
ಕಳಸ ಲೈವ್ ವರದಿ
ಎಲ್ಲೋ ದೂರದ ಕೊಲ್ಲಿ ರಾಷ್ಟ್ರಗಳಲ್ಲಿ ಯುದ್ಧದ ಕಾರ್ಮೋಡ ಕವಿಯುತ್ತಿದ್ದರೆ, ಅದರ ನೇರ ಪರಿಣಾಮ ಈಗ ಮಲೆನಾಡಿನ ಪುಟ್ಟ ಪಟ್ಟಣ ಕಳಸದ ಮೇಲೂ ಬೀರತೊಡಗಿದೆ. ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ಗಳ ತೀವ್ರ ಅಭಾವದಿಂದಾಗಿ ಪಟ್ಟಣದ ಪ್ರಮುಖ ಹೋಟೆಲ್ಗಳು ಅನಿವಾರ್ಯವಾಗಿ ಬಾಗಿಲು ಮುಚ್ಚುವಂತಾಗಿದ್ದು, ಹೋಟೆಲ್ ಉದ್ಯಮ ಅಸ್ತವ್ಯಸ್ತಗೊಂಡಿದೆ.
ಕೊಲ್ಲಿ ರಾಷ್ಟ್ರಗಳಲ್ಲಿನ ಯುದ್ಧದ ಕಾವು ಜಾಗತಿಕ ಇಂಧನ ಮತ್ತು ಅನಿಲ ಮಾರುಕಟ್ಟೆಯ ಮೇಲೆ ತೀವ್ರ ಹೊಡೆತ ನೀಡಿದೆ. ಇದರ ಎಫೆಕ್ಟ್ನಿಂದಾಗಿ ವಾಣಿಜ್ಯ ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಕಳಸಕ್ಕೆ ತಲುಪಬೇಕಾದ ಸಿಲಿಂಡರ್ಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲದ ಕಾರಣ ಹೋಟೆಲ್ ಮಾಲೀಕರು ಅಸಹಾಯಕರಾಗಿದ್ದಾರೆ.
ಕಳಸ ಒಂದು ಪ್ರಸಿದ್ಧ ಯಾತ್ರಾಸ್ಥಳ ಹಾಗೂ ಪ್ರವಾಸಿ ತಾಣವಾಗಿರುವುದರಿಂದ ಇಲ್ಲಿನ ಹೋಟೆಲ್ಗಳಿಗೆ ನಿತ್ಯ ಸಾವಿರಾರು ಜನರು ಭೇಟಿ ನೀಡುತ್ತಾರೆ. ಆದರೆ ಗ್ಯಾಸ್ ಸಿಲಿಂಡರ್ ಇಲ್ಲದೆ ಅಡುಗೆ ತಯಾರಿಸಲು ಸಾಧ್ಯವಾಗದ ಕಾರಣ, ಅನಿವಾರ್ಯವಾಗಿ ಹೋಟೆಲ್ ಮಾಲೀಕರು ತಮ್ಮ ಸಂಸ್ಥೆಗಳಿಗೆ ಬೀಗ ಹಾಕಿದ್ದಾರೆ. ಇದರಿಂದಾಗಿಹೊರ ಊರುಗಳಿಂದ ಬರುವ ಭಕ್ತಾದಿಗಳು ಮತ್ತು ಪ್ರವಾಸಿಗರು ಆಹಾರಕ್ಕಾಗಿ ಪರದಾಡುವಂತಾಗಿದೆ. ಹೋಟೆಲ್ಗಳನ್ನೇ ನಂಬಿಕೊAಡಿದ್ದ ಕಾರ್ಮಿಕರ ಜೀವನೋಪಾಯಕ್ಕೆ ಹೊಡೆತ ಬಿದ್ದಿದೆ. ಕೆಲಸವಿಲ್ಲದೆ ಮನೆಯಲ್ಲೇ ಕುಳಿತುಕೊಳ್ಳುವ ಪರಿಸ್ಥಿತಿ ಬಂದೊದಗಿದೆ.
ಹೊಟೇಲ್ ಉಧ್ಯಮವನ್ನೆ ನಂಬಿ ಜೀವನ ಸಾಗಿಸುತ್ತಿದ್ದೇವೆ.ಇದಕ್ಕಾ ಸಾಲ ಮಾಡಿದ್ದೇವೆ.ಆದರೆ ಈಗ ಗ್ಯಾಸ್ ಸಿಗದೆ ಇರುವ ಕಾರಣ ಹೊಟೇಲ್ ಮುಚ್ಚುವಂತಾಗಿದೆ.ನಮ್ಮ ಕಷ್ಟಗಳನ್ನು ಯಾರ ಬಳಿ ಹೇಳೋಣ ಎಂದು ನೋವಿನಿಂದ ಹೇಳುತ್ತಾರೆ ಮಲ್ನಾಡ್ ಮನೆ ಹೊಟೇಲ್ ಮಾಲಿಕರು.
ಒಂದೆಡೆ ಅಗತ್ಯ ವಸ್ತುಗಳ ಬೆಲೆ ಏರಿಕೆ, ಇನ್ನೊಂದೆಡೆ ಇಂಧನ ಅಭಾವದಿಂದಾಗಿ ಸಾಮಾನ್ಯ ಜನರ ಬದುಕು ದುಸ್ತರವಾಗಿದೆ. ಸಂಬAಧಪಟ್ಟ ಇಲಾಖೆಗಳು ಹಾಗೂ ಗ್ಯಾಸ್ ಏಜೆನ್ಸಿಗಳು ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಕನಿಷ್ಠ ವಾಣಿಜ್ಯ ಬಳಕೆಯ ಗ್ಯಾಸ್ ಪೂರೈಕೆಯಲ್ಲಾದರೂ ಸಡಿಲಿಕೆ ಮಾಡಬೇಕೆಂದು ಕಳಸದ ನಾಗರಿಕರು ಹಾಗೂ ಉದ್ಯಮಿಗಳು ಆಗ್ರಹಿಸಿದ್ದಾರೆ
