿಷ್ಠಾಂಗ ಕಾರ್ಯಗಳು ನಡೆಯಲಿವೆ.
ಫೆಬ್ರವರಿ 20 (ಶುಕ್ರವಾರ): ಅಂದು ಬೆಳಿಗ್ಗೆ ಚಂಡಿಕಾಯಾಗ ನಡೆಯಲಿದ್ದು, ಪೂರ್ವಾಹ್ನ 11 ಗಂಟೆಗೆ ಜಗದ್ಗುರು ಶ್ರೀಶ್ರೀಶ್ರೀ ವಿಧುಶೇಖರಭಾರತೀ ಸನ್ನಿಧಾನಂಗಳವರ ಆಗಮನ ಮತ್ತು ಪೂರ್ಣಕುಂಭ ಸ್ವಾಗತವಿರುತ್ತದೆ. ಶ್ರೀಗಳ ದಿವ್ಯ ಹಸ್ತದಿಂದ ಪೂರ್ಣಾಹುತಿ, ದೇವಿಗೆ ಮಹಾಪೂಜೆ ಹಾಗೂ ಶಿಖರ ಕುಂಭಾಭಿಷೇಕ ನೆರವೇರಲಿದೆ. ತದನಂತರ ಶ್ರೀಗಳಿಂದ ಆಶೀರ್ವಚನ ಮತ್ತು ಅನುಗ್ರಹ ಮಂತ್ರಾಕ್ಷತೆ ಕಾರ್ಯಕ್ರಮ ನಡೆಯಲಿದೆ.
ಫೆಬ್ರವರಿ 21 (ಶನಿವಾರ): ಬೆಳಿಗ್ಗೆ ಗುರು-ಗಣಪತಿ ಪ್ರಾರ್ಥನೆ, ಸಿಂಹಾದಿವಾಸ ಹೋಮ ಹಾಗೂ ಧ್ವಜಾರೋಹಣ ನಡೆಯಲಿದೆ.
ಫೆಬ್ರವರಿ 22 (ಭಾನುವಾರ): ಬ್ರಹ್ಮರಥೋತ್ಸವ ವಿಜೃಂಭಣೆಯಿ0ದ ಜರುಗಲಿದೆ. ಬೆಳಿಗ್ಗೆ ನವಕಪ್ರಧಾನ ಕಲಶ ಸ್ಥಾಪನೆ, ಕಲಶಾಭಿಷೇಕ ಹಾಗೂ ಮಹಾಪೂಜೆ ನೆರವೇರಲಿದೆ. ರಾತ್ರಿ ಶ್ರೀಭೂತ ಬಲಿ ಮತ್ತು ಶಯನೋತ್ಸವ ಇರಲಿದೆ.
ಫೆಬ್ರವರಿ 23 (ಸೋಮವಾರ): ಅವಭೃತ ಸ್ನಾನ, ಪ್ರಸಾದ ವಿನಿಯೋಗ ಹಾಗೂ ರಾತ್ರಿ ಧ್ವಜಾವರೋಹಣದೊಂದಿಗೆ ಉತ್ಸವದ ಕಾರ್ಯಕ್ರಮಗಳು ಸಂಪನ್ನಗೊಳ್ಳಲಿವೆ.
ಫೆಬ್ರವರಿ 24 (ಮಂಗಳವಾರ): ಶುದ್ಧ ಸಂಪ್ರೋಕ್ಷಣೆ ಹಾಗೂ ಕಲಾತತ್ವ ಹೋಮದೊಂದಿಗೆ ಧಾರ್ಮಿಕ ವಿಧಿವಿಧಾನಗಳು ಮುಕ್ತಾಯಗೊಳ್ಳಲಿವೆ.
ಉತ್ಸವದ ಎಲ್ಲಾ ದಿನಗಳಂದು ಭಕ್ತಾದಿಗಳಿಗೆ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ. ಈ ಎಲ್ಲಾ ಪುಣ್ಯ ಕಾರ್ಯಗಳಲ್ಲಿ ಭಕ್ತ ಮಹಾಶಯರು ತನು-ಮನ-ಧನಗಳಿಂದ ಸಹಕರಿಸಿ, ಶ್ರೀದೇವಿಯ ಹಾಗೂ ಜಗದ್ಗುರುಗಳ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಆಡಳಿತ ಮುಕ್ತೇಸರರು ಹಾಗೂ ಹತ್ತು ಸಮಸ್ತರು ವಿನಂತಿಸಿದ್ದಾರೆ.
